ಬಸವನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದ್ವಿತೀಯ ಪಿಯು ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಡಾ.ದೀಪಿಕಾ ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಉ.ರಾ.ನಾಗೇಶ್, ಶ್ರೀದೇವಿ, ಶಿಕ್ಷಕರು ಇದ್ದರು.
ಕುಶಾಲನಗರ: ವಿದ್ಯಾರ್ಥಿಗಳು ಏಕಾಗ್ರತೆ, ಸಮಯ ಪಾಲನೆ ಹಾಗೂ ನಿರಂತರ ಅಧ್ಯಯನದಿಂದ ಮಾತ್ರ ಶೈಕ್ಷಣಿಕವಾಗಿ ಗುರಿ ಸಾಧಿಸಲು ಸಾಧ್ಯ ಎಂದು ಕೂಡಿಗೆಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದೀಪಿಕಾ ಮೂರ್ತಿ ಹೇಳಿದರು.
ಬಸವನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದ್ವಿತೀಯ ಪಿಯು ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜ್ಞಾನ ಹಾಗೂ ತಂತ್ರಜ್ಞಾನದ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಪೈಪೋಟಿ ಹೆಚ್ಚಿದೆ. ಆದರೆ, ಅಧ್ಯಯನದ ಮೂಲಕ ಜ್ಞಾನ ಸಂಪಾದಿಸಿದರೆ ನಮ್ಮ ಗುರಿ ಈಡೇರುತ್ತದೆ. ಹದಿ ಹರೆಯದ ವಿದ್ಯಾರ್ಥಿನಿಯರು ವೈಯಕ್ತಿಕ ಸ್ವಚ್ಛತೆಯತ್ತ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಕಲಾ ಶಿಕ್ಷಕ ಉ.ರಾ.ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ನಕಾರಾತ್ಮಕ ವಿಚಾರಗಳನ್ನು ದೂರ ಮಾಡಿ ಸಕಾರಾತ್ಮಕ ಚಿಂತನೆಗಳತ್ತ ಗಮನಹರಿಸಬೇಕು. ವಾಲ್ಮೀಕಿ, ಕನಕದಾಸ, ಬುದ್ದ, ಬಸವಣ್ಣನವರ ಚಿಂತನೆಗಳನ್ನು ಅರಿಯಿರಿ. ಪಾಲಕರನ್ನು ಸಮಾಜ ನಿಮ್ಮ ಮೂಲಕ ಗುರುತಿಸುವ ಮಟ್ಟಕ್ಕೆ ಸಾಧನೆಯ ಶಿಖರ ಏರಬೇಕು. ಶಿಕ್ಷಕರು ತೋರಿಸಿದ ಬೆಳಕಿನ ಸನ್ನಡತೆಯ ಮಾರ್ಗದಲ್ಲಿ ವಿದ್ಯಾರ್ಥಿಗಳು ನಡೆಯಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಾದ ವಿನುತಾ, ಸಿಂಚನಾ, ಅಭಿ, ಶ್ವೇತಾ, ದಿಗಂತ್ ಶಾಲೆಯ ಅನುಭವಗಳನ್ನು ಹಂಚಿಕೊಂಡರು. ಪ್ರಾಂಶುಪಾಲೆ ಶ್ರೀದೇವಿ, ಶಿಕ್ಷಕರಾದ ಕೆ.ಆರ್.ರಮೇಶ್, ಪುಟ್ಟರಾಜು, ಶಿವಕುಮಾರ, ಮಹೇಶ್, ಶಬರಿ ಗಿರೀಶ್, ಪಾಲಕ ಸಮಿತಿ ಪದಾಧಿಕಾರಿಗಳಾದ ನಾಗೇಶ್, ಪ್ರಮೋದ್, ಪುಷ್ಪಲತಾ, ಲಕ್ಷ್ಮೀ, ತುಳಸಿ, ಅನಿತಾ ಇದ್ದರು.