ಕೆಎಸ್‌ಆರ್‌ಟಿಸಿ ಪ್ರಾದೇಶಿಕ ಕಚೇರಿ ಬೇಕು

ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸಭೆಯಲ್ಲಿ ಆಹಾರ ಇಲಾಖೆಯಿಂದ ವೈದ್ಯಕೀಯ ತುರ್ತುಚಿಕಿತ್ಸೆ  ಫಲಾನುಭವಿಗಳಿಗೆ ಹಸಿರು ಪಡಿತರ ಚೀಟಿ ನೀಡಲಾಯಿತು.
ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸಭೆಯಲ್ಲಿ ಆಹಾರ ಇಲಾಖೆಯಿಂದ ವೈದ್ಯಕೀಯ ತುರ್ತುಚಿಕಿತ್ಸೆ ಫಲಾನುಭವಿಗಳಿಗೆ ಹಸಿರು ಪಡಿತರ ಚೀಟಿ ನೀಡಲಾಯಿತು.
Published on
ಸೋಮವಾರಪೇಟೆ : ಕೊಡಗು ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ಕಚೇರಿ ಪ್ರಾರಂಭಗೊಂಡರೆ ಮಾತ್ರ ಬಸ್ ಸಂಚಾರ ವ್ಯವಸ್ಥೆ, ಮಾರ್ಗಗಳ ಬದಲಾವಣೆ ಇನ್ನಿತರ ಸಮಸ್ಯೆಗಳು ಪರಿಹಾರ ಕಾಣಲು ಸಾಧ್ಯ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ.ಕಾಂತರಾಜ್ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸೇವೆಯು ಜಿಲ್ಲೆಯ ಜನರಿಗೆ ಸಮರ್ಪಕವಾಗಿ ದೊರೆಯುತ್ತಿಲ್ಲವೆಂದು ಚರ್ಚಿಸಲಾಯಿತು. ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಯಿತು. ಇದರ ಬಗ್ಗೆ ಚರ್ಚಿಸಲು ಇಲಾಖಾ ಸಚಿವ ರಾಮಲಿಂಗಾರೆಡ್ಡಿ ಮತ್ತು ಶಾಸಕ ಡಾ.ಮಂತರ್ ಗೌಡ ಅವರನ್ನು ಸಮಿತಿಯವರು ಭೇಟಿ ಮಾಡುವಂತೆ ತೀರ್ಮಾನಿಸಲಾಯಿತು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಈರಸಪ್ಪ ಮಾತನಾಡಿ, ಯಾವುದೇ ಸಣ್ಣ ಸಮಸ್ಯೆಗೂ ನಾವು ಪುತ್ತೂರು ವಿಭಾಗೀಯ ಕಚೇರಿಯನ್ನು ಸಂಪರ್ಕಿಸಬೇಕು. ಇದರಿಂದ ತಕ್ಷಣಕ್ಕೆ ಪರಿಹಾರವೂ ದೊರೆಯುತ್ತಿಲ್ಲ. ಕೊಡಗು ಜಿಲ್ಲೆಯಲ್ಲಿ ಇನ್ನೊಂದು ಡಿಪೋ ಪ್ರಾರಂಭಿಸಿದರೆ ಒಳಿತು. ಈ ನಿಟ್ಟಿನಲ್ಲಿ ಎಲ್ಲರ ಬೆಂಬಲವೂ ಅಗತ್ಯ ಎಂದರು.
ವಿಳಂಬವಾಗುತ್ತಿದೆ:
ಆಹಾರ ನಿರೀಕ್ಷಕಿ ಯಶಸ್ವಿನಿ ಮಾತನಾಡಿ, ಸೋಮವಾರಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಬಿಪಿಎಲ್ ಪಡಿತರ ಚೀಟಿ ಹೊಂದಲು ಇರಬೇಕಾದ ಮಾನದಂಡಗಳನ್ನು ಹೊರತು ಪಡಿಸಿರುವಂತೆ ಒಟ್ಟು 1,032 ಪಡಿತರ ಚೀಟಿಯನ್ನು ಎ.ಪಿ.ಎಲ್. ಚೀಟಿಯನ್ನಾಗಿ ಪರಿವರ್ತಿಸಲಾಗಿದೆ. ಇದರ ಪೈಕಿ 255 ಅರ್ಜಿದಾರರು ಪುನಃ ತಾವು ಈ ಯೋಜನೆ ಫಲಾನುಭವಿಗಳಾಗಲು ಅರ್ಹರೆಂದು ಅರ್ಜಿ ಸಲ್ಲಿಸಿದ್ದಾರೆ. ಸದರಿ ಅರ್ಜಿಗಳ ಪೈಕಿ ಸುಮಾರು 60 ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಸಿಬ್ಬಂದಿಗಳ ಕೊರತೆಯಿಂದ ಸ್ಥಳ ಪರಿಶೀಲನೆ ಮಾಡಲು ಒಂದಷ್ಟು ವಿಳಂಬವಾಗುತ್ತಿದೆ ಎಂದು ಸಭೆಗೆ ತಿಳಿಸಿದರು.ಬಿಪಿಎಲ್ ಪಡಿತರ ಪಡೆಯಲು ತಾವು ಅರ್ಹರೆಂದು ಕಂಡುಬಂದಲ್ಲಿ ಮರು ಅರ್ಜಿ ಸಲ್ಲಿಸಬಹುದು. ಇಂತಹ ಅರ್ಜಿಗಳ ಸ್ಥಳ ಪರಿಶೀಲನೆ ಮಾಡಿ, ಅರ್ಹರೆಂದು ಕಂಡುಬಂದಲ್ಲಿ ಮತ್ತೊಮ್ಮೆ ಪರಿಶೀಲಿಸಲಾಗುವುದು ಎಂದು ಸಭೆಗೆ ತಿಳಿಸಿದರು.
