ಆಣೆ ಪ್ರಮಾಣಕ್ಕೆ ಪ್ರಸಿದ್ಧಿ ಶ್ರೀಮಂದತವ್ವ ದೇವಿ

ಬೆಕ್ಕೆಸುಡ್ಲೂರಿನ ಶ್ರೀ ಮಂದತವ್ವ ದೇವಸ್ಥಾನದ ಹೆಬ್ಬಾಗಿಲು.
ಬೆಕ್ಕೆಸುಡ್ಲೂರಿನ ಶ್ರೀ ಮಂದತವ್ವ ದೇವಸ್ಥಾನದ ಹೆಬ್ಬಾಗಿಲು.
Published on

ಪ್ರಮುಖ ಮುಖ್ಯಾಂಶಗಳು

  • ಕೋರ್ಟ್, ಕಚೇರಿಗಳಲ್ಲಿ ಬಗೆಹರಿಯದ ವ್ಯಾಜ್ಯಗಳು ಇತ್ಯರ್ಥ
  • ಭಯ, ಭಕ್ತಿಯಿಂದ ನಡೆದುಕೊಳ್ಳುವ ಪವಿತ್ರ ಕ್ಷೇತ್ರ
ಪೊನ್ನಂಪೇಟೆ: ಸಾವಿರಾರು ವರ್ಷಗಳ ಇತಿಹಾಸವಿರುವ ಬೆಕ್ಕೆಸುಡ್ಲೂರಿನ ಶ್ರೀ ಮಂದತವ್ವ ದೇವಸ್ಥಾನದಲ್ಲಿ ದೇವಿಗೆ ಭಕ್ತರು ಭಯ, ಭಕ್ತಿಯಿಂದ ನಡೆದುಕೊಳ್ಳುತ್ತಾರೆ.
ಯಾವುದೇ ಗುಡಿ ಗೋಪುರಗಳಿಲ್ಲದೆ ಕೇವಲ ಮರಗಿಡಗಳ ಮಧ್ಯೆ ಇರುವ ಕಲ್ಲಿನ ಮೂರ್ತಿಯಷ್ಟೇ ಕಾಣಸಿಗುತ್ತದೆ. ಸುಮಾರು ಒಂದು ಎಕರೆ ವಿಸ್ತೀರ್ಣ ಇರುವ ಮಣ್ಣಿನ ದಿಣ್ಣೆಯ ಮೇಲೆ ಮಂದತವ್ವ ತಾಯಿ ನೆಲೆ ನಿಂತಿದ್ದಾಳೆ. ಪೊನ್ನಂಪೇಟೆಯಿಂದ 14 ಕಿಲೋಮೀಟರ್ ಕಾನೂರು ರಸ್ತೆಗಾಗಿ ಹೋಗುವಾಗ ದಕ್ಷಿಣ ಕೊಡಗಿಗೆ ಚಿರಪರಿಚಿತ ಊರಾದ ಬೆಕ್ಕೆಸುಡ್ಲೂರುವಿನಲ್ಲಿ ವಿಶಿಷ್ಟ ದೇವಸ್ಥಾನವೇ ಮಂದತವ್ವ ದೇವಾಲಯವಾಗಿದೆ.
ಇಲ್ಲಿನ ಕಲ್ಲಿನ ಮೆಟ್ಟಿಲುಗಳಲ್ಲಿ ಹಳೆಗನ್ನಡದಲ್ಲಿ ಕೆತ್ತನೆ ಕೆಲಸಗಳನ್ನು ಮಾಡಿರುವುದು ಈ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ ಎಂಬುದಕ್ಕೆ ಮುಖ್ಯವಾದ ಸಾಕ್ಷಿಯಾಗಿದೆ. 1800-1820ನೇ ಇಸವಿಯ ನಡುವೆ ಟಿಪ್ಪು ಈ ದೇವಿಯ ಸ್ಥಾನಕ್ಕೆ ದಾಳಿ ಮಾಡಲು ಬಂದಾಗ ಇದರ ಸುತ್ತಲೂ ಸುಮಾರು ಎರಡು ಕಿಲೋಮೀಟರ್ ಉದ್ದ ಹಾಗೂ 30 ಅಡಿ ಆಳದ ಕಂದಕ(ಕಡಂಗ್) ಇದ್ದ ಕಾರಣ ಸುಲಭವಾಗಿ ದೇವಸ್ಥಾನವನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಮತ್ತು ಅವನ ಮೇಲೆ ಹೆಜ್ಜೇನು ದಾಳಿ ಮಾಡಿದ ಪರಿಣಾಮ ಆ ಸ್ಥಳದಿಂದ ಹಿಮ್ಮೆಟ್ಟಿ ಹೋದ ಇತಿಹಾಸವಿದೆ. ಸ್ವಲ್ಪ ಸಮಯದ ನಂತರ ಟಿಪ್ಪು ಈ ದೇವಸ್ಥಾನದ ಪಕ್ಕದಲ್ಲಿ ಇರುವ ಶ್ರೀಕೃಷ್ಣನ ಮತ್ತೊಂದು ದೇವಸ್ಥಾನಕ್ಕೆ ದಾಳಿ ಮಾಡಿ ಅಪಾರ ಸಂಖ್ಯೆಯ ನಗನಾಣ್ಯಗಳನ್ನು ಹೊತ್ತೊಯ್ದ. 12 ವರ್ಷಗಳ ಹಿಂದೆ ಈ ಶ್ರೀಕೃಷ್ಣ ದೇವಸ್ಥಾನವನ್ನು ಇಲ್ಲಿನ ಗ್ರಾಮಸ್ಥರು ಮರುನಿರ್ಮಾಣ ಮಾಡಿದ್ದಾರೆ.

