ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೆಸಿಒಸಿಎ) ಅಡಿಯಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಕಾಯಿದೆ ಅಡಿಯಲ್ಲಿ ಮಡಿಕೇರಿ ನಗರ ಠಾಣಾ ವ್ಯಾಪ್ತಿಯಲ್ಲಿ ಕಳೆದ 10 ವರ್ಷದಿಂದ ರೌಡಿಶೀಟ್ ಆಗಿರುವ ಪ್ರಮೋದ್ ಅಲಿಯಾಸ್ ಡಿಸ್ಕ್, ದರ್ಶನ್ ಅಲಿಯಾಸ್ ಡಿಲ್ಲಿ ಹಾಗೂ ಕುಶಾಲನಗರ ಟೌನ್ ವ್ಯಾಪ್ತಿಯ ಷರೀಫ್ ಅಲಿಯಾಸ್ ಬಿಲಾಲ್ ವಿರುದ್ಧ ವರದಿ ಸಲ್ಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಇದೀಗ ಮೂವರು ಮಡಿಕೇರಿಯಲ್ಲಿ ನ್ಯಾಯಾಂಗ ಬಂಧನಲ್ಲಿದ್ದಾರೆ. ಪ್ರಮೋದ್ ವಿರುದ್ಧ 18 ಪ್ರಕರಣ, ದರ್ಶನ್ ವಿರುದ್ಧ 9 ಪ್ರಕರಣಗಳಿದ್ದು, ಇವರಿಬ್ಬರು ಒಟ್ಟಾಗಿ ಸೇರಿ 9 ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಷರೀಫ್ ವಿರುದ್ಧ 11 ಪ್ರಕರಣಗಳಿವೆ. 10 ವರ್ಷದಿಂದ ಗ್ರಾಮಾಂತರ ಠಾಣೆಯಲ್ಲಿ ರೌಡಿಶೀಟ್ ಪಟ್ಟಿಯಲ್ಲಿದ್ದಾನೆ. ಅಪರಾಧ ಚಟುವಟಿಕೆಯನ್ನು ನಿಲ್ಲಿಸದಿದ್ದ ಹಿನ್ನೆಲೆ ಕಾಯಿದೆ ಅಡಿ ಬಂಧಿಸಿ ಕ್ರಮಕೈಗೊಳ್ಳಲಾಗಿದೆ.