ಕೊಡ್ಲಿಪೇಟೆಯಲ್ಲಿ ಸ್ಥಳ ಪರಿಶೀಲನೆ

ಕೊಡ್ಲಿಪೇಟೆಯಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಗುರುತು ಮಾಡಿರುವ ಸ್ಥಳವನ್ನು ಸಚಿವ ರಾಮಲಿಂಗಾರೆಡ್ಡಿ ವೀಕ್ಷಿಸಿದರು. ಶಾಸಕ ಮಂತರ್ ಗೌಡ, ಚಂದ್ರಮೌಳಿ ಇತರರು ಇದ್ದರು.
ಕೊಡ್ಲಿಪೇಟೆಯಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಗುರುತು ಮಾಡಿರುವ ಸ್ಥಳವನ್ನು ಸಚಿವ ರಾಮಲಿಂಗಾರೆಡ್ಡಿ ವೀಕ್ಷಿಸಿದರು. ಶಾಸಕ ಮಂತರ್ ಗೌಡ, ಚಂದ್ರಮೌಳಿ ಇತರರು ಇದ್ದರು.
Published on
ಶನಿವಾರಸಂತೆ: ಕೊಡ್ಲಿಪೇಟೆಯಲ್ಲಿ ಈಗಾಗಲೇ ನಿಗದಿಪಡಿಸಿರುವ ಜಾಗವನ್ನು ಇಲಾಖೆಗೆ ಹಸ್ತಾಂತರಿಸಿದ ಕೂಡಲೇ ಬಸ್ ನಿಲ್ದಾಣ ನಿರ್ಮಾಣ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಕೊಡ್ಲಿಪೇಟೆಯಲ್ಲಿ ಬಸ್ ನಿಲ್ದಾಣಕ್ಕೆ ಸ್ಥಳೀಯರು ಗುರುತಿಸಿರುವ ಜಾಗವನ್ನು ಶಾಸಕ ಮಂತರ್ ಗೌಡ ಅವರೊಂದಿಗೆ ಶನಿವಾರ ವೀಕ್ಷಿಸಿ ಮಾತನಾಡಿದರು. ಭೂ ದಾಖಲೆಗಳು ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದು ಭರವಸೆ ನೀಡಿದರು.
ಜಿಲ್ಲೆಯ ಗಡಿಭಾಗದ ಹೋಬಳಿ ಕೇಂದ್ರವಾದ ಕೊಡ್ಲಿಪೇಟೆಗೆ ಬಸ್ ನಿಲ್ದಾಣ ಅವಶ್ಯಕವಾಗಿದ್ದು, ಇದರಿಂದ ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.
ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಶನಿವಾರಸಂತೆಯಷ್ಟೇ ದೊಡ್ಡ ಹೋಬಳಿ ಕೇಂದ್ರವಾಗಿರುವ ಕೊಡ್ಲಿಪೇಟೆಯಲ್ಲಿ ಬಸ್ ನಿಲ್ದಾಣ ನಿರ್ಮಾಣ ಆಗಬೇಕೆಂಬುದು ಸ್ಥಳೀಯ ಜನರ ಬಹುಕಾಲದ ಬೇಡಿಕೆಯಾಗಿದೆ. ಹಾಸನ, ದಕ್ಷಿಣ ಕನ್ನಡ, ಸಕಲೇಶಪುರ, ಅರಕಲಗೂಡು ಮತ್ತು ಸೋಮವಾರಪೇಟೆಗೆ ಸಂಪರ್ಕವಿರುವ ಗಡಿಭಾಗವಾದ ಇಲ್ಲಿ ಬಸ್ ನಿಲ್ದಾಣ ನಿರ್ಮಾಣಗೊಂಡರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದಕ್ಕಾಗಿ ಜಾಗವನ್ನು ಗುರುತಿಸಿದ್ದು, ರಾಜ್ಯ ಬಜೆಟ್‌ನಲ್ಲಿ ಇದನ್ನು ಸೇರಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಬಸ್ ನಿಲ್ದಾಣಕ್ಕೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದ ಮುಖ್ಯ ಹೆದ್ದಾರಿ ಬದಿಯಲ್ಲಿರುವ ಕೆರಗನಹಳ್ಳಿ ಗ್ರಾಮದ ಸರ್ಕಾರಿ ಜಾಗವನ್ನು ಗುರುತಿಸಿದ್ದು, ಬಸ್ ನಿಲ್ದಾಣಕ್ಕಾಗಿ ರಸ್ತೆ ಸಾರಿಗೆ ನಿಗಮಕ್ಕೆ ಹಣ ಪಾವತಿಸಲು ಜಿಲ್ಲಾಧಿಕಾರಿಯಿಂದ ಆದೇಶವಾಗಿದ್ದು ಶೀಘ್ರದಲ್ಲೆ ಇಲಾಖೆಗೆ ಜಾಗ ಹಸ್ತಾಂತರವಾಗಲಿದೆ ಎಂದು ತಾಲೂಕು ಬಗರ್‌ಹುಕುಂ ಸಮಿತಿ ಸದಸ್ಯ ಜೆ.ಎಲ್.ಜನಾರ್ದನ್ ಮಾಹಿತಿ ನೀಡಿದರು.
ಹ್ಯೆಕೋರ್ಟ್ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ, ಪ್ರಮುಖರಾದ ಡಾ.ಉದಯ್‌ಕುಮಾರ್, ಔರಂಗಜೇಬ್ , ಚಂದ್ರಶೇಖರ್, ತೇಜಕುಮಾರ್, ವೇದಕುಮಾರ್, ನಿಸಾರ್, ಸಾಬ್ಜಾನ್, ಮೋಹನ್ ಮೌರ್ಯ, ಜಯಪ್ಪ, ಪ್ರಸನ್ನ, ಅವಿನಾಶ್, ಚನ್ನಕೇಶವ, ಕಾಂಗ್ರೆಸ್ ಮುಖಂಡರು, ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net