ಮೇದುರ ಜಲಪಾತದಲ್ಲಿ ಜಲರಾಶಿಯ ಭೋರ್ಗರೆತ

ಸೋಮವಾರಪೇಟೆ ತಾಲೂಕು ಗರ್ವಾಲೆ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿಯಲ್ಲಿರುವ ಜಲಪಾತದ ದೃಶ್ಯ ವೈಭವ.
ಸೋಮವಾರಪೇಟೆ ತಾಲೂಕು ಗರ್ವಾಲೆ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿಯಲ್ಲಿರುವ ಜಲಪಾತದ ದೃಶ್ಯ ವೈಭವ.
Published on

ಸೋಮವಾರಪೇಟೆ:

ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆಯ ರಭಸ ಹೆಚ್ಚಾಗಿದ್ದು, ಸೂರ್ಲಬ್ಬಿ ಗ್ರಾಮದ ಬಳಿ ಇರುವ ಮೇದುರ ಜಲಪಾತ ಭೋರ್ಗರೆಯುತ್ತ ನೋಡುಗರ ಮನ ಸೆಳೆಯುತ್ತಿದೆ.

ಹಸಿರು ಬೆಟ್ಟದ ರಾಶಿಗಳ ನಡುವೆ ಬಂಡೆಗಲ್ಲುಗಳ ಮೇಲಿನಿಂದ ಧುಮ್ಮಿಕ್ಕುವ ಜಲರಾಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಪಶ್ವಿಮ ಘಟ್ಟದ ಸಾಲಿನಲ್ಲಿವ ಗುಡ್ಡವೊಂದರ ಮೇಲಿನಿಂದ ಹರಿಯುವ ಈ ಜಲಧಾರೆ ಸುಮಾರು 100 ಮೀಟರ್‌ಗಿಂತಲೂ ಅಧಿಕ ಎತ್ತರದಿಂದ ಧುಮ್ಮಿಕ್ಕಿ ಹರಿದು ಸಾಗುವ ಈ ಜಲಪಾತ ಹೆಚ್ಚು ಪ್ರಸಿದ್ಧಿ ಪಡೆದಿರಲಿಲ್ಲ.
ಪ್ರವಾಸೋದ್ಯಮ ಪಟ್ಟಿಗೆ ಸೂರ್ಲಬ್ಬಿ ಜಲಪಾತ ಪ್ರವಾಸೋದ್ಯಮ ನೀತಿಯಡಿ ಸೇರ್ಪಡೆಗೊಂಡಿರುವುದರಿಂದ ಹೆಚ್ಚಿನ ಕಾಯಕಲ್ಪ ನಿರೀಕ್ಷಿಸಲಾಗಿದೆ.

ಹೆಚ್ಚಿನ ಮಳೆ ಬೀಳುವ ಪ್ರದೇಶವಾದ ಸೂರ್ಲಬ್ಬಿಯಲ್ಲಿ ಮುಂಗಾರು ಮಳೆ ಎಡಬಿಡದೆ ಸುರಿಯುತ್ತದೆ. ಮುಖ್ಯ ರಸ್ತೆಯಲ್ಲಿರುವ ಸೇತುವೆ ಮೇಲೆ ನಿಂತು ಜಲಪಾತದ ದೃಶ್ಯ ಸೆರೆಹಿಡಿಯಬಹುದು. ನೀರು ಕಡಿಮೆ ಇರುವ ಸಮಯದಲ್ಲಿ ಜಲಪಾತದ ಹಾದಿಯಲ್ಲಿ ನಡೆದುಕೊಂಡು ಬೆಟ್ಟ ಹತ್ತಬಹುದಾಗಿದೆ.

ಸೂರ್ಲಬ್ಬಿ ಜಲಪಾತಕ್ಕೆ ಬರುವ ಪ್ರವಾಸಿಗರಿಗೆ ಕೋಟೆಬೆಟ್ಟ, ಅಬ್ಬಿ ಜಲಪಾತ, ಮಾಂದಲಪಟ್ಟಿ, ಮಲ್ಲಳ್ಳಿ ಜಲಪಾತ, ಪುಷ್ಪಗಿರಿ ಶಾಂತಮಲ್ಲಿಕಾರ್ಜುನ ದೇವಾಲಯ, ಕಾಂಚನಗಂಗಾ ಜಲಪಾತ, ದೊಡ್ಡಕಲ್ಲು ಬೆಟ್ಟ, ಬಡ್ಸತ್ ಕುಂದ್, ಭತ್ತದ ರಾಶಿ ಬೆಟ್ಟ ಹೀಗೆ ಎಲ್ಲವೂ 20ರಿಂದ 25 ಕಿಲೋಮೀಟರ್ ಒಳಗಿನ ವ್ಯಾಪ್ತಿಯಲ್ಲಿಯೇ ಸಿಗುತ್ತವೆ.

