ವಿರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಬಾಚುರ. ಎಸ್.ಪೂಣಚ್ಚ ಎಂ.ಕೆ. ಪದ್ಮ, ಅನುಪಮ ತಿಮ್ಮಯ್ಯ, ಎಂ.ಪಿ. ಡೈನ ಸೋಮಯ್ಯ ಮತ್ತಿತರರು ಇದ್ದರು.
ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ, ಸಮಯ ಪರಿಪಾಲನೆ ರೂಢಿಸಿಕೊಂಡು ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು ಎಂದು ನಿವೃತ್ತ ಕ್ಯಾಪ್ಟನ್ ಬಾಚುರ. ಎಸ್.ಪೂಣಚ್ಚ ಹೇಳಿದರು. ಶನಿವಾರ ನಡೆದ ವಿರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಎನ್‌ಎಸ್‌ಎಸ್ ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಮನೋಭಾವ ಬೆಳೆಸುತ್ತದೆ. ನಾಯಕತ್ವದ ಗುಣಗಳನ್ನು ವೃದ್ಧಿಸುತ್ತದೆ. ಶಿಸ್ತು, ಸಮಯಪಾಲನೆ ಮತ್ತು ಜವಾಬ್ದಾರಿ ಕಲಿಸುತ್ತದೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ, ಕಾನೂನುಬಾಹಿರ ಚಟುವಟಿಕೆಗಳಿಗೆ ಬಲಿಯಾಗದೆ ಉತ್ತಮ ಜೀವನವನ್ನು ನಡೆಸಬೇಕು. ದೇಶ ನಮಗೆ ಎಲ್ಲವನ್ನೂ ನೀಡಿದೆ. ಆದ್ದರಿಂದ ದೇಶಕ್ಕೆ ಸೇವೆ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ದೇಶ ಸೇವೆ ಎಂದರೆ ಕೇವಲ ಸೈನ್ಯಕ್ಕೆ ಸೇರುವುದು ಮಾತ್ರವಲ್ಲ. ಕಾನೂನು ಪಾಲಿಸುವುದು, ಸಮಾಜದ ಒಳಿತಿಗಾಗಿ ದುಡಿಯುವುದು ಹಾಗೂ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುವುದೂ ದೇಶ ಸೇವೆಯೇ ಆಗಿದೆ. ಯುವಜನರು ದೇಶಪ್ರೇಮ, ಶಿಸ್ತು ಮತ್ತು ಸೇವಾ ಮನೋಭಾವ ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲೆ ಎಂ.ಕೆ. ಪದ್ಮ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು. ಸಮಾಜದ ಹಿತಕ್ಕಾಗಿ ನಿಸ್ವಾರ್ಥವಾಗಿ ಸೇವೆ ಮಾಡುವ ಕಾರ್ಯ ಮಾಡಬೇಕು. ಸಮಾಜದ ಹಿತವನ್ನು ಸ್ವಹಿತಕ್ಕಿಂತ ಮೇಲುಗೈಯಲ್ಲಿ ಇಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ವಕೀಲರಾದ ಅನುಪಮ ಕಿಶೋರ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಕೆ. ಪಿ. ಗಾಯತ್ರಿ, ಕೆ.ಪಿ. ಬೋಪಣ್ಣ, ಪಮಿತಾ, ರಾಷ್ಟೀಯ ಸೇವಾ ಯೋಜನ ಘಟಕದ ಕಾರ್ಯಕ್ರಮಾಧಿಕಾರಿ ಅನುಪಮ ತಿಮ್ಮಯ್ಯ, ಉಪನ್ಯಾಸಕಿ ಎಂ.ಪಿ. ಡೈನ ಸೋಮಯ್ಯ, ಉಪನ್ಯಾಸಕ ವೃಂದದವರು, ಸ್ವಯಂಸೇವಕರು ಹಾಗೂ ವಿದ್ಯಾರ್ಥಿಗಳು ಇದ್ದರು.