ನಂದ ಅವರು ಕೇವಲ ವಾಣಿಜ್ಯ ಬೆಳೆಯಲ್ಲಿ ಮಾತ್ರ ಹೆಚ್ಚಿನ ಆಸಕ್ತಿಯನ್ನು ಹೊಂದಿಲ್ಲ. ಬದಲಾಗಿ ಹಿಂದಿನ ಕಾಲದಿಂದಲೂ ಬಂದ ಭತ್ತ ಹಾಗೂ ತರಕಾರಿ ಬೆಳೆಯನ್ನು ಬೆಳೆಯುವುದರಲ್ಲೂ ಆಸಕ್ತಿಯನ್ನು ಹೊಂದಿದ್ದಾರೆ. ಅದರಲ್ಲೂ ಸಂಪೂರ್ಣ ಸಾವಯವ ಮಾದರಿಯನ್ನು ಅನುಸರಿಸಿಕೊಂಡು ಬೆಳೆಯನ್ನು ಬೆಳೆಯುತ್ತಿದ್ದಾರೆ. ಈ ಮೂಲಕ ಗದ್ದೆಯ ಫಲವತ್ತತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮರಗಳ ಹಸಿ ಸೊಪ್ಪು ಹಾಗೂ ಸಗಣಿ ಗೊಬ್ಬರವನ್ನು ಬಳಸುತ್ತಾರೆ. ಫಸಲಿನ ಬೆಳವಣಿಗೆಯ ಹಂತದಲ್ಲಿ ಜೀವಾಮೃತ ಹಾಗೂ ಎರೆಹುಳು ಗೊಬ್ಬರವನ್ನು ಒದಗಿಸುವುದರೊಂದಿಗೆ ಸಂಪೂರ್ಣವಾಗಿ ರಾಸಾಯನಿಕ ಮುಕ್ತವಾದ ಭತ್ತವನ್ನು ಬೆಳೆಯುತ್ತಿದ್ದಾರೆ. ಇವರ ಗದ್ದೆಯಲ್ಲಿ ಬಿಕೆಬಿ, ತನು , ಬಿಕೆಆರ್ , ಬಿಳಿಯ, ಇಂಟಾನ್ , ಅತೀರ, ತುಂಗಾ ಆರ್ ಎನ್ ಆರ್ ಗಳಂತಹ ವಿವಿಧ ತಳಿಯ ಭತ್ತವನ್ನು ವಾರ್ಷಿಕವಾಗಿ ಆಯ್ಕೆ ಮಾಡಿಕೊಂಡು 2-3 ತಳಿಗಳನ್ನು ಬೆಳೆಸುತ್ತಾರೆ. ಭತ್ತದ ಫಸಲು ಕಟಾವಿನ ನಂತರ ಗದ್ದೆಯಲ್ಲಿ ಬದನೆ, ಮೆಣಸು, ಸೋರೆಕಾಯಿ, ತೊಂಡೆಕಾಯಿ, ಬೂದಿ ಕುಂಬಳ , ನೂಕೋಲು , ಮೂಲಂಗಿ, ಸಿಹಿ ಕುಂಬಳ , ಸೌತೆಕಾಯಿಯಂತಹ ತರಕಾರಿ ಬೆಳೆಗಳನ್ನು ಬೆಳೆದು ಸ್ಥಳೀಯ ಮಾರುಕಟ್ಟೆ ಹಾಗೂ ವಿರಾಜಪೇಟೆ ನಗರದ ಮಾರುಕಟ್ಟೆಯಲ್ಲಿ ಮಾರಾಟವನ್ನು ಮಾಡುತ್ತಾರೆ .