ಕೃಷಿ ಪ್ರಧಾನ ಗ್ರಾಮ ಗೌಡಳ್ಳಿ

ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸರ್ವಧರ್ಮ ಕ್ಷೇತ್ರ
ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸರ್ವಧರ್ಮ ಕ್ಷೇತ್ರ
Published on
ಹಿರಿಕರ ರವಿ ಸೋಮವಾರಪೇಟೆ
ಒಕ್ಕಲಿಗ ಗೌಡರು ಕಟ್ಟಿದ ನಾಡು ಗೌಡಳ್ಳಿ ಗ್ರಾಮ ಇಂದಿಗೂ ಕೃಷಿ ಪ್ರಧಾನವಾಗಿದ್ದು, ಒಕ್ಕಲುತನ ಮುಖ್ಯ ಕಸುಬಾಗಿದೆ. ಕಾಫಿ, ಭತ್ತ, ಕಾಳುಮೆಣಸು, ಹಸಿ ಮೆಣಸು ಪ್ರಮುಖ ಬೆಳೆಯಾಗಿದೆ. ಶೇ.90ರಷ್ಟು ರೈತರು ಇವತ್ತಿಗೂ ಕೃಷಿ ಮಾಡುತ್ತಿದ್ದಾರೆ. ದುಡಿಮೆಗಾರರಿಗೆ ಈ ಗ್ರಾಮದಲ್ಲಿ ಗೌರವವಿದೆ.
ಸೋಮವಾರಪೇಟೆ ಶನಿವಾರಸಂತೆ ರಾಜ್ಯ ಹೆದ್ದಾರಿಯಲ್ಲಿ ಸಿಗುವ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶುವೈದ್ಯಕೀಯ ಕೇಂದ್ರ, ಕೃಷಿ ಪತ್ತಿನ ಸಹಕಾರ ಸಂಘ, ಅಂಗನವಾಡಿ, ಗ್ರಂಥಾಲಯ, ಪ್ರೌಢಶಾಲೆ, ಖಾಸಗಿ ಆಂಗ್ಲ ಮಾಧ್ಯಮ ಶಾಲೆ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಇದೆ.
ಗೌಡಳ್ಳಿ ಗ್ರಾಮದಲ್ಲಿ 120 ಮನೆಗಳಿದ್ದು, 500 ಜನಸಂಖ್ಯೆಯಿದೆ. ಸುತ್ತಮುತ್ತಲಿನ ಗ್ರಾಮಗಳ ಜನರು ಒಂದಿಲ್ಲೊಂದು ಕೆಲಸಗಳಿಗೆ ಗೌಡಳ್ಳಿ ಗ್ರಾಮಕ್ಕೆ ಬರುತ್ತಾರೆ. ಬಹತೇಕ ಧಾರ್ಮಿಕ ಕಾರ್ಯಗಳು, ಸಮಾಜಮುಖಿ ಕಾರ್ಯಕ್ರಮಗಳು, ಕ್ರೀಡಾ ಸ್ಪರ್ಧೆಗಳು ಗೌಡಳ್ಳಿ ಗ್ರಾಮದಲ್ಲೇ ನಡೆಯುತ್ತವೆ.
ಗೌಡಳ್ಳಿ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸರ್ವಧರ್ಮ ಕ್ಷೇತ್ರವಾಗಿದೆ. ಶಿವರಾತ್ರಿ ಸಂದರ್ಭ ದೇವಾಲಯದಲ್ಲಿ ಜಾತ್ರೋತ್ಸವ ನಡೆಯುತ್ತದೆ. ರಾಸುಗಳ ಪ್ರದರ್ಶನ, ಉಚಿತ ಪಶುಚಿಕಿತ್ಸಾ ಶಿಬಿರ ನಡೆಯುತ್ತದೆ. ಹೈನುಗಾರಿಕೆಯಲ್ಲಿ ತೊಡಗಿಕೊಂಡವರಿಗೆ ಪ್ರೋತ್ಸಾಹ ನೀಡಲಾಗುತ್ತದೆ.
