ಸೋಮವಾರಪೇಟೆ : ಅಕಾಲಿಕ ಮಳೆಯಿಂದ ಕಾಫಿ ಫಸಲು ಕಳೆದುಕೊಂಡು ಕಂಗಾಲಾಗಿರುವ ಬೆಳೆಗಾರರನ್ನು ಕಾಡು ದನಗಳು ನಿದ್ದೆಗೆಡಿಸಿವೆ.ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡು ದನಗಳ ಹಾವಳಿಯಿಂದ ಕೃಷಿಕರು ಬೇಸತ್ತಿದ್ದಾರೆ.
ಐಗೂರು, ಕಾಜೂರು, ಯಡವಾರೆ, ಕಿರಗಂದೂರು, ಸಂಪಿಗೆಕೊಲ್ಲಿ, ಸಜ್ಜಳ್ಳಿ, ಹಾರಂಗಿ, ಹೇರೂರು, ಹೊಸತೋಟ, ಬಿಳಿಗೇರಿ ಮುಂತಾದ ಗ್ರಾಮಗಳಲ್ಲಿ ಕಾಫಿ ತೋಟದೊಳಗೆ ನುಗ್ಗುವ ಕಾಡು ದನಗಳು ಗಿಡಗಳು, ಕಾಫಿ ಹಣ್ಣುಗಳನ್ನು ತಿಂದು ಹಾನಿ ಮಾಡುತ್ತಿವೆ.
ಹತ್ತಾರು ಗೂಳಿಗಳು ಸೇರಿದಂತೆ 150ರಷ್ಟು ಕಾಡು ದನಗಳು ಹಗಲಿನ ವೇಳೆ ಯಡವನಾಡು ಮೀಸಲು ಅರಣ್ಯದಲ್ಲಿ ವಿಶ್ರಾಂತಿ ಪಡೆದು ರಾತ್ರಿಯಾಗುತ್ತಿದಂತೆ ಕಾಫಿ ತೋಟ ಸೇರಿದಂತೆ ಕೃಷಿಭೂಮಿಗೆ ನುಗ್ಗುತ್ತಿವೆ. ವರ್ಷಪೂರ್ತಿ ಶ್ರಮಪಟ್ಟು ಬೆಳೆಸಿದ ಕಾಫಿ ಬೆಳೆ ಸೇರಿದಂತೆ ಇನ್ನಿತರ ಬೆಳೆಗಳು ನಾಶವಾಗುತ್ತಿರುವುದನ್ನು ಕಂಡು ಕೃಷಿಕರು ಬೇಸರಗೊಂಡಿದ್ದಾರೆ.
ಕಾಫಿ ತೋಟಗಳಲ್ಲಿ ರಾತ್ರಿ ಕಾಡು ದನಗಳು ಗುಂಪು ಗುಂಪಾಗಿ ಉಳಿಯುತ್ತಿದ್ದು, ಹಣ್ಣು ತಿನ್ನುವುದರ ಜತೆಗೆ ಗಿಡಗಳ ರೆಂಬೆಗಳನ್ನು ಮುರಿದು ಹಾಕುತ್ತಿವೆ. ಇದರಿಂದ ಉತ್ಪಾದನೆ ಕುಸಿಯುವ ಆತಂಕ ಕೃಷಿಕರನ್ನು ಕಾಡುತ್ತಿದೆ. ಈಗಾಗಲೇ ಕಾರ್ಮಿಕರ ಕೊರತೆ, ಹವಾಮಾನ ವೈಪರಿತ್ಯದಿಂದ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಕಾಡು ದನಗಳ ಹಾವಳಿ ಮತ್ತೊಂದು ದೊಡ್ಡ ಹೊಡೆತವಾಗಿದೆ.
ಕೃಷಿಭೂಮಿಗಳಲ್ಲಷ್ಟೇ ಅಲ್ಲದೆ, ಯಾಡವನಾಡು ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರಮುಖ ಗ್ರಾಮಾಂತರ ರಸ್ತೆಗಳಲ್ಲಿಯೂ ಕಾಡು ದನಗಳ ಅಟ್ಟಹಾಸ ಹೆಚ್ಚಾಗಿದೆ. ರಾತ್ರಿ ಸಮಯದಲ್ಲಿ ರಸ್ತೆಯ ಮಧ್ಯೆ ಗುದ್ದಾಡುತ್ತಾ ಓಡಾಡುವ ಕಾಡು ದನಗಳು ವಾಹನ ಚಾಲಕರಿಗೆ ಭಾರಿ ಅಪಾಯವನ್ನುಂಟುಮಾಡುತ್ತಿವೆ. ಅಚಾನಕ್ ರಸ್ತೆ ಮೇಲೆ ಬಂದು ನಿಲ್ಲುವ ದನಗಳನ್ನು ತಪ್ಪಿಸಲು ಹೋಗಿ ಹಲವು ಬಾರಿ ವಾಹನಗಳು ಅಪಘಾತಕ್ಕೀಡಾಗಿವೆ. ಬೈಕ್ ಸವಾರರು ಹಾಗೂ ಕಾರು ಚಾಲಕರು ಭಯಭೀತರಾಗಿ ಸಂಚರಿಸುವಂತಾಗಿದೆ.
