ಅರೆಭಾಷೆ ಕಲಿಕೆ, ಅಭಿವೃದ್ಧಿಗೆ ಶ್ರಮಿಸಿ

ಅರೆಭಾಷೆ ಗ್ರಾಮೋತ್ಸವ ಕಾರ್ಯಕ್ರಮದ ಮೆರವಣಿಗೆಗೆ ಶಾಸಕ ಡಾ.ಮಂತರ್ ಗೌಡ ಅವರು ಚಾಲನೆ ನೀಡಿದರು. ಸದಾನಂದ ಮಾವಜಿ, ಕೊಲ್ಯದ ಗಿರೀಶ್, ಇತರರಿದ್ದರು.
ಅರೆಭಾಷೆ ಗ್ರಾಮೋತ್ಸವ ಕಾರ್ಯಕ್ರಮದ ಮೆರವಣಿಗೆಗೆ ಶಾಸಕ ಡಾ.ಮಂತರ್ ಗೌಡ ಅವರು ಚಾಲನೆ ನೀಡಿದರು. ಸದಾನಂದ ಮಾವಜಿ, ಕೊಲ್ಯದ ಗಿರೀಶ್, ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅರೆಭಾಷೆ ಕಲಿಕೆ, ಅಭಿವೃದ್ಧಿಗೆ ಶ್ರಮಿಸಿ
  • ಅರೆಭಾಷೆ ಗ್ರಾಮೋತ್ಸವದಲ್ಲಿ ಶಾಸಕ ಡಾ.ಮಂತರ್ ಗೌಡ
ಮಡಿಕೇರಿ: ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಕಾರ್ಯಕ್ರಮಗಳು ಗ್ರಾಮ ಮಟ್ಟಕ್ಕೂ ತಲುಪುತ್ತಿದ್ದು, ಅರೆಭಾಷೆ ಕಲಿಕೆ ಮತ್ತು ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸುವಂತಾಗಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಮರಗೋಡು ಗೌಡ ಸಮಾಜ ಇವರ ಸಂಯುಕ್ತಾಶ್ರಯದಲ್ಲಿ ಮರಗೋಡು ಗೌಡ ಸಮಾಜದ ಆವರಣದಲ್ಲಿ ಮಂಗಳವಾರ ಅರೆಭಾಷೆ ಗ್ರಾಮೋತ್ಸವ ಕಾರ್ಯಕ್ರಮದ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕನ್ನಡದ ಉಪ ಭಾಷೆಯಾದ ಅರೆಭಾಷೆಯನ್ನು ಉಳಿಸಿ ಬೆಳೆಸಿದಲ್ಲಿ ಕನ್ನಡ ಭಾಷೆಯನ್ನೂ ಸಹ ಮತ್ತಷ್ಟು ಔನ್ನತ್ಯಕ್ಕೆ ಕೊಂಡೊಯ್ಯಲು ಸಾಧ್ಯ. ಆ ನಿಟ್ಟಿನಲ್ಲಿ ಅರೆಭಾಷೆಯನ್ನು ಮಕ್ಕಳು ಮತ್ತು ಯುವಜನರಿಗೆ ಕಲಿಸುವಂತಾಗಬೇಕು. ಅರೆಭಾಷೆಯು ಒಂದು ವಿಶಿಷ್ಟ ಭಾಷೆಯಾಗಿದ್ದು, ಕನ್ನಡ ಭಾಷೆಗೆ ಹತ್ತಿರವಾಗಿದೆ. ಆ ಹಿನ್ನೆಲೆಯಲ್ಲಿ ಅರೆಭಾಷೆ ಸಂಸ್ಕೃತಿ, ಸಾಹಿತ್ಯ, ಪರಂಪರೆ, ಆಚಾರ-ವಿಚಾರಗಳನ್ನು ಉಳಿಸಿಕೊಂಡು ಹೋಗಬೇಕು ಎಂದು ಸಲಹೆ ಮಾಡಿದರು.
ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಅಕಾಡೆಮಿ ಮೂಲಕ ಹಲವು ಪುಸ್ತಕಗಳನ್ನು ಹೊರತರಲಾಗುತ್ತಿದೆ. ಹಾಗೆಯೇ ತ್ರೈಮಾಸಿಕ ಹಿಂಗಾರ ಪುಸ್ತಕವನ್ನು ಪ್ರಕಟಿಸಲಾಗುತ್ತಿದ್ದು, ಇದನ್ನು ಪ್ರತಿ ಕುಟುಂಬದವರು ಪಡೆಯುವಂತಾಗಬೇಕು. ಪುಸ್ತಕ ಅಧ್ಯಯನದಿಂದ ಅರೆಭಾಷೆ ಮತ್ತು ಸಾಹಿತ್ಯ ಬೆಳವಣಿಗೆಗೆ ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಮಕ್ಕಳು ಅರೆಭಾಷೆ ಕಲಿಕೆಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.
