ಕರವೆ ಸ್ವಾಭಿಮಾನಿ ಬಣದ ನೆಲ್ಲಿಹುದಿಕೇರಿ ಶಾಖೆಗೆ ಪದಾಧಿಕಾರಿಗಳ ಆಯ್ಕೆ
Published on:
Copied
Follow Us
ಸಿದ್ದಾಪುರ:ರಾಜ್ಯಾದ್ಯಂತ ಭ್ರಷ್ಟಾಚಾರ ಹಾಗೂ ದೌರ್ಜನ್ಯಗಳ ವಿರುದ್ಧ ಹೋರಾಟ ನಡೆಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ವತಿಯಿಂದ ನೆಲ್ಯಹುದಿಕೇರಿ ಶಾಖೆಯ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಕಾರ್ಯದರ್ಶಿ ಸುರೇಶ್‌ಕುಮಾರ್ ನೆಲ್ಲಿಕಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸುರೇಶ್‌ಕುಮಾರ್ ನೆಲ್ಲಿಕಲ್ ಮಾತನಾಡಿ, ಕನ್ನಡ ಶಾಲೆಗಳು ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ಉಳಿವಿಗಾಗಿ ಸಂಘಟನೆ ಪಣ ತೊಟ್ಟಿದ್ದು, ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಗೆ ಅಗತ್ಯ ಸೌಲಭ್ಯ ಒದಗಿಸಿ ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸ ನಡೆಯಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಂಘಟನೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಜಿಲ್ಲೆಯ ಹಲವೆಡೆ ವೈದ್ಯರ ಕೊರತೆ ಹಾಗೂ ಔಷಧ ಅಭಾವ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಕರವೆ ಸ್ವಾಭಿಮಾನಿ ಬಣದ ನೇತೃತ್ವದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.
ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಜನತೆಗೆ ತಲುಪುವಂತೆ ಮಾಡಲು ಹಾಗೂ ಭ್ರಷ್ಟಾಚಾರಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಂದು ಗ್ರಾಮದಲ್ಲೂ ಸಂಘಟನೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಕರೆನೀಡಿದರು.
ಸಜಿಲ್ ಮಾತನಾಡಿ, ನೆಲ, ಜಲ, ನಾಡು-ನುಡಿ, ಸಂಸ್ಕೃತಿ ಹಾಗೂ ಪರಿಸರ ರಕ್ಷಣೆಗೆ ಎಲ್ಲರೂ ಬದ್ಧತೆಯಿಂದ ಶ್ರಮಿಸಬೇಕು ಎಂದು ಮನವಿ ಮಾಡಿದರು.
ನೆಲ್ಯಹುದಿಕೇರಿ ಶಾಖೆಯ ನೂತನ ಅಧ್ಯಕ್ಷರಾಗಿ ಪಿ.ಆರ್.ಹರೀಶ್, ಉಪಾಧ್ಯಕ್ಷರಾಗಿ ಎ.ಎಂ.ರಶಾದ್, ಕಾರ್ಯದರ್ಶಿಯಾಗಿ ಆರ್.ನಂದ ಅವರನ್ನು ಆಯ್ಕೆ ಮಾಡಲಾಯಿತು. ಏಪ್ರಿಲ್ 8ರಂದು ಕುಶಾಲನಗರದಲ್ಲಿ ಅಧ್ಯಕ್ಷ ಪಿ.ಕೃಷ್ಣೇಗೌಡ ನೇತೃತ್ವದಲ್ಲಿ ಜಿಲ್ಲಾ ಸಮಿತಿಯ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಲಾಯಿತು.
ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಚಂದ್ರು, ಉಪಾಧ್ಯಕ್ಷ ರಾಜಶೇಖರ ಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್, ಗೌರವಾಧ್ಯಕ್ಷೆ ವಾಣಿ ಮಾಚಿಮಾಡ ಹಾಗೂ ಪದಾಧಿಕಾರಿಗಳಾದ ಚಂದ್ರಶೇಖರ್, ಜಯರಾಜ್, ಸತೀಶ್ ಕುಮಾರ್, ರವಿ, ಚೇತನ್, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.