ವನದೇವತೆ ಆಗಿರುವುದರಿಂದ ಕಟ್ಟಡ ನಿರ್ಮಾಣ ಇಲ್ಲ

ಮಂದತವ್ವ ತಾಯಿ ವನದೇವತೆ ಆಗಿರುವುದರಿಂದ ಇದರ ಸ್ಥಾನದಲ್ಲಿ ಯಾವುದೇ ಕಟ್ಟಡಗಳನ್ನು ಕಟ್ಟುವ ಆಗಿಲ್ಲ, ಇದರ ಮೂಲ ಸ್ವರೂಪವನ್ನೇ ಇದುವರೆಗೂ ಉಳಿಸಿಕೊಂಡು ಬರಲಾಗಿದೆ.
ಇಲ್ಲಿನ ವಿಶೇಷತೆ ಎಂದರೆ ಭಕ್ತರು ಪೂಜೆ-ಪುನಸ್ಕಾರಗಳನ್ನು ಮಾಡುವಂತಿಲ್ಲ, ಅರ್ಚಕರಿಲ್ಲ, ಗಂಟೆನಾದ, ವಾದ್ಯಗಳಿಲ್ಲ. ಈ ತಾಯಿಯ ಸನ್ನಿಧಿಗೆ ಬಂದು ಮೌನವಾಗಿ ಪ್ರಾರ್ಥಿಸಿ ಹೋಗುವುದೇ ಇಲ್ಲಿನ ಪದ್ಧತಿ. ಈ ದೇವಸ್ಥಾನಕ್ಕೆ ಸಂಬಂಧಿಸಿದ ಉಪದೇವರಾದ ಮಹಾದೇವ, ಅಯ್ಯಪ್ಪ, ಆದಿ ಮಹಾದೇವ, ಭದ್ರಕಾಳಿ, ಬೊಕ್ಕಿ ಮಹಾದೇವ ಮತ್ತು ಶ್ರೀ ಕೃಷ್ಣನಿಗೆ 3 ಕಿಲೋಮೀಟರ್ ಆಸುಪಾಸಿನಲ್ಲಿ ಸ್ಥಾನ ನೀಡಲಾಗಿದೆ.
ಮಂದತವ್ವ ತಾಯಿ ದಕ್ಷಿಣ ಕೊಡಗಿನಲ್ಲಿ ಹೆಸರುವಾಸಿಯಾಗಲು ಮುಖ್ಯ ಕಾರಣ ಇಲ್ಲಿನ ನ್ಯಾಯಪೀಠ. ವರ್ಷಾನುಗಟ್ಟಲೆ ಕೋರ್ಟ್ ಕಚೇರಿಗಳಲ್ಲಿ ಇತ್ಯರ್ಥವಾಗದ ಎಷ್ಟೋ ವ್ಯಾಜ್ಯಗಳು ಇದರ ನ್ಯಾಯಪೀಠದಲ್ಲಿ ಇತ್ಯರ್ಥವಾಗಿದೆ. ದೇವಸ್ಥಾನ ಆಡಳಿತ ಮಂಡಳಿ ಮತ್ತು ತಕ್ಕ ಮುಖ್ಯಸ್ಥರನ್ನು ಒಳಗೊಂಡ ಸಮಿತಿಯವರ ನ್ಯಾಯಪೀಠವಿದ್ದು ಇಲ್ಲಿಗೆ ಬರುವ ವ್ಯಾಜ್ಯಗಳು ಇತ್ಯರ್ಥವಾಗದೆ ಹೋದ ಇತಿಹಾಸವೇ ಇಲ್ಲ. ಇದು