ಸೋಮವಾರಪೇಟೆ ಒಕ್ಕಲಿಗರ ಸಮುದಾಯಭವನದಲ್ಲಿ ನಡೆದ ರೈತ ಹೋರಾಟ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ರೈತರು.
Published on:
Copied
Follow Us
ಸೋಮವಾರಪೇಟೆ:
ಕಸ್ತೂರಿರಂಗನ್ ವರದಿ ಆಧರಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ ಘೋಷಿಸುವ ಕರಡು ಅಧಿಸೂಚನೆಯನ್ನು ತಿರಸ್ಕರಿಸುವಂತೆ ಕೊಡಗು ಜಿಲ್ಲಾ ರೈತ ಹೋರಾಟ ಸಮಿತಿ ಆಗ್ರಹಿಸಿತು.
ಸೋಮವಾರಪೇಟೆ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಕೆ.ಬಿ. ಸುರೇಶ್ ಮಾತನಾಡಿ, ಕಸ್ತೂರಿರಂಗನ್ ವರದಿ ಜಾರಿಯಾದರೆ ಪಶ್ಚಿಮ ಘಟ್ಟ ಪ್ರದೇಶದ ಸ್ಥಳೀಯರು ತಮ್ಮ ಗ್ರಾಮಗಳನ್ನು ತೊರೆಯುವ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ರೈತರ ಬದುಕಿನ ಅಳಿವು-ಉಳಿವಿನ ಪ್ರಶ್ನೆಯಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳು ರಾಜಕೀಯಕ್ಕಿಂತ ರೈತರ ಬದುಕಿಗೆ ಆದ್ಯತೆ ನೀಡಿ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಒತ್ತಾಯಿಸಿದರು.
ರೈತರ ಸಮಸ್ಯೆಗಳ ಕುರಿತು ಕಂದಾಯ ಮತ್ತು ಅರಣ್ಯ ಸಚಿವರು, ಮುಖ್ಯಮಂತ್ರಿ ಹಾಗೂ ಸಂಸದರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಕಸ್ತೂರಿರಂಗನ್ ವರದಿಯ ವಿಚಾರದಲ್ಲೂ ಹೋರಾಟ ಮುಂದುವರಿಸಲಾಗುವುದು. ಹೋರಾಟಕ್ಕೆ ಜನರು ಸೇರಬಾರದು ಎಂದು ರಾಜಕೀಯ ಮುಖಂಡರು ಒತ್ತಡ ಹೇರುತ್ತಿದ್ದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದರು.
ಸಮಿತಿ ಕಾನೂನು ಸಲಹೆಗಾರ ಬಿ.ಜೆ.ದೀಪಕ್ ಮಾತನಾಡಿ, ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದ್ದು, ಇದೀಗ 38 ದಿನಗಳು ಮಾತ್ರ ಬಾಕಿಯಿವೆ. ಪ್ರತಿಯೊಂದು ಗ್ರಾಮ ಹಾಗೂ ಸಂಘ-ಸಂಸ್ಥೆಗಳ ಮೂಲಕ ಆಕ್ಷೇಪಣೆ ಸಲ್ಲಿಸಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೂ ಆಕ್ಷೇಪಣೆ ಸಲ್ಲಿಸುವ ಅಗತ್ಯವಿದೆ. 7ನೇ ಕರಡು ಪ್ರತಿ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲರೂ ತಪ್ಪದೇ ಆಕ್ಷೇಪಣೆ ಸಲ್ಲಿಸಬೇಕು ಎಂದು ಹೇಳಿದರು.
ಬಗ್ಗನ ಅನಿಲ್ ಮಾತನಾಡಿ, ಕಸ್ತೂರಿರಂಗನ್ ವರದಿ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ವ್ಯಾಪಕ ಪರಿಣಾಮ ಬೀರಲಿದೆ. ಹಿಂದಿನ ವರದಿಗಳಂತೆ ಪ್ರದೇಶಗಳನ್ನು ರೆಡ್, ಆರೆಂಜ್ ಹಾಗೂ ಗ್ರೀನ್ ಜೋನ್‌ಗಳಾಗಿ ವಿಂಗಡಿಸುವಂತಾಗಬಾರದು. ಈ ಕುರಿತು ಶಾಸಕರು ಹಾಗೂ ಸಂಸದರನ್ನು ಒಳಗೊಂಡ ಸಭೆ ನಡೆಸಬೇಕು. ಅರಣ್ಯ ಸಚಿವರು ಹಾಗೂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಬೇಕು. ಅಗತ್ಯವಿದ್ದರೆ ಸುಪ್ರೀಂಕೋರ್ಟ್ ಗಮನಕ್ಕೂ ತರಬೇಕು ಎಂದು ಆಗ್ರಹಿಸಿದರು.
ಸಮಿತಿಯ ಮಿಥುನ್ ಹರಗ, ಅಬ್ಬೂರುಕಟ್ಟೆ ಬೋಜೆಗೌಡ, ದಿವಾಕರ್ ಕೂತಿ, ಕೆ.ಎಂ.ಲೋಕೇಶ್, ಎಸ್.ಬಿ.ಭರತ್ ಕುಮಾರ್, ವಿ.ಎಂ.ವಿಜಯ್ ಸೇರಿದಂತೆ ವಿವಿಧ ಗ್ರಾಮಗಳ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಇದ್ದರು.