ಶ್ರೀಸತ್ಯನಾರಾಯಣ ದೇಗುಲದ ವಾರ್ಷಿಕೋತ್ಸವ ಅದ್ದೂರಿ

ನೆಲ್ಯಹುದಿಕೇರಿ ಶ್ರೀ ಸತ್ಯನಾರಾಯಣ ದೇವಸ್ಥಾನದ ವಾರ್ಷಿಕೋತ್ಸವ ಪೂಜೆ ಅದ್ದೂರಿಯಾಗಿ ಜರುಗಿತು.
ನೆಲ್ಯಹುದಿಕೇರಿ ಶ್ರೀ ಸತ್ಯನಾರಾಯಣ ದೇವಸ್ಥಾನದ ವಾರ್ಷಿಕೋತ್ಸವ ಪೂಜೆ ಅದ್ದೂರಿಯಾಗಿ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ನೆಲ್ಯಹುದಿಕೇರಿಯಲ್ಲಿ ಪುರಾತನ ದೇವಸ್ಥಾನದಲ್ಲಿ ಸಂಭ್ರಮ
ಸಿದ್ದಾಪುರ: ಕೊಡಗಿನ ಏಕೈಕ ಪುರಾತನ ನೆಲ್ಯಹುದಿಕೇರಿ ಶ್ರೀಸತ್ಯನಾರಾಯಣ ದೇವಸ್ಥಾನದ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಅದ್ದೂರಿಯಾಗಿ ಜರುಗಿತು.
ತಂತ್ರಿಗಳಾದ ಬಿ.ಎಸ್.ವೆಂಕಟಕೃಷ್ಣ ನೇತೃತ್ವದಲ್ಲಿ ಮೂರು ದಿನ ಜರುಗಿದ ಪೂಜಾ ಕಾರ್ಯಕ್ರಮಗಳು ಗಣಹೋಮದೊಂದಿಗೆ ಶುಭಾರಂಭವಾಯಿತು. ನಂತರ ತಕ್ಕರ ಮನೆಯಿಂದ ಭಂಡಾರ ಇಳಿಸುವುದು, ಶುದ್ಧ ಕಳಸ, ಶ್ರೀ ದೇವರ ಬಲಿ ಬರುವುದು ಸೇರಿದಂತೆ ವಿವಿಧ ಆಚರಣೆಗಳು ಜರುಗಿತು.
ಕಾರ್ಯಕ್ರಮದ ಭಾಗವಾಗಿ ಸಾಮೂಹಿಕ ರಂಗಪೂಜೆ, ತೀರ್ಥಪ್ರಸಾದ ವಿತರಣೆ, ಇರುಬೆಳಕು, ಸಾಮೂಹಿಕ ಆಶ್ಲೇಷ ಬಲಿ ಹಾಗೂ ಮಹಾಪೂಜೆಗಳು ಭಕ್ತರ ಸಾನ್ನಿಧ್ಯದಲ್ಲಿ ನಡೆದವು. ಶ್ರೀಮೊದಮ್ಮ ದೇವಸ್ಥಾನದಲ್ಲಿ ಅಕ್ಕಿಹೇರುವುದು ಮತ್ತು ಮಹಾಪೂಜೆ ಬಳಿಕ, ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿ ನೆರಪು ಬಲಿ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ನೆರವೇರಿಸಲಾಯಿತು.
ಮುಂದೆ ದೇವಸ್ಥಾನದಿಂದ ಶ್ರೀ ಪೋದಮ್ಮ ದೇವಸ್ಥಾನಕ್ಕೆ ತೆರಳಿ ವಸಂತ ಪೂಜೆ, ಬಟ್ಟಲು ಕಾಣಿಕೆ ಸಲ್ಲಿಸಲಾಯಿತು. ಬಳಿಕ ಶ್ರೀ ದೇವರು ಕಾವೇರಿ ನದಿ ದಡದಲ್ಲಿ ಅವಭೃತ ಸ್ನಾನಕ್ಕೆ ತೆರಳಿದ ಸಂದರ್ಭ ಭಕ್ತರು ಪಾಲ್ಗೊಂಡರು. ದೇವಸ್ಥಾನದಲ್ಲಿ ಆರಾಟ್ ಬಲಿ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನಂತರ ಭಂಡಾರವನ್ನು ತಕ್ಕರ ಮನೆಗೆ ಮರು ತಲುಪಿಸುವ ಮೂಲಕ ಪ್ರಮುಖ ವಿಧಿಗಳು ಸಂಪನ್ನಗೊಂಡವು.
ಮೂರು ದಿನ ಜರುಗಿದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಭಾಗವಹಿಸಿದ್ದರು.
ತಕ್ಕರು ಟಿ.ಪಿ.ನಂಜಪ್ಪ, ಮುಖ್ಯಸ್ಥರಾದ ಟಿ.ಬಿ.ಗಣೇಶ್, ದೇವಸ್ಥಾನ ಸಮಿತಿ ಅಧ್ಯಕ್ಷ ಟಿ.ಜಿ.ಚಂದ್ರಶೇಖರ್, ಉಪಾಧ್ಯಕ್ಷ ವಿಜು ಕುಮಾರ್, ಕಾರ್ಯದರ್ಶಿ ಟಿ.ಜಿ.ವಿನೋದ್, ಜಂಟಿ ಕಾರ್ಯದರ್ಶಿ ಟಿ.ಇ.ಸತ್ಯಜಿತ್, ಖಜಾಂಚಿ ಕೆ.ಜೆ.ಸುಪ್ರೀಂ, ನಿರ್ದೇಶಕರಾದ ಮಾನಸಾ, ನಂದೀಶ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net