ಆಣೆ-ಪ್ರಮಾಣಕ್ಕೆ ಹೆಸರುವಾಸಿಯಾಗಿದೆ, ತಪ್ಪು ಮಾಡಿದವರು ಆಣೆ ಪ್ರಮಾಣ ಮಾಡಲು ಹಿಂದೇಟು ಹಾಕುತ್ತಾರೆ, ಇದಕ್ಕೆ ಮುಖ್ಯ ಕಾರಣ ದೇವಿಯ ಮೇಲಿರುವ ಭಯ-ಭಕ್ತಿ. ಇದಕ್ಕೆ ವಿರುದ್ಧವಾಗಿ ನಡೆದರೆ ಅದಕ್ಕೆ ತಕ್ಕ ಪ್ರತಿಫಲ ತಾಯಿಯಿಂದ ಸಿಗುತ್ತದೆ ಎಂಬ ನಂಬಿಕೆ ಇಲ್ಲಿನ ಗ್ರಾಮಸ್ಥರದ್ದು.
ಇದಕ್ಕೆ ತಾಜಾ ಉದಾಹರಣೆಯೆಂದರೆ- ಇತ್ತೀಚೆಗೆ ಕೋರ್ಟಿನಲ್ಲಿ ಬಗೆಹರಿಸಲಾಗದ ಇಬ್ಬರ ನಡುವಿನ ದೊಡ್ಡ ಮೊತ್ತದ ಹಣಕಾಸಿನ ಪ್ರಕರಣ ಇಲ್ಲಿ ಇತ್ಯರ್ಥವಾಗಿದೆ ಎಂದು ಇಲ್ಲಿನ ನ್ಯಾಯಪೀಠ ಸಮಿತಿಯವರು ಸಂತೋಷದಿಂದ ಹೇಳುತ್ತಾರೆ. ಇಲ್ಲಿ ನ್ಯಾಯ ತೀರ್ಮಾನಕ್ಕೆ ಹೋಗುವುದಾದರೆ ನಿಗದಿತ ಸಮಯಕ್ಕೆ ಮುಂಚಿತವಾಗಿ ಅರ್ಜಿದಾರರು ಇಲ್ಲಿನ ಆಡಳಿತ ಮಂಡಳಿಗೆ ಅರ್ಜಿ ನೀಡಿ, ನಂತರ ಪ್ರತಿವಾದಿಯನ್ನು ಆಡಳಿತ ಮಂಡಳಿಯವರು ಸಂಪರ್ಕಿಸಿ ಅವರ ಒಪ್ಪಿಗೆ ಪಡೆದ ನಂತರ ನಿಗದಿತ ದಿನಾಂಕದಂದು ನೋಟಿಸ್ ಕೊಟ್ಟು ದೇವರ ಕೋಲ್‌ಮಂದ್‌ನಲ್ಲಿ ವಿಚಾರಣೆ ನಡೆಸಲಾಗುತ್ತದೆ. ಇಲ್ಲಿ ಆಸ್ತಿ ವ್ಯವಹಾರ, ವಿಚ್ಛೇದನ ಮುಂತಾದ ರಾಜಿ ತೀರ್ಮಾನವನ್ನೂ ಮಾಡಿದ ಬೇಕಾದಷ್ಟು ಉದಾಹರಣೆಗಳಿವೆ. ಇಲ್ಲಿನ ಆಡಳಿತ ಮಂಡಳಿಯವರ ಅನುಮತಿ ಇಲ್ಲದೆ ಯಾರೂ ಆಣೆ ಪ್ರಮಾಣ ಮಾಡುವಂತಿಲ್ಲ.

