ಬಾಯಿಯಲ್ಲಿ ನೀರೂರಿಸಿದ ಸಿರಿಧಾನ್ಯ ಖಾದ್ಯಗಳು

ಮಡಿಕೇರಿಯ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ನಡೆದ ಸಿರಿಧಾನ್ಯದ ಮಹತ್ವ ಕುರಿತು ಜಾಗೃತಿ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ 60ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ಮಡಿಕೇರಿಯ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ನಡೆದ ಸಿರಿಧಾನ್ಯದ ಮಹತ್ವ ಕುರಿತು ಜಾಗೃತಿ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ 60ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
Published on
ಮಡಿಕೇರಿ:
ಸಿರಿಧಾನ್ಯ ಬಳಕೆಯಿಂದ ದೇಹಕ್ಕೆ ಹೆಚ್ಚಿನ ಪೌಷ್ಠಿಕಾಂಶ ಲಭ್ಯವಾಗಲಿದ್ದು ಈ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು ಎಂದು ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯದ ಮಹತ್ವ ಕುರಿತು ಜಾಗೃತಿ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಪ್ರಯುಕ್ತ ಮಂಗಳವಾರ ಏರ್ಪಡಿಸಿದ್ದ ಜಾಥಾಕ್ಕೆ ಕೋಟೆ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಸಿರಿಧಾನ್ಯ ಉಪಯೋಗದಿಂದ ದೇಹದಲ್ಲಿ ಆಹಾರದ ಸಮತೋಲನ ಕಾಯ್ದುಕೊಳ್ಳಬಹುದು. ಮಧುಮೇಹ ಮತ್ತು ರಕ್ತದೊತ್ತಡದಿಂದ ದೂರವಿರಬಹುದು ಎಂದು ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ ಸಿರಿಧಾನ್ಯ ಉಪಯೋಗದಿಂದ ಹಲವು ರೀತಿಯ ಪೋಷಕಾಂಶಗಳು ದೊರೆಯಲಿದ್ದು, ಇವುಗಳನ್ನು ಬಳಸುವಂತಾಗಬೇಕು. ಸಿರಿಧಾನ್ಯ ಬಳಕೆಯಿಂದ ಮೂಳೆ ಸಹ ಗಟ್ಟಿಯಾಗಲಿದೆ. ಕ್ಯಾಲ್ಸಿಯಂ ದೊರೆಯಲಿದೆ. ಆದ್ದರಿಂದ ಸಿರಿಧಾನ್ಯ ಬಳಕೆ ಅತ್ಯಗತ್ಯ ಎಂದರು.
ಜಾಥಾದಲ್ಲಿ ಉಪ ನಿರ್ದೇಶಕ ಸೋಮಶೇಖರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಶಶಿಧರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ತಾಂತ್ರಿಕ ಸಹಾಯಕರು, ಎನ್‌ಸಿಸಿ ವಿದ್ಯಾರ್ಥಿಗಳು, ಕೃಷಿಕರು ಇತರರು ಪಾಲ್ಗೊಂಡಿದ್ದರು.
ನಗರದ ಕೋಟೆ ಆವರಣದಿಂದ ಗಾಂಧಿ ಮೈದಾನದವರೆಗೆ ಜಾಥಾ ನಡೆಯಿತು. ಬಳಿಕ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧಾ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 60 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು.
ಸಿರಿಧಾನ್ಯಗಳಾದ ಜೋಳ, ರಾಗಿ, ನವಣೆ, ಸಜ್ಜೆ, ಹಾರಕ, ಬರಗು, ಸಾಮೆ ಮತ್ತಿತರದಿಂದ ಮಾಡಿರುವ ವಿವಿಧ ರೀತಿಯ ತಿಂಡಿ ತಿನಿಸುಗಳು ಪ್ರದರ್ಶನದಲ್ಲಿ ನೋಡುಗರ ಬಾಯಲ್ಲಿ ನೀರು ತರಿಸಿತು.
