ಆತ್ಮಸ್ಥೈರ್ಯ ಇದ್ದರೆ ಮಾತ್ರ ಸಾಧನೆ ಸಾಧ್ಯ

ಶನಿವಾರಸಂತೆಯಲ್ಲಿ ಏರ್ಪಡಿಸಿದ್ದ ‘ನಾನು ಮತ್ತು ಪರೀಕ್ಷೆ’ ಕಾರ್ಯಗಾವನ್ನು ಹಿರಿಯ ವಕೀಲ ಚಂದ್ರಮೌಳಿ ಉದ್ಘಾಟಿಸಿದರು. ಮನೆಹಳ್ಳಿ ಮಠದ ಶ್ರೀಮಹಂತ ಶಿವಲಿಂಗಸ್ವಾಮೀಜಿ, ಸಂಪನ್ಮೂಲ ವ್ಯಕ್ತಿ ಸಾಗರ್, ಬಿಇಒ ಕೃಷ್ಣಪ್ಪ ಮುಂತಾದವರು ಇತರರಿದ್ದರು.
ಶನಿವಾರಸಂತೆಯಲ್ಲಿ ಏರ್ಪಡಿಸಿದ್ದ ‘ನಾನು ಮತ್ತು ಪರೀಕ್ಷೆ’ ಕಾರ್ಯಗಾವನ್ನು ಹಿರಿಯ ವಕೀಲ ಚಂದ್ರಮೌಳಿ ಉದ್ಘಾಟಿಸಿದರು. ಮನೆಹಳ್ಳಿ ಮಠದ ಶ್ರೀಮಹಂತ ಶಿವಲಿಂಗಸ್ವಾಮೀಜಿ, ಸಂಪನ್ಮೂಲ ವ್ಯಕ್ತಿ ಸಾಗರ್, ಬಿಇಒ ಕೃಷ್ಣಪ್ಪ ಮುಂತಾದವರು ಇತರರಿದ್ದರು.
Published on
ಶನಿವಾರಸಂತೆ: ಆತ್ಮಸ್ಥೈರ್ಯ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹೈಕೋರ್ಟ್‌ನ ಹಿರಿಯ ವಕೀಲ ಎಚ್.ಎಸ್.ಚಂದ್ರಮೌಳಿ ಅಭಿಪ್ರಾಯಪಟ್ಟರು.
ಶನಿವಾರಸಂತೆ ಶ್ರೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಅಂಕನಹಳ್ಳಿ ತಪೋವನ ಕ್ಷೇತ್ರ ಮನೆಹಳ್ಳಿ ಮಠದ ಅನಘ ಫೌಂಡೇಷನ್ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿಯ ಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ನಾನು ಮತ್ತು ಪರೀಕ್ಷೆೆ ಎಂಬ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಕೆಯ ಜತೆಯಲ್ಲಿ ಕಷ್ಟ, ನೋವಿನ ಅರಿವು ಇರಬೇಕು, ಕೀಳರಿಮೆ ಬಿಟ್ಟು ಆತ್ಮವಿಶ್ವಾಸದ ಮತ್ತು ಆತ್ಮಸ್ಥೈರ್ಯದ ಮನೋಭಾವನೆ ಬೆಳೆಸಿಕೊಂಡರೆ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.
ಇಂದಿನ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ಎಲ್ಲ ರೀತಿಯ ಅನುಕೂಲಗಳಿವೆ, ಎಐ ಯಂತಹ ಆಧುನಿಕ ತಂತ್ರಜ್ಞಾನ ವ್ಯವಸ್ಥೆಗಳಿವೆ. ಆದರೆ ಅವುಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಮುಂದೆ ಸಮಾಜದಲ್ಲಿ ಜನರು ತಮ್ಮನ್ನು ಗುರುತಿಸುವಷ್ಟು ಮಟ್ಟಿಗೆ ಬೆಳೆಯಬೇಕು ಎಂದು ಕಿವಿಮಾತು ಹೇಳಿದರು.
ಮನೆಹಳ್ಳಿ ಮಠದ ಮಠಾಧೀಶ ಹಾಗೂ ಅನಘ ಫೌಂಡೇಷನ್ ಅಧ್ಯಕ್ಷ ಶ್ರೀಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಶಿಕ್ಷಣದಿಂದ ರಾಷ್ಟ್ರ ಅಭಿವೃದ್ಧಿ ಹೊಂದುತ್ತದೆ. ಈ ದಿಸೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಪರಿಪೂರ್ಣ ವಿದ್ಯಾವಂತರಾಗಬೇಕು ಮತ್ತು ವಿದ್ಯಾರ್ಥಿಗಳಿಗೆ ಹತ್ತನೇ ತರಗತಿ ಪರೀಕ್ಷೆ ಶಿಕ್ಷಣ ಪ್ರಥಮ ಮೆಟ್ಟಿಲಾಗಿರುತ್ತದೆ. ಯಾವುದೆ ಹಿಂಜರಿಕೆ ಇಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು ಎಂಬ ಉದ್ದೇಶದಿಂದ ನಮ್ಮ ಮಠದ ಮೂಲ ಗುರುಗಳ ಹೆಸರಿನಲ್ಲಿ ನಮ್ಮ ಭಾಗದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ನಮ್ಮ ಮಠದ ವತಿಯಿಂದ ನಾನು ಮತ್ತು ಪರೀಕ್ಷೆ ಎಂಬ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಭ್ಯಾಸದತ್ತ ಗಮನ ಹರಿಸಬೇಕು, ಕೀಳರಿಮೆ ಬಿಟ್ಟು ಮಾರ್ಗದರ್ಶಕರ ಮಾಹಿತಿ, ಸಲಹೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಲು ಸಾಧ್ಯವಾಗುತ್ತದೆ ಎಂದರು. ಕೊಡಗು ಜಿಲ್ಲೆಯಲ್ಲಿ ಸೋಮನವಾರಪೇಟೆ ತಾಲೂಕು ಹತ್ತನೇ ತರಗತಿ ಪರೀಕ್ಷೆ ಉತ್ತಮ ಫಲಿತಾಂಶ ತಂದುಕೊಡುತ್ತಿದೆ. ಮುಂದಿನ ಸಾಲಿನಲ್ಲೂ ಮತ್ತಷ್ಟು ಫಲಿತಾಂಶ ತಂದುಕೊಡಬಹುದೆಂಬ ನಿರೀಕ್ಷೆಯನ್ನು ಶಿಕ್ಷಣ ಇಲಾಖೆ ಇಟ್ಟುಕೊಂಡಿದೆ ಎಂದರು.
ಕಾರ್ಯಾಗಾರದಲ್ಲಿ ವಕೀಲ ಜಗದೀಶ್ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಎ.ಎಚ್.ಸಾಗರ್, ಗ್ಯಾರೆಂಟಿ ಅನುಸ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಿ.ಎಂ.ಕಾಂತರಾಜ್, ಶನಿವಾರಸಂತೆ ಕ್ಲಸ್ಟರ್ ಸಿಆರ್‌ಪಿ ಸಿ.ಕೆ.ದಿನೇಶ್, ಕೊಡ್ಲಿಪೇಟೆ ಕ್ಲಸ್ಟರ್ ಸಿಒಆರ್‌ಪಿ ರವೀಶ್, ಉಪನ್ಯಾಸಕ ಕೆ.ಪಿ.ಜಯಕುಮಾರ್, ಪ್ರಮುಖರಾದ ಎಸ್.ಸಿ.ಶರತ್ ಶೇಖರ್, ಡಿ.ಬಿ.ಧರ್ಮಪ್ಪ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net