ಗಾಂಧೀಜಿ ಜೀವನ ಚರಿತ್ರೆ ಅಧ್ಯಯನ ಮಾಡಿ

 ಹುತಾತ್ಮರ ದಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಜಿಲ್ಲಾ ಖಜಾನೆಯಲ್ಲಿರಿಸಲಾಗಿದ್ದ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮ ಹೊರತೆಗೆದು ಪುಷ್ಪಮಾಲೆಗಳಿಂದ ಶೃಂಗರಿಸಿ ಮೆರವಣಿಗೆ ಮಾಡಲಾಯಿತು. ಆರ್.ಐಶ್ವರ್ಯಾ, ಆರ್.ಎನ್. ಬಿಂದುಮಣಿ, ಮೀನಾಜ್ ಪ್ರವೀಣ್ ಮತ್ತಿತರರಿದ್ದರು.
ಹುತಾತ್ಮರ ದಿನ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಜಿಲ್ಲಾ ಖಜಾನೆಯಲ್ಲಿರಿಸಲಾಗಿದ್ದ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮ ಹೊರತೆಗೆದು ಪುಷ್ಪಮಾಲೆಗಳಿಂದ ಶೃಂಗರಿಸಿ ಮೆರವಣಿಗೆ ಮಾಡಲಾಯಿತು. ಆರ್.ಐಶ್ವರ್ಯಾ, ಆರ್.ಎನ್. ಬಿಂದುಮಣಿ, ಮೀನಾಜ್ ಪ್ರವೀಣ್ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Gandhiji
ಮಡಿಕೇರಿ: ಮಹಾತ್ಮ ಗಾಂಧೀಜಿ ಅವರು ಹಾಕಿಕೊಟ್ಟ ಆದರ್ಶದಲ್ಲಿ ಪ್ರತಿಯೊಬ್ಬರೂ ಮುನ್ನಡೆಯಬೇಕು, ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯಾ ಸಲಹೆ ನೀಡಿದರು.
ಜಿಲ್ಲಾಡಳಿತ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ವೋದಯ ಸಮಿತಿ ವತಿಯಿಂದ ಇಲ್ಲಿ ನಡೆದ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹುತಾತ್ಮರ ದಿನ ಬಹಳ ವಿಶೇಷವಾಗಿದೆ. ಮಹಾತ್ಮ ಗಾಂಧೀಜಿ ಸರ್ವರಿಗೂ ಒಳಿತು ಮಾಡಿದ ಸರ್ವೋದಯ ದಿನವಾಗಿದೆ. ಗಾಂಧೀಜಿ ಅಹಿಂಸೆ ಮೂಲಕ ಸ್ವಾತಂತ್ರ್ಯ ತಂದುಕೊಟ್ಟರು. ಸರ್ವಜನರ ಸುಖವನ್ನು ಅವರು ಬಯಸಿದ್ದರು. ಧರ್ಮ, ನ್ಯಾಯಕ್ಕೆ ಒತ್ತು ನೀಡಿದ್ದರು. ವಿದೇಶಕ್ಕೆ ಹೋದಾಗ ಭಾರತ ಎಂದರೆ ಗಾಂಧೀಜಿ ಅವರ ನಾಡಿನಿಂದ ಬಂದವರೆಂದು ಗುರುತಿಸುತ್ತಾರೆ. ಇದೊಂದು ರೀತಿ ಅಸ್ಮಿತೆ ಆಗಿದೆ ಎಂದು ಹೇಳಿದರು.
ಎಸ್‌ಪಿ ಆರ್.ಎನ್.ಬಿಂದುಮಣಿ ಮಾತನಾಡಿ, ಪ್ರತಿಯೊಬ್ಬರೂ ಗಾಂಧಿ ಮಾರ್ಗದಲ್ಲಿ ನಡೆಯಬೇಕು. ಮುಂದಿನ ಪೀಳಿಗೆಗೆ ಗಾಂಧೀಜಿಯ ಆದರ್ಶ ತತ್ವಗಳನ್ನು ತಿಳಿಸಬೇಕು. ಗಾಂಧೀಜಿಯ ಆಶಯಗಳು, ಸ್ವಾತಂತ್ರೃಕ್ಕಾಗಿ ನೀಡಿರುವ ಕೊಡುಗೆಗಳು ಮತ್ತಿತರ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು. ಗಾಂಧೀಜಿಯ ಶಾಂತಿ ಮತ್ತು ಅಹಿಂಸೆಯಲ್ಲಿ ಪ್ರಸ್ತುತ ಜಗತ್ತು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಪರಿಹಾರ ಇದೆ ಎಂದರು.