ಸಿರಿಧಾನ್ಯದಲ್ಲಿ ಮಾಡಿದ್ದ ರಾಗಿ ದೋಸೆ, ನಿಪ್ಪಟ್ಟು, ಚಟ್ನಿ, ಚಕ್ಕುಲಿ, ಕೋಡು ಬಳೆ, ಕಜ್ಜಾಯ, ಮಿಲ್ಲೇಟ್ ಪಾಯಸ, ಮಿಲ್ಲೇಟ್ ಪಲಾವ್, ರಾಗಿ ಬಿಸ್ಕೇಟ್, ಬಿಳಿ ಜೋಳದ ಬಿಸ್ಕೇಟ್, ಮಿಲ್ಲೇಟ್ ಕೇಕ್, ಸಿರಿಧಾನ್ಯ ಪಡ್ಡು, ಸಿರಿಧಾನ್ಯ ಲಡ್ಡು, ಸಿರಿಧಾನ್ಯ ಚಟ್ನಿ, ಸೀಮೆಬದನೆ ಕಟ್ಲೆಟ್ಟ್, ನವಣೆ ದೋಸೆ, ಹಲಸಿನ ಕಟ್ಲೆಟ್ಟ್, ಬೂಕಿ ಕಜ್ಜಾಯ, ರಾಗಿ ಲಡ್ಡು, ಗುಳಿಗೆ ಪಾಯಸ, ಸಜ್ಜೆನಾಡು, ನವಣೆ ಕಟ್ಲೆಟ್ಟ್, ಪಪ್ಪಾಯಿ ಹಲ್ವ, ಸಜ್ಜೆ ಹಲ್ವ, ಸಿರಿಧಾನ್ಯ ಒಡೆ, ಮೆಂತ್ಯೆ ಸೊಪ್ಪಿನ ಒಡೆ, ಮೆಂತ್ಯೆ ಹಿಟ್ಟು, ರಾಗಿ ಮತ್ತು ಕ್ಯಾರೇಟ್ ಕೇಕ್, ಶಾಮೆ ಪುಡಿ ಮತ್ತು ಕಾಳುಕಡುಬು, ಹುರಿಕಡಲೆ ಚಿಕ್ಕಿ, ಇರಲೆಕಾಯಿ ಗೊಜ್ಜು, ಗೋದಿ ಹಲ್ವ, ಸಿಹಿ ಕಡುಬು, ನವಣೆ ಬಿಸಿಬೇಳೆ ಬಾತ್, ರಾಗಿ ದೋಸೆ, ನವಣೆ ಉಪ್ಪಿಟ್ಟು, ರಾಗಿ ಹಲ್ವ, ರಾಗಿ ಮಿಕ್ಸರ್, ಕಕ್ಕಡ ಸೊಪ್ಪು ಪಾಯಸ, ಸಿಹಿ ಗೆಣಸು ಖಾರ, ಇರಲೆ ಉಪ್ಪಿನಕಾಯಿ, ನವಣೆ ರೊಟ್ಟಿ, ಶುಂಠಿ ಚಟ್ನಿ, ಕೆಸಸಾರು, ಮಾವಿನಕಾಯಿ ಜೂಸು, ಕುಂಬಳ ಕೊಡಿ ಪಲ್ಯ, ಬರಗು ಒಡೆ, ಸಿರಿಧಾನ್ಯ ನಿಪ್ಪಟ್ಟು, ಅಡಿಕೆ ಪುಟ್ಟು, ನವಣೆ ಬರಗು ಹಲ್ವ, ಪತ್ರೋಡೆ ಬೇಂದಿ ಹೀಗೆ ಹಲವು ಖಾದ್ಯಗಳು ಸ್ಪರ್ಧೆಯಲ್ಲಿ ಗಮನ ಸೆಳೆದವು.
ಖಾರ ತಿನಿಸು, ಸಿಹಿ ತಿನಿಸು ಮತ್ತು ಮರೆತು ಹೋದ ಖಾದ್ಯಗಳಿಗೆ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಸಲಾಯಿತು. ಪ್ರಥಮ ಬಹುಮಾನವಾಗಿ 5 ಸಾವಿರ ರೂ., ದ್ವಿತೀಯ ಬಹುಮಾನವಾಗಿ 3 ಸಾವಿರ ರೂ., ಹಾಗೂ ತೃತೀಯ ಬಹುಮಾನವಾಗಿ 2 ಸಾವಿರ ರೂ. ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net