ಮಳೆಗಾಗಿ ಇಗ್ಗುತಪ್ಪನಿಗೆ ವಿಶೇಷ ಪೂಜೆ

ಹೆಚ್ಚಿನ ಮಳೆಗಾಗಿ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಎ.ಎಸ್.ಪೊನ್ನಣ್ಣ, ಡಾ.ಮಂತರ್‌ಗೌಡ ರುದ್ರಾಭಿಷೇಕ ವಿಶೇಷ ಪೂಜೆ ಸಲ್ಲಿಸಿದರು.
ಹೆಚ್ಚಿನ ಮಳೆಗಾಗಿ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಎ.ಎಸ್.ಪೊನ್ನಣ್ಣ, ಡಾ.ಮಂತರ್‌ಗೌಡ ರುದ್ರಾಭಿಷೇಕ ವಿಶೇಷ ಪೂಜೆ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮಳೆಗಾಗಿ ಇಗ್ಗುತಪ್ಪನಿಗೆ ವಿಶೇಷ ಪೂಜೆ

ಮಡಿಕೇರಿ: ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಪಿ.ಎಂ.ನರೇಂದ್ರಸ್ವಾಮಿ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅವರು ಪುಣ್ಯಕ್ಷೇತ್ರ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಹೆಚ್ಚಿನ ಮಳೆಗಾಗಿ ಭಾನುವಾರ ರುದ್ರಾಭಿಷೇಕ ವಿಶೇಷ ಪೂಜೆ ಸಲ್ಲಿಸಿದರು.

ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಮುಖ್ಯ ಅರ್ಚಕರಾದ ಕುಶಾಲ್ ಭಟ್ ಅವರು ರುದ್ರಾಭಿಷೇಕ ವಿಶೇಷ ಪೂಜೆ ನೆರವೇರಿಸಿದರು. ಬೆಳಗ್ಗೆ ೬ ಗಂಟೆಗೆ ಆಗಮಿಸಿದ ಸಚಿವರು ಮತ್ತು ಶಾಸಕರು ದೇವಾಲಯದ ಪ್ರದಕ್ಷಿಣೆ ನಡೆಸಿ, ನಾಡಿನಾದ್ಯಂತ ಹೆಚ್ಚಿನ ಮಳೆಯಿಂದ ಜಲಾಶಯಗಳು ಭರ್ತಿಯಾಗಿ, ಅಧಿಕ ಬೆಳೆಯಾಗಿ ಎಲ್ಲರಲ್ಲಿಯೂ ಸಮೃದ್ಧಿ, ಸಂತಸ ತರುವಂತಾಗಲಿ ಎಂದು ಪಾಡಿ ಶ್ರೀ ಇಗ್ಗುತಪ್ಪ ದೇವರಲ್ಲಿ ಪ್ರಾರ್ಥಿಸಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು, ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ವತಿಯಿಂದ ಹೆಚ್ಚಿನ ಮಳೆಗಾಗಿ ಪುಣ್ಯಕ್ಷೇತ್ರ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ ವಿಶೇಷ ಪೂಜೆ ಸಲ್ಲಿಸಲಾಗಿದೆ. ತಾಯಿ ಕಾವೇರಿ ಹಾಗೂ ಪಾಡಿ ಶ್ರೀ ಇಗ್ಗುತಪ್ಪ ಪುಣ್ಯಭೂಮಿಯಲ್ಲಿ ಹೆಚ್ಚಿನ ಮಳೆಯಾದಲ್ಲಿ ನಾಡಿನ ಜಲಾಶಯಗಳು ಭರ್ತಿಯಾಗಿ, ಉತ್ತಮ ಬೆಳೆ ಜತೆಗೆ, ಕುಡಿಯಲು ನೀರು ಸಿಗಲಿದೆ. ಹಾಗಾಗಿ ಕಾವೇರಿ ಮತ್ತು ಇಗ್ಗುತಪ್ಪ ನಾಡಿನಲ್ಲಿ ಮುಂದಿನ ದಿನಗಳಲ್ಲಿಯಾದರೂ ಹೆಚ್ಚಿನ ಮಳೆಯಾಗಲಿ ಎಂದು ಪ್ರಾರ್ಥಿಸಲಾಗಿದೆ ಎಂದರು.
ನಾಡಿನ ಎಲ್ಲೆಡೆ ಮಳೆ ಸುರಿದು, ಜನ-ಜಾನುವಾರುಗಳಿಗೆ ಕುಡಿಯಲು ನೀರು, ಬೆಳೆ ಮತ್ತು ಮೇವು ದೊರೆಯುವಂತಾಗಿ ಸುಭಿಕ್ಷೆ ತರುವಂತಾಗಲಿ ಎಂದ ಅವರು, ಕಾವೇರಿ ನದಿ ಪಾತ್ರದಲ್ಲಿ ಸರಾಸರಿ ಮಳೆ ಆಗುವುದರಿಂದ ಅಂತರ ರಾಜ್ಯ ಜಲ ವಿವಾದಗಳು ಇತ್ಯರ್ಥವಾಗಿ, ಶೇ.೯೦ ರಷ್ಟು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ನುಡಿದರು.
ಸರ್ಕಾರ ಎಲ್ಲರ ವಿಶ್ವಾಸ ಗಳಿಸಿ, ನಂಬಿಕೆಯಿಂದ ಕಾರ್ಯ ನಿರ್ವಹಿಸುವಲ್ಲಿ ಶುಭ ಹೆಜ್ಜೆ ಇಟ್ಟಿದೆ. ಸಂಕಷ್ಟದ ಸಂದರ್ಭದಲ್ಲಿ ಪರಿಹಾರ ಅಗತ್ಯ, ಆ ದಿಸೆಯಲ್ಲಿ ದೇವರಲ್ಲಿ ಹೆಚ್ಚಿನ ಮಳೆಗಾಗಿ ಪ್ರಾರ್ಥಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಪ್ರತಿನಿತ್ಯ ಕಾಡು ಪ್ರಾಣಿಗಳ ಹಾವಳಿಯಿಂದ ಭಯದಿಂದ ಬದುಕುವಂತಾಗಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು ಕಾಡಾನೆ ಹಾವಳಿ ಶಾಶ್ವತ ನಿಯಂತ್ರಣಕ್ಕೆ ಸರ್ಕಾರ ಅಗತ್ಯ ಕ್ರಮವಹಿಸಿದೆ. ಆದರೂ ಪ್ರವಾಸಿಗರು, ಕಾರ್ಮಿಕರು ಸೇರಿದಂತೆ ಎಲ್ಲರೂ ಎಚ್ಚರ ವಹಿಸಬೇಕಿದೆ. ಕೆಲವು ಸಂದರ್ಭದಲ್ಲಿ ಅನಾಹುತ ಘಟನೆಗಳು ಸಂಭವಿಸುತ್ತವೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮುನ್ನೆಚ್ಚರ ವಹಿಸಬೇಕು ಎಂದರು.

ಅಖಿಲ್ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಭಕ್ತ ಜನ ಸಮಿತಿ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ, ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ರಾಜಾ ಪೂವಣ್ಣ, ನೆಲಜಿ ದೇವಾಲಯಗಳ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ, ಪ್ರಮುಖರಾದ ಬಿದ್ದಾಟಂಡ ಎಸ್.ತಮ್ಮಯ್ಯ, ಲವ ಚಿಣ್ಣಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net