ಕ್ರೀಡಾ ಕ್ಷೇತ್ರದ ಸಾಧಕರು:
ದೇವಾಲಯ ಸಮಿತಿಯವರು ಜಾತ್ರೋತ್ಸವ ಪ್ರಯುಕ್ತ ಪುರುಷರಿಗೆ ಫುಟ್ಬಾಲ್, ಮಹಿಳೆಯರಿಗೆ ಥ್ರೋಬಾಲ್ ಪಂದ್ಯ ಆಯೋಜಿಸುತ್ತಾರೆ. ಗುಡ್ಡಗಾಡು ಓಟ, ಮಕ್ಕಳಿಗೂ ಕ್ರೀಡಾ ಸ್ಪರ್ಧೆಗಳು ನಡೆಯುತ್ತವೆ. ಯುಗಾದಿ ಹಬ್ಬದ ಪ್ರಯುಕ್ತ ಹಿಂದೂ ಗೆಳೆಯರ ಬಳಗದ ವತಿಯಿಂದ ಮುಕ್ತ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತದೆ. ವಿದೇಶಿ ಆಟಗಾರರು ಈ ಪಂದ್ಯಾವಳಿಯಲ್ಲಿ ಅಟವಾಡುತ್ತಾರೆ. ಸುತ್ತಮುತ್ತಲಿನ ಗ್ರಾಮಸ್ಥರು ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ. ಕ್ರೀಡಾ ಕ್ಷೇತ್ರಕ್ಕೂ ಗೌಡಳ್ಳಿ ಗ್ರಾಮದ ಕೊಡಗು ಇದೆ. ಹರಿಪ್ರಸಾದ್ ಮತ್ತು ಪೃಥ್ವಿ ಅವರು ರಾಷ್ಟ್ರೀಯ ಮಟ್ಟದ ಹಾಕಿ ಕ್ರೀಡೆಯಲ್ಲಿ ಹೆಸರು ಗಳಿಸಿದ್ದಾರೆ.
--------------
ಪಂಜುರ್ಲಿ, ಶ್ರೀ ಮಂತ್ರಗುಳಿಗ ಪೂಜೆ
ನವದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಪರಿವಾರ ದೇವರುಗಳನ್ನು ಪ್ರತಿಷ್ಠಾಪಿಸಲಾಗಿದೆ. ಶ್ರೀ ರಕ್ತೇಶ್ವರಿ, ಶ್ರೀ ವರ್ಣಾರ ಪಂಜುರ್ಲಿ, ಶ್ರೀ ಮಂತ್ರಗುಳಿಗ ದೈವಗಳನ್ನು ಪೂಜಿಸಲಾಗುತ್ತದೆ. ವಾರ್ಷಿಕ ನೇಮೋತ್ಸವ ನಡೆಸಲಾಗುತ್ತದೆ. ದಕ್ಷಿಣ ಕನ್ನಡ ಯಕ್ಷಗಾನ ಯಕ್ಷಗಾನ ಕಲೆಯನ್ನು ಕೊಡಗಿನಲ್ಲೂ ಪಸರಿಸುವ ಪ್ರಯತ್ನ ನಡೆಯುತ್ತಿದೆ. ಕಳೆದ ಐದಾರು ವರ್ಷಗಳಿಂದ ಜಾತ್ರೋತ್ಸವ ಸಂದರ್ಭದಲ್ಲಿ ಯಕ್ಷಗಾನ ಬಯಲಾಟ ಏರ್ಪಡಿಸಲಾಗುತ್ತದೆ. ದಕ್ಷಿಣ ಕನ್ನಡ ಮೂಲದವರು ಹಾಗೂ ಪಕ್ಕದ ಗ್ರಾಮದವರು ಯಕ್ಷಗಾನವನ್ನು ಬೆಳಗಿನ ತನಕ ನೋಡಿ ಆನಂದಿಸುತ್ತಾರೆ. ಇಂತಹ ಕಲೆಯನ್ನು ಶ್ರೀಮಂತಗೊಳಿಸಲು ಗೌಡಳ್ಳಿ ಗ್ರಾಮಸ್ಥರು ಪ್ರಯತ್ನಪಡುತ್ತಿದ್ದಾರೆ. ರಾಜಕಾರಣಿಗಳು ಚುನಾವಣೆಗೆ ನಿಲ್ಲುವ ಮೊದಲು ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ನಂತರ, ನಾಮಪತ್ರ ಸಲ್ಲಿಸುವುದು ವಾಡಿಕೆಯಾಗಿದೆ. ಜನಪ್ರತಿನಿಧಿಗಳು ನೀಡಿದ ಅನುದಾನದಲ್ಲೇ ಸಮುದಾಯಭವನ ನಿರ್ಮಾಣವಾಗಿದೆ. ವಿವಾಹಗಳಿಗೆ ಉಚಿತವಾಗಿ ಸಮುದಾಯಭವನ ನೀಡಲಾಗುತ್ತಿದೆ.