ಶೌಚಗೃಹ ವ್ಯವಸ್ಥೆ ಇಲ್ಲ:
ತಾಲೂಕಿನ ಶನಿವಾರಸಂತೆ ಹೋಬಳಿಯ ಗುಡುಗಳಲೆ ಅಂಗನವಾಡಿ ಕೇಂದ್ರದಲ್ಲಿ ಶೌಚಗೃಹ ವ್ಯವಸ್ಥೆ ಇಲ್ಲ. ಸಣ್ಣ ಮಕ್ಕಳು ಸಾರ್ವಜನಿಕ ಚರಂಡಿಯನ್ನು ಆಶ್ರಯಿಸುತ್ತಿದ್ದಾರೆ. ಮಕ್ಕಳಿಗೆ ಇದರಿಂದ ಅನಾಹುತವಾಗುವ ಸಾಧ್ಯತೆ ಇದೆ ಎಂದು ಸಮಿತಿಯ ಸದಸ್ಯರು ದೂರಿದರು. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಅಧ್ಯಕ್ಷ ಜಿ.ಎಂ.ಕಾಂತರಾಜ್ ಅವರು ಶಿಶು ಅಭಿವೃದ್ದಿ ಯೋಜನಾಧಿಕಾರಿಗೆ ಸೂಚಿಸಿದರು.
ಹಣ ಖಾತೆಗೆ ಜಮಾ ಆಗಿದೆ:
ಗೃಹಲಕ್ಷ್ಮೀ ಯೋಜನೆಯ ಹಣ ನವಂಬರ್ ತಿಂಗಳವರೆಗೆ ಫಲಾನುಭವಿಗಳ ಖಾತೆಗೆ ಜಮಾ ಆಗಿದೆ ಎಂದು ಇಲಾಖೆಯ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಸರ್ಕಾರದ ಯುವನಿಧಿ ಯೋಜನೆಯ ಕುರಿತು ಇನ್ನಷ್ಟು ಪ್ರಚಾರ ಆಗಬೇಕಿದೆ. ಜಾತ್ರೆ, ಸಭೆ ಸಮಾರಂಭಗಳಲ್ಲಿ ಕರಪತ್ರಗಳನ್ನು ಅಂಟಿಸಬೇಕು. ಕಾಲೇಜುಗಳಿಗೆ ಭೇಟಿ ನೀಡಿ ಯೋಜನೆಯ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಅಧ್ಯಕ್ಷ ಕಾಂತರಾಜ್ ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ಮಂಜುನಾಥ್ ಅವರಿಗೆ ಸೂಚಿಸಿದರು.
ಇದೇ ಸಂದರ್ಭ ಆಹಾರ ಇಲಾಖೆಯಿಂದ ವೈದ್ಯಕೀಯ ತುರ್ತುಚಿಕಿತ್ಸೆಗೆ ಆಯ್ಕೆ ಆದ ಫಲಾನುಭವಿಗಳಿಗೆ ಸಹಾಯಧನದ ಪತ್ರ ನೀಡಲಾಯಿತು. ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ
ಶ್ರೀನಿವಾಸ್, ಸಮಿತಿ ಸದಸ್ಯರಾದ ಎಸ್.ಎಂ.ಡಿಸಿಲ್ವಾ, ಗೌತಮ್ ಶಿವಪ್ಪ, ಎಚ್.ಬಿ.ರಾಜಪ್ಪ, ಶೀಲಾ ಡಿಸೋಜ, ಸಂದೀಪ್, ವೀರೇಂದ್ರ ಕುಮಾರ್, ಬೋಜಪ್ಪ. ರಾಜಮ್ಮ ರುದ್ರಯ್ಯ, ರಂಗಸ್ವಾಮಿ
ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net