ಸ್ಥಳೀಯರು ಹೇಳುವಂತೆ, ಕಾಡು ದನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆಹಾರ ಕೊರತೆಯೇ ಅವುಗಳನ್ನು ಮಾನವ ವಸತಿಗಳತ್ತ ತಳ್ಳುತ್ತಿದೆ. ಅರಣ್ಯದಲ್ಲಿ ನೀರು ಮತ್ತು ಮೇವು ಸೌಲಭ್ಯಗಳ ಕೊರತೆ ಇರುವುದರಿಂದ ದನಗಳು ತೋಟಗಳು ಹಾಗೂ ರಸ್ತೆ ಪ್ರದೇಶಗಳತ್ತ ವಲಸೆ ಬರುತ್ತಿವೆ ಎನ್ನುವುದು ಗ್ರಾಮಸ್ಥರ ಅಭಿಪ್ರಾಯ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಕೃಷಿಕರು ಹಾಗೂ ಸಾರ್ವಜನಿಕರು ಅರಣ್ಯ ಇಲಾಖೆ, ಪಶು ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದಾರೆ. ಇದುವರೆಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ಹೀಗಾಗಿ ಯಾಡವನಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡು ದನಗಳ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕ್ರಮಗಳನ್ನು ಜಾರಿಗೊಳಿಸುವುದು ಅತ್ಯವಶ್ಯಕವಾಗಿದೆ. ಇಲ್ಲವಾದರೆ ಈ ಹಾವಳಿ ಮುಂದಿನ ದಿನಗಳಲ್ಲಿ ಇನ್ನಷ್ಟು ಭೀಕರ ರೂಪ ತಾಳುವ ಭೀತಿ ಸ್ಥಳೀಯರಲ್ಲಿ ಮನೆಮಾಡಿದೆ.
ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹೊಂದಿಕೊಂಡಂತೆ ಯಡವನಾಡು ಮೀಸಲು ಅರಣ್ಯವಿದ್ದು, ಸೋಲಾರ್ ತಂತಿ ಬೇಲಿ. ಆನೆ ಕಂದಕ ನಿರ್ಮಿಸಿದರೂ ಅನೇಕ ಕಡೆ ಕಾಡು ಪ್ರಾಣಿಗಳ ಕಾಟ ಮುಂದುವರಿದಿದೆ. ಇಂತಹ ಸಮಸ್ಯೆಗಳ ನಡುವೆಯೂ ಕಾಡು ದನಗಳ ಕಾಟದಿಂದ ರೈತರ ನಿದ್ದೆಗೆಡುವಂತಾಗಿದೆ.
ಕಾಡು ದನಗಳಿಗೆ ವಾರಾಸುದಾರರಿಲ್ಲ. ಕಾಡಿನಲ್ಲೇ ಕರು ಹಾಕಿದಾಗ ಕಾಡುದನಗಳ ಹಿಂಡು ಕರುಗಳನ್ನು ರಕ್ಷಿಸುತ್ತವೆ. ಹಿಂಡಿನಲ್ಲೇ ದನಗಳು ವಾಸಿಸುತ್ತವೆ. ಯಡವನಾಡು ಮೀಸಲು ಅರಣ್ಯದಲ್ಲಿ ಈ ಹಿಂಡುಗಳು ಹೆಚ್ಚಿಗೆ ಕಾಣಸಿಗುತ್ತವೆ.
ಕೆಲ ವರ್ಷಗಳ ಹಿಂದೆ ಐಗೂರು ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಪಶುಸಂಗೋಪನಾ ಇಲಾಖೆಯ ವತಿಯಿಂದ ಸಭೆ ನಡೆದಿದ್ದು, ಕಾಡು ದನಗಳನ್ನು ಗೋಶಾಲೆಗೆ ಅಥವಾ ಬೇರೆ ಜಿಲ್ಲೆಗಳ ಮೀಸಲು ಅರಣ್ಯಕ್ಕೆ ಸಾಗಿಸಲು ಸೂಕ್ತ ಕ್ರಮಕೈಗೊಳ್ಳಲು ತೀರ್ಮಾನವಾಗಿತ್ತು. ಆದರೆ ಇದುವರೆಗೆ ಕ್ರಮಕೈಗೊಂಡಿಲ್ಲ ಕೂಡಲೆ ಸಭೆ ಕರೆದು ಕ್ರಮ ಕೈಗೊಳ್ಳಬೇಕು ಎಂಬುದು ರೈತರು ಆಗ್ರಹಿಸಿದ್ದಾರೆ.
ಯಡವನಾಡು ಮೀಸಲು ಅರಣ್ಯ ಸುತ್ತಮುತ್ತಲ ಪ್ರದೇಶದಲ್ಲಿ 150ರಷ್ಟು ಕಾಡು ದನಗಳು ವಾಸವಾಗಿವೆ. ಕಬ್ಬಿಣ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಐಗೂರು ಜಂಕ್ಷನ್‌ನಲ್ಲಿ ಹಾವಳಿ ಕಡಿಮೆಯಾಗಿದೆ. ಕಾಡು ದನಗಳ ಸ್ಥಳಾಂತರಕ್ಕೆ ಅನೇಕ ವರ್ಷಗಳಿಂದ ಆಗ್ರಹ ಮಾಡಲಾಗುತ್ತಿದೆ. ಆದರೆ ಅಧಿಕಾರಿಗಳ ಕ್ರಮ ಕೈಗೊಂಡಿಲ್ಲ. ಶಾಸಕರಾದ ಡಾ.ಮಂತರ್‌ಗೌಡ ಅವರು ಅಧಿಕಾರಿಗಳ ಸಭೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂಬುದು ನಮ್ಮೆಲ್ಲರ ಆಗ್ರಹವಾಗಿದೆ.