ಎಚ್‌ಐವಿ ಮತ್ತು ಸಿಪಿಲ್ಸ್ ಕುರಿತು ಸ್ವಯಂ ಮೌಲ್ಯಮಾಪನಕ್ಕಾಗಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸೇವೆಗಳ ಮಾಹಿತಿ ನೀಡುವ ಬಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು. ಡಾ.ಸನತ್ ಕುಮಾರ್, ಡಾ.ಹರ್ಷವರ್ಧನ್ ಇತರರಿದ್ದರು.
ಮಡಿಕೇರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಇವರ ವತಿಯಿಂದ ವಿಶೇಷ ಆರೋಗ್ಯ ಕಾರ್ಯಕ್ರಮ ಗುರುವಾರ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್ ಉದ್ಘಾಟಿಸಿ, ಯುವಜನರಲ್ಲಿ ಎಚ್‌ಐವಿ ಸೋಂಕಿನ ತಡೆಗಟ್ಟುವಿಕೆ ಹಾಗೂ ನಿಯಂತ್ರಣದ ಮಹತ್ವ, ಏಡ್ಸ್ ಸುರಕ್ಷಾ ಪ್ರೋಗ್ರಾಮ್ ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಮೊಬಿಲೈಸೇಷನ್ ಚಟುವಟಿಕೆಗಳು ಹಾಗೂ ಜಿಲ್ಲೆಯಲ್ಲಿ ೯೫:೯೫:೯೯ ಗುರಿಯನ್ನು ಸಾಧಿಸುವ ಅಗತ್ಯತೆಯ ಕುರಿತು ಮಾಹಿತಿ ನೀಡಿದರು. ಎಚ್‌ಐವಿ ಮತ್ತು ಸಿಪಿಲ್ಸ್ ಕುರಿತು ಸ್ವಯಂ ಮೌಲ್ಯಮಾಪನಕ್ಕಾಗಿ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸೇವೆಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಐಸಿಟಿಸಿ ಮತ್ತು ಡಿಎಸ್‌ಆರ್‌ಸಿ ವೈದ್ಯಾಧಿಕಾರಿ ಡಾ.ಹರ್ಷವರ್ಧನ್ ಮಾತನಾಡಿ, ಯುವಜನರಲ್ಲಿ ಎಚ್‌ಐವಿ ಸೋಂಕಿನ ತಡೆಗಟ್ಟುವಿಕೆ ಕುರಿತು ಮಾಹಿತಿ ನೀಡುವುದರ ಜೊತೆಗೆ, ಎಚ್‌ಐವಿ/ಏಡ್ಸ್ ಸಂಬಂಧಿತವಾಗಿ ಲಭ್ಯವಿರುವ ಪರೀಕ್ಷೆ, ಸಮಾಲೋಚನೆ ಹಾಗೂ ಚಿಕಿತ್ಸಾ ಸೇವೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ಅಲ್ಲದೆ, ಎಚ್‌ಐವಿ/ಏಡ್ಸ್ ಕುರಿತು ಮಾಹಿತಿ ಮತ್ತು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ ೧೦೯೭ ಅನ್ನು ಬಳಸುವಂತೆ ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಎಚ್‌ಐವಿ, ಸೀಪಿಲ್ಸ್, ಎನ್‌ಸಿಡಿ, ಟಿಬಿ ಹಾಗೂ ಇತರೆ ಆರೋಗ್ಯ ಸೇವೆಗಳ ತಪಾಸಣೆ ಮತ್ತು ಅರಿವು ಕಾರ್ಯಕ್ರಮ ನಡೆಸಲಾಯಿತು. ಅಗತ್ಯವಿರುವವರಿಗೆ ಸಂಬಂಧಪಟ್ಟ ಆರೋಗ್ಯ ಸೇವೆಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಮೇಲ್ವಿಚಾರಕರು ಡಿಎಪಿಸಿಯು, ಸಿಪಿಒ, ಐಸಿಟಿಸಿ, ಡಿಎಸ್‌ಆರ್‌ಸಿ, ಎಆರ್‌ಟಿ, ಡಿಎಪಿಸಿಯು, ಎನ್‌ಟಿಇಪಿ ಹಾಗೂ ಸಿಎಸ್‌ಸಿ ಸಿಬ್ಬಂದಿಗಳು ಭಾಗವಹಿಸಿ, ಆರೋಗ್ಯ ತಪಾಸಣೆ, ಸಮಾಲೋಚನೆ, ಜಾಗೃತಿ ಮತ್ತು ವಿವಿಧ ಆರೋಗ್ಯ ಸೇವೆಗಳನ್ನು ಒದಗಿಸಿದರು.