ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸಲು ಗಮನ ನೀಡಿ

ಸೋಮವಾರಪೇಟೆ ಐಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಾವೇ ತಯಾರಿಸಿದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ಕೃಷ್ಣಪ್ಪ, ಯಶವಂತ್, ರಂಜಿನಿ, ವಸಂತ್ ಇದ್ದರು.
ಸೋಮವಾರಪೇಟೆ ಐಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಾವೇ ತಯಾರಿಸಿದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ಕೃಷ್ಣಪ್ಪ, ಯಶವಂತ್, ರಂಜಿನಿ, ವಸಂತ್ ಇದ್ದರು.
Published on
ಸೋಮವಾರಪೇಟೆ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಸಂಶೋಧನಾ ಪ್ರವೃತ್ತಿ ಬೆಳೆಸಲು ಶಿಕ್ಷಕರು ವಿಶೇಷ ಗಮನ ಹರಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಸಲಹೆ ನೀಡಿದರು.
ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 2025-26 ನೇ ಸಾಲಿನ ರಾಷ್ಟ್ರೀಯ ಆವಿಷ್ಕಾರ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಐಗೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಸಂಘದ ಆಶ್ರಯದಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ವಿಜ್ಞಾನದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಕಲಿಕೆ ಬಹಳ ಮುಖ್ಯವಾಗಿದ್ದು, ಶಿಕ್ಷಕರು ವಿಜ್ಞಾನದ ಬಗ್ಗೆ ಮಕ್ಕಳಿಗೆ ಹೆಚ್ಚಿನ ತಿಳುವಳಿಕೆ ನೀಡುವ ಮೂಲಕ ಅವರಲ್ಲಿ ಪ್ರಾಯೋಗಿಕ ಸಲಕರಣೆ ಬಳಸುವ ಮೂಲಕ ಅವರಲ್ಲಿ ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಬೇಕು ಎಂದರು. ಸಲಹೆ ನೀಡಿದರು.
ಶಾಲೆಗಳಲ್ಲಿ ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕಲಿಕೆಯ ಕುತೂಹಲವನ್ನು ಹುಟ್ಟುಹಾಕಿ, ಪ್ರಾಯೋಗಿಕ ಕಲಿಕೆಯನ್ನು ಪ್ರೇರೇಪಿಸಿ ಬೆಳೆಸುವ ಮತ್ತು ವೈಜ್ಞಾನಿಕ ಚಿಂತನೆಯನ್ನು ಉತ್ತೇಜಿಸುವ ಪ್ರಮುಖ ಚಟುವಟಿಕೆಗಳಾಗಿ ರೂಪುಗೊಳ್ಳುತ್ತವೆ ಎಂದು ಹೇಳಿದರು.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಮೂಲಕ ಸಮಾಜದಲ್ಲಿ ಬೇರೂರಿರುವ ಮೌಢ್ಯ, ಕಂದಾಚಾರದಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಧ್ವನಿ ಎತ್ತಿ ಸಮಾಜದಲ್ಲಿ ವೈಜ್ಞಾರಿಕತೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಬಳಸಿದರೆ ಮಕ್ಕಳು ಹೆಚ್ಚು ಆಸಕ್ತಿ ವಹಿಸಿ ಓದುತ್ತಾರೆ. ಅವರಲ್ಲಿ ಸೃಜನಾತ್ಮಕ ಚಿಂತನಶೀಲ ವೈಜ್ಞಾನಿಕ ಮನೋಭಾವ ಬೆಳೆಸಲು ಇಂತಹ ವಸ್ತು ಪ್ರದರ್ಶನಗಳು ಸಹಕಾರಿ ಎಂದರು. ವಿದ್ಯಾರ್ಥಿಗಳು ವಿಜ್ಞಾನಿಗಳ ಸಂಶೋಧನೆ ಮತ್ತು ಅವರ ಸಾಧನೆಗಳ ಬಗ್ಗೆ ಹೆಚ್ಚಿನ ಜ್ಞಾನ ಬೆಳೆಸಿಕೊಂಡರೆ ಭವಿಷ್ಯದಲ್ಲಿ ವಿಜ್ಞಾನಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಇಂತಹ ವಿಜ್ಞಾನ ಆವಿಷ್ಕಾರಗಳ ಪ್ರಾಯೋಗಿಕ ಪ್ರದರ್ಶನಗಳು ಮಕ್ಕಳಲ್ಲಿ ವಿಜ್ಞಾನ ಕಲಿಕೆಗೆ ಹೆಚ್ಚಿನ ಪ್ರೇರೇಪಣೆ ನೀಡುತ್ತವೆ ಎಂದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ.ಎನ್.ವಸಂತ್, ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ಎ.ಮುರಳೀಧರ್, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್.ರತ್ನಕುಮಾರ್, ಶಾಲಾ ಮುಖ್ಯ ಶಿಕ್ಷಕ ಎಂ.ಎಂ. ಯಶವಂತ್ ಕುಮಾರ್, ವಿಜ್ಞಾನ ಶಿಕ್ಷಕಿ ಎಸ್.ಎಸ್. ರಂಜಿನಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಎಂ.ಟಿ.ಸರಳಕುಮಾರಿ, ಕಿರಗಂದೂರು ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ರಶ್ಮಿ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net