ಅರೆಭಾಷೆಯು ಇಂದು ವ್ಯವಹಾರಿಕ ಭಾಷೆಯಾಗಿ ಬೆಳೆದಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಮಾತನಾಡಲು ಹಿಂಜರಿಕೆ ಪಡದೆ, ಎಲ್ಲರೂ ಅರೆಭಾಷೆ ಮಾತನಾಡುವಂತಾಗಬೇಕು. ಶಾಲಾ ಕಾಲೇಜುಗಳಲ್ಲಿ ಅರೆಭಾಷೆ ಸಂಘಗಳನ್ನು ಸ್ಥಾಪಿಸುವ ಮೂಲಕ ಅರೆಭಾಷೆ ಕಲಿಕಾ ಬೆಳವಣಿಗೆಗೆ ಶ್ರಮಿಸಲಾಗಿದೆ. ಆ ನಿಟ್ಟಿನಲ್ಲಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಗಳ ಪರಿಚಯಕ್ಕೆ ಅನುಕೂಲವಾಗಿದೆ. ಅರೆಭಾಷೆಯಲ್ಲಿ ನಾಟಕ ಪ್ರದರ್ಶನ ಏರ್ಪಡಿಸುವ ಮೂಲಕ ಅರೆಭಾಷೆಯನ್ನು ಎಲ್ಲರಿಗೂ ತಲುಪಿಸುವಲ್ಲಿ ಮುಂದಾಗಲಾಗಿದೆ. ಹಲವು ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಐನ್‌ಮನೆಗಳ ಸಂಸ್ಕೃತಿ ಮತ್ತು ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಆರಂಭದಿಂದ ಇಲ್ಲಿಯವರೆಗೂ ಉತ್ತಮ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ಅರೆಭಾಷೆ ಸಂಸ್ಕೃತಿ, ಸಾಹಿತ್ಯ, ಕಲೆಗಳು, ಪರಂಪರೆ ಬಗ್ಗೆ ಎಲ್ಲೆಡೆ ಪಸರಿಸುವಲ್ಲಿ ಶ್ರಮಿಸಲಾಗುತ್ತಿದೆ. ಅನೇಕ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಅರೆಭಾಷೆ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಮಂದ್ರೀರ ಮೋಹನ್‌ದಾಸ್ ಮಾತನಾಡಿ, ಅರೆಭಾಷೆ ಸಂಸ್ಕೃತಿ, ಸಾಹಿತ್ಯ, ಕಲೆಗಳನ್ನು ಉಳಿಸುವಲ್ಲಿ ಗ್ರಾಮೋತ್ಸವ ಮತ್ತು ಗಡಿನಾಡ ಉತ್ಸವ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಮರಗೋಡು ಗೌಡ ಸಮಾಜದ ಅಧ್ಯಕ್ಷ ಕಟ್ಟೆಮನೆ ಜನಾರ್ಧನ ಮಾತನಾಡಿ, ಅರೆಭಾಷೆಯನ್ನು ಮತ್ತಷ್ಟು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಭಾಷೆ ಉಳಿದರೆ ಸಮಾಜ ಉಳಿಯಲು ಸಾಧ್ಯ. ಹಾಗೆಯೇ ಅನಾದಿಕಾಲದಿಂದಲೂ ಉಳಿಸಿಕೊಂಡು ಬಂದಿರುವ ಅರೆಭಾಷೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದರು.
ಮೈಸೂರಿನ ಗೌಡ ವಿದ್ಯಾಸಂಘದ ಮಾಜಿ ಅಧ್ಯಕ್ಷ ತೋಟಂಬೈಲು ಮನೋಹರ್ ಮಾತನಾಡಿ, ಅರೆಭಾಷೆಯನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಪ್ರೋತ್ಸಾಹಿಸಬೇಕು. ಅರೆಭಾಷೆಯನ್ನು ಹಳ್ಳಿಯಿಂದ ಡೆಲ್ಲಿಯವರೆಗೆ ಕೊಂಡೊಯ್ದು ಅರೆಭಾಷೆ ಮಹತ್ವವನ್ನು ತಿಳಿಸುವುದು ಶ್ಲಾಘನೀಯವಾಗಿದೆ. ಯಕ್ಷಗಾನ, ಹಾಡುಗಾರಿಕೆ, ನಾಟಕ ಹೀಗೆ ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ಉತ್ತಮ ಕೆಲಸ ಮಾಡಲಾಗುತ್ತದೆ ಎಂದರು.