----------
ಕೆರೆ ಹೂಳೆತ್ತಿಸಲಿ
ಮೂರು ವರ್ಷಗಳ ಹಿಂದೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಗೌಡಳ್ಳಿ ಬಿ.ಜಿ.ಎಸ್ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಿತು. ಅತ್ಯುತ್ತಮ ಉಟೋಪಚಾರದಿಂದ ಗೌಡಳ್ಳಿ ಗ್ರಾಮ ಕನ್ನಡ ಮನಸ್ಸುಗಳ ಪ್ರೀತಿಗೆ ಪಾತ್ರವಾಯಿತು. ಎಲ್ಲ ಗ್ರಾಮಗಳಂತೆ ಗೌಡಳ್ಳಿ ಗ್ರಾಮದಲ್ಲೂ ಒಂದಷ್ಟು ಸಮಸ್ಯೆಗಳಿವೆ. ಗ್ರಾಮದೊಳಗಿನ ರಸ್ತೆಗಳು ಗುಂಡಿಬಿದ್ದಿವೆ. ಕೃಷಿ ಫಸಲನ್ನು ಸಾಗಿಸಲು ಕೃಷಿಕರು ಪರದಾಡುವಂತಾಗಿದೆ. ಜಿ.ಆರ್.ಅಶ್ವಥ್ ಅವರ ಮನೆಯಿಂದ ಕೆಂಚಮ್ಮನ ಮನೆ ತನಕ ಹಾಗು ಕಾಲನಿ ತನಕ ರಸ್ತೆ, ಕೃಷಿ ಪತ್ತಿನ ಸಹಕಾರ ಸಂಘದ ಪಕ್ಕದಲ್ಲಿ ಹಾದುಹೋಗುವ ರಸ್ತೆ ಡಾಂಬರೀಕರಣವಾಗಬೇಕಿದೆ. ಗ್ರಾಮದ ಮುಖ್ಯ ಕೆರೆ ಹೂಳೆತ್ತಿ ನೀರು ಸಂಗ್ರಹವಾದರೆ ಕೃಷಿಗೆ ಹಾಗೂ ಜಾನುವಾರುಗಳಿಗೆ ನೀರು ಸಿಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
------------
ಅಕಾಲಿಕ ಮಳೆ, ಫಸಲು ಹಾನಿ
ಹತ್ತು ವರ್ಷಗಳಿಂದಲೂ ಅಕಾಲಿಕ ಮಳೆ, ಬರ ಸೇರಿದಂತೆ ಹವಾಮಾನ ವೈಪ್ಯರಿತ್ಯದಿಂದ ಕಾಫಿ, ಕಾಳುಮೆಣಸು, ಭತ್ತ, ಹಸಿಮೆಣಸು ಫಸಲು ನಷ್ಟ ಅನುಭವಿಸುತ್ತಿದ್ದಾರೆ. ಸರಿಯಾದ ಬೆಳೆಹಾನಿ ಪರಿಹಾರ ಸಿಗದೆ ರೈತರು ಸಾಲಗಾರರಾಗಿದ್ದಾರೆ. ಕೃಷಿ ಭೂಮಿಯಿಂದ ಸಿಗುವ ಆದಾಯ ಬಡ್ಡಿ ಕಟ್ಟುವುದಕ್ಕೆ ಮಾತ್ರ ಸಾಕಾಗುತ್ತದೆ. ಅಸಲು ತೀರಿಸಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಸಮಸ್ಯೆ ತೋಡಿಕೊಳ್ಳುತ್ತಾರೆ. ಬಂದ ಅದಾಯವನ್ನು ಆಹಾರ ಬೆಳೆಗಳ ಉತ್ಪಾದನೆಗೆ ವಿನಿಯೋಗಿಸುತ್ತೇವೆ. ಈ ಉದ್ದೇಶದಿಂದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದಾಗ ಮಾತ್ರ ಗ್ರಾಮೀಣಾಭಿವೃದ್ಧಿ ಸಾಧ್ಯವೆಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು.