ಸರ್ವೋದಯ ಸಮಿತಿ ನಿಕಟಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸುಮಾರು 68 ವರ್ಷಗಳಿಂದ ಹುತಾತ್ಮರ ದಿನದ ಪ್ರಯುಕ್ತ ಮಹಾತ್ಮ ಗಾಂಧೀಜಿಯ ಚಿತಾಭಸ್ಮ ಮೆರವಣಿಗೆ ಹಮ್ಮಿಕೊಳ್ಳಲಾಗುತ್ತಿದೆ. ಗಾಂಧಿ ಸ್ಮಾರಕ ಉದ್ಯಾನವನ ನಿರ್ಮಾಣವಾದ ನಂತರ ಚಿತಾಭಸ್ಮವನ್ನು ಇಟ್ಟು ಗೌರವಿಸಲಾಗುತ್ತದೆ. ಗಾಂಧೀ ಸ್ಮಾರಕ ಉದ್ಯಾನವನ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಆ ನಿಟ್ಟಿನಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಸರ್ವೋದಯ ಸಮಿತಿ ಪ್ರಧಾನ ಕಾರ್ಯದರ್ಶಿ ಮುನಿರ್ ಅಹ್ಮದ್ ಮಾತನಾಡಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಖಜಾನೆಯಲ್ಲಿರಿಸಲಾಗಿದ್ದ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮ ಹೊರತೆಗೆದು ಪುಷ್ಪಮಾಲೆಗಳಿಂದ ಶೃಂಗರಿಸಿ ಗೌರವ ಸಮರ್ಪಿಸಲಾಯಿತು.
ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ಸದಸ್ಯರ ನೇತೃತ್ವದಲ್ಲಿ ಪೊಲೀಸ್ ವಾದ್ಯದೊಂದಿಗೆ ನಗರದ ಮಂಗೇರಿರ ಮುತ್ತಣ್ಣ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಮುಖ್ಯ ರಸ್ತೆ ಮೂಲಕ ಚಿತಾಭಸ್ಮವನ್ನು ಕೊಂಡೊಯ್ದು ಗಾಂಧಿ ಮಂಟಪ ಬಳಿ ಇರಿಸಿ ಪೊಲೀಸ್ ಗೌರವದೊಂದಿಗೆ ನಮನ ಸಲ್ಲಿಸಲಾಯಿತು. ಬಳಿಕ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಗಣ್ಯರು ನೆರವೇರಿಸಿದರು.
ಪೊಲೀಸ್ ಮೀಸಲು ಪಡೆಯ ಸಬ್ ಇನ್ಸ್‌ಪೆಕ್ಟರ್ ಎಚ್.ಬಿ.ಗಣೇಶ್ ಮತ್ತು ತಂಡದವರು ಮೂರು ಸುತ್ತು ಕುಶಾಲತೋಪು ಹಾರಿಸುವ ಮೂಲಕ ರಾಷ್ಟ್ರಪಿತನಿಗೆ ಪೊಲೀಸ್ ಗೌರವಾರ್ಪಣೆ ಸಲ್ಲಿಸಿದರು. ನಂತರ ಮೌನಾಚರಣೆ ನಡೆಯಿತು. ಪೊಲೀಸ್ ವಾದ್ಯ ತಂಡದವರು ರಾಷ್ಟ್ರಗೀತೆ ಹಾಡಿದರು. ಬಳಿಕ ಸರ್ವಧರ್ಮ ಪ್ರಾರ್ಥನೆ ನಡೆಯಿತು, ಭಜನಾ ಗಾಯನವನ್ನು ಮೈತಿಲಿರಾವ್ ನೇತೃತ್ವದಲ್ಲಿ ಸಂತ ಮೈಕಲರ ಶಾಲೆ ಹಾಗೂ ಕ್ರೆಸೆಂಟ್ ಶಾಲೆಯ ಗೈಡ್ಸ್ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಸರ್ವಧರ್ಮ ಗುರುಗಳಿಂದ ಭಗವದ್ಗೀತೆ(ಸಂತೋಷ್ ಭಟ್), ಬೈಬಲ್(ಸಾಗಯ ಮೇರಿ), ಕುರಾನ್(ಇಸಾಕ್ ಅಹ್ಮದ್) ಸಂದೇಶಗಳನ್ನು ಬೋಧಿಸಿದರು.
ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ, ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು, ಜಿಲ್ಲಾ ಖಜಾನಾಧಿಕಾರಿ ರಘುನಾಥ್, ಪೌರಾಯುಕ್ತ ಎಚ್.ಆರ್.ರಮೇಶ್, ತಹಸೀಲ್ದಾರ್ ಶ್ರೀಧರ್, ಪೊಲೀಸ್ ಅಧಿಕಾರಿ ರಾಜು, ಪ್ರೇಮಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ಮಣಜೂರು ಮಂಜುನಾಥ್, ಸರ್ವೋದಯ ಸಮಿತಿ ಸದಸ್ಯರು ಇತರರು ಇದ್ದರು.
ರಾಷ್ಟ್ರಪಿತನ ಭಾಷಣ ಆಲಿಸಿದ್ದ ಎಂ.ಎನ್.ಸುಬ್ರಹ್ಮಣಿ
ಮಹಾತ್ಮ ಗಾಂಧಿ ಮಡಿಕೇರಿಗೆ ಆಗಮಿಸಿದ್ದ ಸಂದರ್ಭ ಅವರ ಭಾಷಣವನ್ನು ಖುದ್ದಾಗಿ ಆಲಿಸಿದ್ದ ಸ್ವಾತಂತ್ರೃ ಹೋರಾಟಗಾರ ಎಂ.ಎನ್.ಸುಬ್ರಹ್ಮಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. 1934ರಲ್ಲಿ ಮಹಾತ್ಮ ಗಾಂಧೀಜಿ ಕೊಡಗಿನ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದ ಸಂದರ್ಭ ಮಡಿಕೇರಿಗೂ ಬಂದಿದ್ದರು. ಈಗ ಗಾಂಧಿ ಸ್ಮಾರಕ ನಿರ್ಮಾಣ ಆಗುತ್ತಿರುವ ಸ್ಥಳದಲ್ಲೇ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಸಂದರ್ಭ ಆಗ ಪಕ್ಕದ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದ ಎಂ.ಎನ್.ಸುಬ್ರಹ್ಮಣಿ ಗಾಂಧೀಜಿ ಅವರ ಭಾಷಣಕ್ಕೆ ಕಿವಿಯಾಗಿದ್ದರು. ಗಾಂಧಿ ವಿಚಾರಧಾರೆಗಳಿಗೆ ಮಾರುಹೋಗಿದ್ದ ಅವರು ಈಗಲೂ ಅಪ್ಪಟ ಗಾಂಧಿವಾದಿಯಾಗಿಯೇ ಬದುಕುತ್ತಿದ್ದಾರೆ. ಮಹಾತ್ಮ ಅಂದು ಕಾರಿನಿಂದ ಇಳಿದು ಈ ನೆಲಕ್ಕೆ ಕಾಲಿಟ್ಟಿದ್ದು, ಅವರಿಗೆ ಅಂದು ಜಿಲ್ಲೆಯಲ್ಲಿ ಸಿಕ್ಕಿದ್ದ ಸ್ವಾಗತ, ಅವರು ಬಂದು ಹೋದ ನಂತರದ ಬದಲಾವಣೆಗಳು ಎಲ್ಲವೂ ಅವರ ಸ್ಮತಿಪಟಲದಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ. ಗಾಂಧೀಜಿ ಹುತಾತ್ಮರಾದ ನಂತರ ಮಡಿಕೇರಿಯಲ್ಲಿ ಅವರದ್ದೊಂದು ಸ್ಮಾರಕ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದವರಲ್ಲಿ ಎಂ.ಎನ್. ಸುಬ್ರಹ್ಮಣಿ ಕೂಡ ಪ್ರಮುಖರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net