ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಮಡಿಕೇರಿಯಲ್ಲಿ ನಡೆದ ವಿಶೇಷ ಚೇತನರ ರಾಜ್ಯಮಟ್ಟದ ಕ್ರೀಡಾಕೂಟ ಸಂದರ್ಭ ಪಾಲ್ಗೊಂಡಿದ್ದ ಗಣ್ಯರು ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದರು. ಆರ್.ಎನ್. ಬಿಂದುಮಣಿ, ಗಂಗಾ ಚಂಗಪ್ಪ, ಕೆ.ಜಿ. ರಾಜೀವ್, ಬೋಪಯ್ಯ ಮತ್ತಿತರರು ಇದ್ದರು.
Published on:
Copied
Follow Us
ಮಡಿಕೇರಿ:
ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶೇಷ ಚೇತನರಿಗೆ ರಾಜ್ಯಮಟ್ಟದ ಕ್ರೀಡಾಕೂಟ ಸೋಮವಾರ ನಡೆಯಿತು. ಪಾಲಿಬೆಟ್ಟ, ಮಂಗಳೂರು, ಮಡಿಕೇರಿ, ಮಂಡ್ಯ, ಮೈಸೂರು, ಕೊಡಗು ಮತ್ತು ಬೈಲುಕುಪ್ಪೆಯ ಟಿಬೇಟಿಯನ್ ವಸತಿ ಶಾಲೆ ಸೇರಿದಂತೆ ಸುಮಾರು 8 ಶಾಲೆಯ 150 ಕ್ಕೂ ಹೆಚ್ಚು ವಿಶೇಷ ಚೇತನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.
8 ರಿಂದ 11 ವರ್ಷ, 12 ರಿಂದ 15 ವರ್ಷ, 16 ರಿಂದ 21 ವರ್ಷ, 22 ರಿಂದ 29 ವರ್ಷ ಹಾಗೂ 30 ವರ್ಷದಿಂದ ಮೇಲ್ಪಟ್ಟ ವಿಶೇಷಚೇತನರು 100 ಮೀಟರ್ ಓಟ, 200 ಮೀಟರ್ ಓಟ, ಶಾಟ್‌ಫೂಟ್, ಲಾಂಗ್ ಜಂಪ್, ರಿಲೇ ಮತ್ತಿತರ ಕ್ರೀಡಾಕೂಟದಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ವಿಶೇಷಚೇತನರು ಯಾವುದೇ ಕಾರಣಕ್ಕೂ ವಿಚಲಿತರಾಗದೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕವಾಗಿ ದೃಢತೆ ಕಾಣಬಹುದಾಗಿದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ ಪಾಲ್ಗೊಳ್ಳುವುದು ಅತೀ ಮುಖ್ಯ. ಆ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಮುಂದೆ ಬರಬೇಕು.
ಯಾವುದೇ ಕ್ಷೇತ್ರದಲ್ಲಿ ಯಾರೇ ಆದರೂ ಸಹ ತಂಡವಾಗಿ ಕೆಲಸ ಮಾಡಿದಾಗ ಯಶಸ್ಸುಗಳಿಸಲು ಸಾಧ್ಯ. ಆ ದಿಸೆಯಲ್ಲಿ ಸುಂದರ ಬದುಕು ಹಾಗೂ ಆರೋಗ್ಯಯುತ ಜೀವನ ನಡೆಸಲು ಕ್ರೀಡೆ, ಸಾಹಿತ್ಯ, ಕಲೆ, ಬರವಣಿಗೆ ಹೀಗೆ ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಕ್ರೀಯಾಶೀಲ ಹಾಗೂ ಸೃಜನಶೀಲವಾಗಿ ಬದುಕಬಹುದು. ಪ್ರತಿಯೊಬ್ಬರಿಗೂ ವ್ಯಾಯಾಮ ಅತ್ಯಗತ್ಯ. ಆದ್ದರಿಂದ ಒಂದಲ್ಲ ಒಂದು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕೂರ್ಗ್ ಫೌಂಡೇಶನ್ ಟ್ರಸ್ಟಿ ಗಂಗಾ ಚಂಗಪ್ಪ ಮಾತನಾಡಿ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಹೆಚ್ಚಿನ ಆಯಸ್ಸು ಪಡೆಯಬಹುದಾಗಿದೆ ಎಂದು ಹೇಳಿದರು.
ಟಾಟಾ ಕಾಫಿ ಸಂಸ್ಥೆಯ ಜನರಲ್ ಮ್ಯಾನೇಜರ್ ಕೆ.ಜಿ. ರಾಜೀವ್ ಮಾತನಾಡಿ ವಿಶೇಷ ಚೇತನರು ಲವಲವಿಕೆಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವುದು ಮೆಚ್ಚುವಂತದ್ದು ಎಂದರು.
ಟಾಟಾ ಕಾಫಿ ಸಂಸ್ಥೆಯ ಉಪ ವ್ಯವಸ್ಥಾಪಕ ಬೋಪಯ್ಯ ಮಾತನಾಡಿದರು.
ಸಮಾರೋಪ ಸಮಾರಂಭದಲ್ಲಿ ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಪುಷ್ಪ ಕುಟ್ಟಣ್ಣ ಮಾತನಾಡಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಲೋಕೇಶ್, ಜಿಲ್ಲಾ ಸರ್ಜನ್ ಡಾ.ನಂಜುAಡಯ್ಯ, ಜಿಲ್ಲಾ ವಿಶೇಷ ಚೇತನರ ಅಧಿಕಾರಿ ಕೆ.ಜಿ. ವಿಮಲ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಇಎನ್‌ಟಿ ವಿಭಾಗದ ಮುಖ್ಯಸ್ಥೆ ಡಾ.ಶ್ವೇತಾ, ಟಾಟಾ ಕಾಫಿ ಸಂಸ್ಥೆಯ ವ್ಯವಸ್ಥಾಪಕ ಗೌತಮ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ, ಸ್ವಸ್ಥ ಸಂಸ್ಥೆಯ ವಿಶೇಷಚೇತನರ ಶಿಕ್ಷಕ ಬಿಜು ಇತರರು ಪಾಲ್ಗೊಂಡಿದ್ದರು.
ಇದೇ ವೇಳೆ ಬೋಧಿಸತ್ವ ಸಂಸ್ಥೆಯ ಅಧ್ಯಕ್ಷ ಕರ್ಮ ರಿಂಪೋಚೆ ಗಿಡಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿಹಿರಿಯ ಕಾಫಿ ಬೆಳೆಗಾರರು ಮತ್ತು ಸಮಾಜ ಸೇವಕರಾದ ಬೋಸ್ ಮಂದಣ್ಣ, ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ನಿರ್ವಾಹಕಿ ಐಶ್ವರ್ಯ ಬೋಪಯ್ಯ, ಶಿಕ್ಷಕರು, ಪೋಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಇತರರು ಇದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸ್ವಸ್ಥ ಸಂಥೆ ವಿದ್ಯಾರ್ಥಿಗಳಾದ ವೈ.ಎಂ. ದರ್ಶನ್, ಬಿ.ಎಂ. ಸಂಗೀತ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.