ವೃತ್ತಿಜೀವನದಲ್ಲಿ ಶಿಸ್ತಿನ ಜೊತೆಗೆ ಮಾನವೀಯ ಮೌಲ್ಯ ಅಗತ್ಯ

ಸರ್ಕಾರಿ ಶುಶ್ರೂಷಾ ಕಾಲೇಜಿನ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ೮೯ ನರ್ಸಿಂಗ್ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಶ್ರೀಕಾಂತ್ ಫುಲಾರಿ, ಡಾ.ಎ.ಜೆ.ಲೋಕೇಶ್, ಡಾ.ವಿಶಾಲ್ ಕುಮಾರ್, ಎ.ಕೆ.ಮಂಜುಳ ಇತರರಿದ್ದರು.
ಸರ್ಕಾರಿ ಶುಶ್ರೂಷಾ ಕಾಲೇಜಿನ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ೮೯ ನರ್ಸಿಂಗ್ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಶ್ರೀಕಾಂತ್ ಫುಲಾರಿ, ಡಾ.ಎ.ಜೆ.ಲೋಕೇಶ್, ಡಾ.ವಿಶಾಲ್ ಕುಮಾರ್, ಎ.ಕೆ.ಮಂಜುಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೃತ್ತಿಜೀವನದಲ್ಲಿ ಶಿಸ್ತಿನ ಜೊತೆಗೆ ಮಾನವೀಯ ಮೌಲ್ಯ ಅಗತ್ಯ
  • ಸರ್ಕಾರಿ ಶುಶ್ರೂಷಾ ಕಾಲೇಜಿನ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ಶ್ರೀಕಾಂತ್ ಫುಲಾರಿ
ಮಡಿಕೇರಿ: ನರ್ಸಿಂಗ್ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಶಿಸ್ತಿನ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ವೈದ್ಯಕೀಯ ನಿರ್ದೇಶನಾಲಯದ ನರ್ಸಿಂಗ್ ಶಿಕ್ಷಣ ವಿಭಾಗ ಸಹಾಯಕ ನಿರ್ದೇಶಕರಾದ ಶ್ರೀಕಾಂತ್ ಫುಲಾರಿ ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಸರ್ಕಾರಿ ಶುಶ್ರೂಷಾ ಕಾಲೇಜಿನ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
೮೯ ನರ್ಸಿಂಗ್ ವಿದ್ಯಾರ್ಥಿಗಳು ಪದವಿ ಸ್ವೀಕರಿಸುತ್ತಿರುವುದು ನನಗೆ ಹೆಮ್ಮೆಯಾಗುತ್ತಿದೆ. ನರ್ಸಿಂಗ್ ಶಿಕ್ಷಣ ಬೆಳೆಸುವಲ್ಲಿ ನಿಮ್ಮೆಲ್ಲರ ಪಾತ್ರ ಹೆಚ್ಚಿದ್ದು, ನರ್ಸಿಂಗ್ ಶಿಕ್ಷಣದಿಂದ ಲಭಿಸುವ ಉದ್ಯೋಗಗಳು ಸಮಾಜದಲ್ಲಿ ಅತ್ಯಂತ ಗೌರವಾನ್ವಿತವಾಗಿವೆ ಹಾಗೂ ಸೇೆವಾಭಾವನೆಯ ಪ್ರತಿರೂಪವಾಗಿವೆ. ಉತ್ತಮ ನೈಪುಣ್ಯ ಮತ್ತು ಕಾಳಜಿಯ ಮನೋಭಾವದಿಂದ ರೋಗಿಗಳ ಆರೋಗ್ಯದಲ್ಲಿ ಮಹತ್ತರ ಬದಲಾವಣೆ ತರಬಹುದು. ಇಂದಿನ ಯುಗದಲ್ಲಿ ನರ್ಸಿಂಗ್ ವೃತ್ತಿಗೆ ದೇಶ-ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಶಿಸ್ತಿನ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ನಿಮ್ಮ ಸೇವೆ ಅನೇಕ ಕುಟುಂಬಗಳಿಗೆ ಆಶಾಕಿರಣವಾಗಲಿದೆ ಎಂದರು.