ನಿವೃತ್ತ ಪ್ರಾಂಶುಪಾಲರಾದ ಚೆರಿಯಮನೆ ರಾಮಚಂದ್ರ ಮಾತನಾಡಿ, ಅರೆಭಾಷಿಕರ ಇತಿಹಾಸ ಮತ್ತು ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಅರೆಭಾಷಿಕರ ಬದುಕು, ಕೃಷಿ ಚಟುವಟಿಕೆ ವಿಶಿಷ್ಟವಾಗಿದೆ. ಅರೆಭಾಷಿಕರು ಕಾಸರಗೋಡಿನಿಂದ ಅರಕಲಗೋಡು ವರೆಗೆ, ದಕ್ಷಿಣ ಕನ್ನಡದಿಂದ ಪಿರಿಯಾಪಟ್ಟಣದವರೆಗೆ ವಾಸ ಮಾಡುತ್ತಿದ್ದು, ಅರೆಭಾಷೆ ಹೆಚ್ಚು ಹೆಚ್ಚು ಮಾತನಾಡಲು ಪ್ರೋತ್ಸಾಹಿಸಬೇಕು ಎಂದರು.
ಅರೆಭಾಷೆ ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳು ವಿಭಿನ್ನವಾಗಿದೆ. ಪಟ್ಟೆದಾರರ ಸಂಸ್ಕೃತಿ, ಅರಮನೆ-ಗುರುಮನೆ, ಹಬ್ಬ ಹರಿದಿನಗಳು, ಹರಿಸೇವೆ, ಕೆಡ್ಡಾಸ ಹಬ್ಬ, ಸೋಬಾನೆ ಪದಗಳು ಹೀಗೆ ವಿಭಿನ್ನತೆಯ ನಾಗರಿಕತೆಯನ್ನು ಹೊಂದಿದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಸೂರ್ತಲೆ ವಾರಿಜ ಅವರು ಬರೆದಿರುವ ಅರ‌್ಸು ಮತ್ತು ಪ್ರಧಾನಿನ ಕಥೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಹೊರತಂದಿರುವ ಹಲವು ಪುಸ್ತಕಗಳನ್ನು ಮರಗೋಡು ಗ್ರಾಮ ಪಂಚಾಯಿತಿಗೆ ನೀಡಲಾಯಿತು. ಮರಗೋಡು ವ್ಯಾಪ್ತಿಯ ಪಟ್ಟೆದಾರರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಸಂಚಾಲಕರಾದ ಸಂದೀಪ್ ಪೂಳಕಂಡ, ಮರಗೋಡು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಂಗೀರ ಸತೀಶ್, ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಬೆಂಗಳೂರಿನ ಅಧ್ಯಕ್ಷ ಪಾಣತ್ತಲೆ ಪಳಂಗಪ್ಪ, ಮರಗೋಡು ಗೌಡ ಸಮಾಜದ ಮಾಜಿ ಅಧ್ಯಕ್ಷ ದೇವಜನ ನಾಣಯ್ಯ, ನಿವೃತ್ತ ಪೊಲೀಸ್ ಅಧಿಕಾರಿ ಅಪ್ಪಯಂಡ್ರ ದೇವಯ್ಯ, ಅಕಾಡೆಮಿ ಸದಸ್ಯರಾದ ಸೂದನ ಈರಪ್ಪ, ಪಿ.ಎಸ್.ಕಾರ್ಯಪ್ಪ, ತೇಜಕುಮಾರ ಕುಡೆಕಲ್, ಕುದ್ಪಾಜೆ ಪ್ರಕಾಶ್, ಚಂದ್ರಾವತಿ ಬಡ್ಡಡ್ಕ, ಲತಾ ಪ್ರಕಾಶ್ ಕುದ್ಪಾಜೆ, ವಿನೋದ್ ಮೂಡಗದ್ದೆ, ಮರಗೋಡು ಗ್ರಾ.ಪಂ.ಪಿಡಿಒ ಶೋಭರಾಣಿ ಇತರರು ಇದ್ದರು.
ವಿನೋದ್ ಮೂಡಗದ್ದೆ ಸ್ವಾಗತಿಸಿದರೆ, ಡೀನಾಪ್ರಭಾ ಮತ್ತು ತೇಜ ಪ್ರವೀಣ್ ನಿರೂಪಿಸಿ, ರೋಹಿಣಿ ಚೆರಿಯಮನೆ ಮತ್ತು ತಂಡದವರು ಪ್ರಾರ್ಥಿಸಿದರು. ವೆಂಕಟೇಶ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net