ಬೇಡು ಹಬ್ಬ ವಿಶೇಷ

ಇಲ್ಲಿನ ವಿಶೇಷತೆ ಎಂದರೆ ಮೂರು ವರ್ಷಗಳಿಗೊಮ್ಮೆ ನಡೆಯುವ ಬೇಡು ಹಬ್ಬ. ಏಳು ದಿನಗಳ ಕಾಲ ನಡೆಯುವ ಈ ಬೇಡು ಹಬ್ಬ ವಿಶಿಷ್ಟವಾದುದು. ಒಣಗಿದ ಬಿದಿರಿನಿಂದ ಬೃಹತ್ ಗಾತ್ರದಲ್ಲಿ ಬೆಂಕಿ ಹಾಕಲಾಗುತ್ತದೆ. ಈ ಬಿದಿರನ್ನು ದೇವಸ್ಥಾನದ ವತಿಯಿಂದಲೇ ಕಡಿದು ಒಣಗಿಸಿ ನಂತರ ಹಬ್ಬದ ವಿಶೇಷವಾಗಿ ಬೆಂಕಿ ಹಾಕಲಾಗುತ್ತದೆ. ಹಬ್ಬ ಮುಗಿದ ವರ್ಷವಿಡೀ ಇಲ್ಲಿಗೆ ಬರುವ ಭಕ್ತರು ಈ ಬೆಂಕಿಯ ಬೂದಿಯನ್ನು ವಿಭೂತಿಯಾಗಿ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗಿ ಭಕ್ತಿಯಿಂದ ಪೂಜಿಸುತ್ತಾರೆ.
ಶ್ರೀಮಂದತವ್ವ ಪಾರ್ವತಿ ಅವತಾರವಾಗಿದ್ದು, ಇಲ್ಲಿ ಯಾವುದೇ ನಿತ್ಯ ಪೂಜೆ ನಡೆಯುವುದಿಲ್ಲ. ಈ ದೇವಸ್ಥಾನದಲ್ಲಿ ಹೂ, ಹಣ್ಣು, ಕಾಯಿ ಅರ್ಪಿಸುವುದು ನಿಷೇಧಿಸಲಾಗಿದ್ದು ಭಕ್ತರ ಪ್ರಾರ್ಥನೆಯೊಂದೇ ಇಲ್ಲಿ ನಿತ್ಯ ನಡೆಯುವುದು. ಈ ಸ್ಥಳವು ಆಣೆ ಪ್ರಮಾಣಕ್ಕೆ ಬಹಳ ಹಿಂದಿನಿಂದಲೂ ಪ್ರಖ್ಯಾತಿ ಪಡೆದಿದ್ದು, ಬಹಳ ಕಟ್ಟುನಿಟ್ಟಿನ, ಸತ್ಯ, ಪ್ರಾಮಾಣಿಕತನದಿಂದ ಬಂದು ಬೇಡಿಕೊಂಡರೆ ಭಕ್ತರ ಇಷ್ಟಾರ್ಥಗಳು ನೆರವೇರಲಿವೆ.
ಮಾಚಂಗಡ ನಿರನ್ ಮೊಣ್ಣಪ್ಪ ಗೌರವ ಕಾರ್ಯದರ್ಶಿ, ದೇವಸ್ಥಾನ ಆಡಳಿತ ಮಂಡಳಿ, ಊರಿನ ದೇವಿ ತಕ್ಕರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net