ಕೇಂದ್ರ ಸರ್ಕಾರದ ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರದಿಂದ ಅಡ್ಡಿ ಮಾಡುತ್ತಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆರೋಪಿಸಿದರು. ಗುರುವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಆಯೋಜಿಸುವ ಮಹತ್ವದ ಸಭೆಗಳಲ್ಲಿ ರಾಜ್ಯ ಸರ್ಕಾರ ಭಾಗವಹಿಸುವುದೇ ಇಲ್ಲ. ಇದು ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ. ಮೈಸೂರು-ಕುಶಾಲನಗರ ರೈಲ್ವೆ ಮಾರ್ಗ ಸೇರಿದಂತೆ ಹಲವು ಯೋಜನೆಗಳಿಗೆ ಅಗತ್ಯವಿರುವ ಭೂಸ್ವಾಧೀನಕ್ಕೂ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಕಾರಣ ನೀಡಿ ಯೋಜನೆಯ ವಿಳಂಬ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಮೈಸೂರು-ಕುಶಾಲನಗರ ರೈಲ್ವೆ ಮಾರ್ಗ ನಿರ್ಮಾಣ ಯೋಜನೆ ಸ್ಥಗಿತಗೊಳ್ಳುವಂತಾಗಿದೆ. ಆದರೆ ಇದು ಸ್ಥಗಿತವಾಗಲು ಬಿಡುವುದಿಲ್ಲ. ಇಲಾಖೆ ಮಾನದಂಡಗಳ ಪ್ರಕಾರ ಮೈಸೂರು-ಕುಶಾಲನಗರ ರೈಲ್ವೆ ಮಾರ್ಗ ಲಾಭದಾಯಕ ಅಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಇಲ್ಲಿ ಲಾಭಕ್ಕಿಂತ ಸಾಮಾಜಿಕ ದೃಷ್ಟಿಕೋನವೂ ಮುಖ್ಯವಾಗಿದ್ದು ವಿಷಯವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ಯೋಜನೆಗೆ ಮರುಜೀವ ಕೊಡಲಾಗುವುದು. ಈ ಯೋಜನೆಯಲ್ಲಿ ರೈಲು ಕುಶಾಲನಗರ ತನಕ ಮಾತ್ರ ಬರುವುದರಿಂದ ಕೊಡಗಿನ ಪರಿಸರದ ಮೇಲೆ ಯಾವುದೇ ಹಾನಿ ಆಗುವುದಿಲ್ಲ. ಹಾಗಾಗಿ ಈ ರೈಲು ತರಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು. ರಾಷ್ಟಿçÃಯ ಹೆದ್ದಾರಿ 275ರಲ್ಲಿ ಮಡಿಕೇರಿಯಿಂದ ಸಂಪಾಜೆ ತನಕ 18 ಕಡೆ 90 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗುವುದು. ಈ ಕಾಮಗಾರಿಗೆ ಸದ್ಯದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಮಾಹಿತಿ ನೀಡಿದರು.