--------------
ಕಾಡಾನೆ ಹಾವಳಿ
ಗೌಡಳ್ಳಿ ಗ್ರಾಮದ ಪಕ್ಕದಲ್ಲೇ ಮಾಲಂಬಿ, ನಿಡ್ತ ಮೀಸಲು ಅರಣ್ಯವಿರುವ ಹಿನ್ನೆಲೆಯಲ್ಲಿ ಕಾಡಾನೆಗಳ ಉಪಟಳವೂ ಇದೆ. ಕೃಷಿ ಬೆಳೆ ಹಾನಿಯಾದರೆ, ಅರಣ್ಯ ಇಲಾಖೆ ನೀಡುವ ಪರಿಹಾರ ಸಣ್ಣ ಮೊತ್ತದ್ದು ಎಂದು ಬೇಸರ ವ್ಯಕ್ತಪಡಿಸಿದರು. ಗೌಡಳ್ಳಿ ಗ್ರಾಮದ ಅಭಿವೃದ್ಧಿಯಲ್ಲಿ ಅನೇಕ ಹಿರಿಯರು ಕೈಜೋಡಿಸಿದ್ದಾರೆ. ಕೋಟೆಯೂರು ವಿ.ಟಿ.ಈರಪ್ಪ, ಶುಂಠಿ ಗ್ರಾಮದ ಎಸ್.ಎಂ.ಬೆಳ್ಳಿಯಪ್ಪ, ಹಿರಿಕರ ಗ್ರಾಮದ ಜಿ.ಎಸ್.ಸುಬ್ಬಯ್ಯ, ಕೂಗೂರು ಗ್ರಾಮದ ಸೋಮಯ್ಯನವರು ಸೇರಿದಂತೆ ಇನ್ನು ಕೆಲವು ಗಣ್ಯರ ಪ್ರಯತ್ನದಿಂದ ಸಹಕಾರ ಬ್ಯಾಂಕ್, ಸರ್ಕಾರಿ ಶಾಲೆ, ಪ್ರೌಢಶಾಲೆ ನಿರ್ಮಾಣವಾದವು.
-----------------
////ಅಭಿಪ್ರಾಯ/////
ಗೌಡಳ್ಳಿ ಚಿಕ್ಕ ಗ್ರಾಮವಾದರೂ ರೈತರಿಗೆ ಎಲ್ಲ ಸೌಲಭ್ಯಗಳು ಸಿಗುವಂತಹ ಗ್ರಾಮವಾಗಿದೆ. ಸರ್ಕಾರಿ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ಓದಿದ ಅನೇಕ ಗಣ್ಯರು ದೊಡ್ಡ ಹುದ್ದೆಯಲ್ಲಿದ್ದಾರೆ. ಇವತ್ತಿಗೂ ಗೌಡಳ್ಳಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯ ಸರ್ವಧರ್ಮಕ್ಷೇತ್ರವಾಗಿ ಬೆಳೆಯುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಪರೀಕ್ಷೆ ಹಾಗೂ ಇತರ ಚಿಕಿತ್ಸೆಗೆ ಮೂರು ಕೊಠಡಿಗಳ ಅವಶ್ಯಕತೆ ಇದೆ.
1 ಜಿ.ಎ.ಮಹೇಶ್, ಅಧ್ಯಕ್ಷ, ಶ್ರೀ ನವದುರ್ಗಾ ಪರಮೇಶ್ವರಿ ಸಮುದಾಯ ಭವನ ಸಮಿತಿ
---------------
ಗೌಡಳ್ಳಿ ಗ್ರಾಮ ಎಲ್ಲ ರೀತಿಯಲ್ಲೂ ಮುಂದುವರಿದಿದೆ. ಕೃಷಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದರೂ ಉತ್ಪಾದನಾ ವೆಚ್ಚ ಹೆಚ್ಚಾಗಿ, ರೈತರು ಸಮಸ್ಯೆಯಲ್ಲಿದ್ದಾರೆ. ಸರ್ಕಾರದದಿಂದ ಸೌಲಭ್ಯಗಳು ಸಿಗಬೇಕು. ಕಾಫಿ ಉದ್ಯಮ ಬೆಳೆವಣಿಗೆಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಕಲ್ಪಿಸಬೇಕು. ಮಳೆಯನ್ನು ನಂಬಿ ಕಾಫಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಗ್ರಾಮದೊಳಗಿನ ರಸ್ತೆಗಳು ಡಾಂರೀಕರಣಗೊಳ್ಳಬೇಕು. ಗ್ರಾಮದಲ್ಲಿ ಒಂದು ಎಕರೆ ಕಾಫಿ ತೋಟ ಮಾಡಿದ್ದೇವೆ. ಗ್ರಾಮಸ್ಥರು ಶ್ರಮದಾನದ ಮೂಲಕ ತೋಟ ಕೆಲಸ ಮಾಡಿಕೊಳ್ಳುತ್ತೇವೆ.
2 ಜಿ.ಎಂ.ಜಯಪ್ಪ, ಅಧ್ಯಕ್ಷರು, ಗೌಡಳ್ಳಿ ಗ್ರಾಮಾಭಿವೃದ್ಧಿ ಮಂಡಳಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net