ಮಾದಾಪುರದಿಂದ ಕೇವಲ 14 ಕಿಲೋಮೀಟರ್ ದೂರದಲ್ಲಿದೆ. ಜಲಪಾತಕ್ಕೆ ಮಡಿಕೇರಿಯಿಂದ ಮಾದಾಪುರ ಮಾರ್ಗವಾಗಿ ಬರಬಹುದು. ಕುಶಾಲನಗರದಿಂದ ಸುಂಟಿಕೊಪ್ಪ-ಮಾದಾಪುರ ಮಾರ್ಗವಾಗಿಯೂ ಬರಬಹುದು. ಸೋಮವಾರಪೇಟೆಯಿಂದ ತಾಕೇರಿ ಮಾರ್ಗ ಇಲ್ಲವೇ ಸೋಮವಾರಪೇಟೆಯಿಂದ ಶಾಂತಳ್ಳಿ ಮಾರ್ಗವಾಗಿಯೂ ಬರಬಹುದು.

ಈ ಜಲಪಾತ ವೀಕ್ಷಿಸಲು ಬರುವವರಿಗೆ ಸ್ವಯಂ ನಿಯಂತ್ರಣ ಇರಬೇಕು. ನೀರು ಧುಮ್ಮಿಕ್ಕುವ ಸಂದರ್ಭದಲ್ಲಿ ತಳಭಾಗದ ಬಂಡೆಕಲ್ಲುಗಳ ಬಳಿ ತೆರಳಬಾರದು. ಇಲ್ಲಿ ಯಾವುದೇ ಎಚ್ಚರಿಕೆಯ ಸೂಚನಾ ಫಲಕಗಳು ಕಾಣ ಸಿಗುವುದಿಲ್ಲ. ಪ್ರವಾಸಿಗರ ಅತಿರೇಕದ ವರ್ತನೆಗೆ ಕಡಿವಾಣ ಹಾಕುವವರೂ ಇಲ್ಲ. ಕೆಲವರು ಹಳೇ ಸೇತುವೆ ಪಕ್ಕದಲ್ಲಿಯೇ ಬೈಕ್ ನಿಲ್ಲಿಸಿ ಅತಿರೇಕದ ವರ್ತನೆಯಿಂದ ಇತ್ತೀಚೆಗೆ ಗ್ರಾಮಸ್ಥರಿಂದ ಛೀಮಾರಿ ಹಾಕಿಸಿಕೊಂಡ ಘಟನೆಯೂ ನಡೆದಿದೆ.

ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಸಾಕಷ್ಟು ಸಣ್ಣ ಪುಟ್ಟ ಜಲಪಾತಗಳು ಇವೆ. ಚಾರಣಕ್ಕೆ ಸೂಕ್ತ ಎನಿಸುವ ಪುಷ್ಪಗಿರಿ ಬೆಟ್ಟ ಇದೆ. ಮಾಹಿತಿ ಕೊರತೆಯಿಂದ ಕೆಲವು ಸಣ್ಣ ಪುಟ್ಟ ಜಲಪಾತಗಳು ಹೊರ ಪ್ರಪಂಚದಿಂದ ದೂರ ಉಳಿದಿವೆ. ಪ್ರವಾಸೋದ್ಯಮ ಪಟ್ಟಿಗೆ ಸೂರ್ಲಬ್ಬಿ ಜಲಪಾತವನ್ನು ಸೇರಿಸಿರುವುದು ಸ್ವಾಗತಾರ್ಹ. ಆದರೆ, ನಿರೀಕ್ಷಿತ ಅಭಿವೃದ್ಧಿ ಆಗಬೇಕಿದೆ.

ಚಾಮೇರ ದಿನೇಶ್ ಬೆಳ್ಯಪ್ಪ, ಮಂಕ್ಯ ಗ್ರಾಮ, ಗರ್ವಾಲೆ ಪಂಚಾಯಿತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net