ಸಮಾಜದ ಆರೋಗ್ಯ ಕಾಪಾಡುವಲ್ಲಿ ನರ್ಸಿಂಗ್ ವೃತ್ತಿದಾರರ ಪಾತ್ರ ಅತಿ ಮುಖ್ಯವಾಗಿದೆ. ನೀವು ತಾಳ್ಮೆ, ಸಮರ್ಪಣೆ ಮತ್ತು ನಿಷ್ಠೆಯಿಂದ ಕೆಲಸ ಮಾಡಿದರೆ ಯಶಸ್ಸು ನಿಮ್ಮದೆ ಆಗುತ್ತದೆ. ನಿಮ್ಮೆಲ್ಲರೂ ದೇಶದ ಆರೋಗ್ಯ ವ್ಯವಸ್ಥೆಗೆ ಬಲವಾಗುವ ಉತ್ತಮ ನರ್ಸಿಂಗ್ ವೃತ್ತಿದಾರರಾಗಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ.ಎ.ಜೆ.ಲೋಕೇಶ್ ಮಾತನಾಡಿ, ಸಂಸ್ಥೆಯ ಎರಡನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಲಭಿಸಿದ್ದು ಬಹಳ ಸಂತೋಷವಾಗುತ್ತಿದೆ. ಈ ಮಹತ್ವದ ಕ್ಷಣವು ವಿದ್ಯಾರ್ಥಿಗಳ ಪರಿಶ್ರಮ, ಉಪನ್ಯಾಸಕರ ಮಾರ್ಗದರ್ಶನ ಮತ್ತು ಪೋಷಕರ ಬೆಂಬಲದ ಫಲವಾಗಿದೆ ಎಂದು ಹೇಳಿದರು.
ಇದೊಂದು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ತಿರುವು ಆಗಿದ್ದು, ಮುಂದೆ ಉತ್ತಮ ವೈದ್ಯಕೀಯ ಸೇವೆಯನ್ನು ಸಮಾಜಕ್ಕೆ ಸಲ್ಲಿಸುವ ಜವಾಬ್ದಾರಿಯೂ ನಿಮ್ಮ ಮೇಲೆ ಇದೆ. ನರ್ಸಿಂಗ್ ವೃತ್ತಿ ಕೇವಲ ಉದ್ಯೋಗವಲ್ಲ. ಅದು ಸೇವಾ ಧರ್ಮವಾಗಿದ್ದು, ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಬದ್ಧವಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳನ್ನು ಮಾಡಲು ಎಲ್ಲಾ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಕರೆ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್ ಮಾತನಾಡಿ, ಇದು ನಿಮ್ಮ ಜೀವನದ ಹೊಸ ಅಧ್ಯಾಯಕ್ಕೆ ದಾರಿ ತೆರೆದಿಡುವ ಮಹತ್ವದ ಕ್ಷಣವಾಗಿದೆ. ನೀವು ಗಳಿಸಿರುವ ವಿದ್ಯೆ ಕೇವಲ ನಿಮ್ಮದೇ ಸಾಧನೆಯಲ್ಲ. ಅದು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವ ಶಕ್ತಿಯಾಗಿದೆ. ಮುಂದಿನ ದಿನಗಳಲ್ಲಿ ನಿಮ್ಮ ಕರ್ತವ್ಯನಿಷ್ಠೆ ಮತ್ತು ಮಾನವೀಯತೆ ನಿಮ್ಮನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ನಿರ್ದೇಶನಾಲಯದ ನರ್ಸಿಂಗ್ ಶಿಕ್ಷಣ ವಿಭಾಗ ಸಹಾಯಕ ನಿರ್ದೇಶಕರಾದ ಶ್ರೀಕಾಂತ್ ಫುಲಾರಿ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞೆಯನ್ನು ಬೋಧಿಸಿದರು. ಇದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದಲ್ಲಿ ರ‌್ಯಾಂಕ್ ಪಡೆದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವವಿಸಲಾಯಿತು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಬೋಧಕ ಆಸ್ಪತ್ರೆಯ ಸ್ಥಾನೀಯ ವೈದ್ಯಾಧಿಕಾರಿ ಡಾ.ಅಭಿನಂದನ್.ಬಿ.ವಂದಕುದರಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಯ ಸ್ಥಾನೀಯ ವೈದ್ಯಾಧಿಕಾರಿ ಡಾ.ಧನಂಜಯ್ ಕುಮಾರ್, ತುರ್ತು ವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮೋಹನ್ ಅಪ್ಪಾಜಿ, ಸರ್ಕಾರಿ ಶುಶ್ರೂಷಾ ಕಾಲೇಜಿನ ಪ್ರಾಂಶುಪಾಲೆ ಎ.ಕೆ.ಮಂಜುಳ, ಸರ್ಕಾರಿ ಶುಶ್ರೂಷಾ ಕಾಲೇಜಿನ ಸಹ ಪ್ರಾಧ್ಯಾಪಕ ಕೆ.ಪಿ.ಗುರುಪಾದ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಕೆ.ಎಂ.ರೋಹಿಣಿ ಹಾಗೂ ಇನ್ನಿತರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಲಾ ವೈಭವ ಕಾರ್ಯಕ್ರಮಗಳು ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net