ಮಡಿಕೇರಿಯಲ್ಲಿ ಎಸ್‌ಡಿಪಿಐ ಜನಾಗೃಹ ಸಮಾವೇಶ

ಎಸ್‌ಡಿಪಿಐ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ಜನಾಗ್ರಹ ಸಮಾವೇಶದಲ್ಲಿ ಸಮುದಾಯ ಬಾಂಧವರು ಪಾಲ್ಗೊಂಡಿದ್ದರು.
ಎಸ್‌ಡಿಪಿಐ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ಜನಾಗ್ರಹ ಸಮಾವೇಶದಲ್ಲಿ ಸಮುದಾಯ ಬಾಂಧವರು ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಡಿಕೇರಿಯಲ್ಲಿ ಎಸ್‌ಡಿಪಿಐ ಜನಾಗೃಹ ಸಮಾವೇಶ
  • ಎಸ್‌ಐಆರ್ ನಿಂದ ೧೦೦ ಕೋಟಿ ಭಾರತೀಯರಿಗೆ ಸಂಕಷ್ಟ: ಅಬ್ದುಲ್ ಮಜೀದ್ ಆರೋಪ
ಮಡಿಕೇರಿ: ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ(ಎಸ್‌ಐಆರ್) ಕ್ರಮದಿಂದ ಕೇವಲ ಮುಸಲ್ಮಾನರಿಗೆ ಮಾತ್ರ ತೊಂದರೆಯಾಗುವುದಿಲ್ಲ. ಬದಲಿಗೆ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ೧೦೦ ಕೋಟಿ ಭಾರತೀಯರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಆತಂಕ ವ್ಯಕ್ತಪಡಿಸಿದರು.
ಎಸ್‌ಡಿಪಿಐ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ನಡೆದ ಜನಾಗ್ರಹ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎನ್‌ಆರ್‌ಸಿ ವಿಚಾರ ಕೋರ್ಟ್‌ನಲ್ಲಿರುವ ಕಾರಣ ಚುನಾವಣಾ ಆಯೋಗದ ಮೂಲಕ ಹಿಂಬಾಗಲಿನಿಂದ ಎಸ್‌ಐಆರ್ ಪರೀಕ್ಷೆಯನ್ನು ಒಡ್ಡಲಾಗಿದೆ. ಇದರಿಂದ ಬಡವರು, ಕೂಲಿ ಕಾರ್ಮಿಕರು ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. ಈ ಹಿಂದೆ ಕಪ್ಪು ಹಣವನ್ನು ಹೊರ ತರಲು ಮತ್ತು ಭಯೋತ್ಪಾದನೆಯನ್ನು ತಡೆಯಲು ನೋಟ್ ಬ್ಯಾನ್ ಮಾಡುವುದಾಗಿ ಹೇಳಿ ನೋಟ್ ಬ್ಯಾನ್ ಮಾಡಲಾಯಿತು. ಆದರೆ ಕಪ್ಪು ಹಣ ಪತ್ತೆಯಾಗಲಿಲ್ಲ, ಭಯೋತ್ಪಾದನೆ ಕಡಿಮೆಯಾಗಲಿಲ್ಲ. ಇದೀಗ ನುಸುಳುಕೋರರನ್ನು ಪತ್ತೆ ಮಾಡಲು ಎಸ್‌ಐಆರ್ ತರಲಾಗಿದೆ ಎಂದು ಹೇಳುತ್ತಿದ್ದಾರೆ, ಇದೊಂದು ಮೂರ್ಖತನದ ನಿರ್ಧಾರವಾಗಿದೆ. ಎಸ್‌ಐಆರ್ ಎನ್ನುವುದು ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲ, ಇದು ಜನರನ್ನು ತೀವ್ರ ನಿಗಾ ಘಟಕಕ್ಕೆ ತಳ್ಳುವ ಮತ್ತು ಪೌರತ್ವದ ಅಗ್ನಿ ಪರೀಕ್ಷೆಗೆ ಒಡ್ಡುವ ಅಪಾಯಕಾರಿ ಕ್ರಮವಾಗಿದೆ ಎಂದು ಆರೋಪಿಸಿದರು.
ತಮಿಳುನಾಡಿನಲ್ಲಿ ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ೯೦ ಲಕ್ಷ ಮಂದಿ ಮತದಾನದ ಹಕ್ಕಿನಿಂದ ಹೊರ ಬಂದಿದ್ದಾರೆ. ಇವರೆಲ್ಲರು ಮುಸಲ್ಮಾನರಲ್ಲ, ತಮಿಳುನಾಡಿನ ಜನಸಂಖ್ಯೆಯಲ್ಲಿ ಶೇ.೬ ರಷ್ಟು ಮಾತ್ರ ಮುಸಲ್ಮಾನರಿದ್ದಾರೆ. ೯೦ ಲಕ್ಷ ಮಂದಿಯಲ್ಲಿ ೨೦ಲಕ್ಷ ಮಂದಿ ಮುಸಲ್ಮಾನರಾದರೆ ಉಳಿದ ೭೦ ಲಕ್ಷ ಮಂದಿ ಇತರ ಜಾತಿ ಜನಾಂಗಕ್ಕೆ ಸೇರಿದವರಾಗಿದ್ದಾರೆ, ಇವರೆಲ್ಲರೂ ಬಡವರು, ಕೂಲಿ ಕಾರ್ಮಿಕರೇ ಆಗಿದ್ದಾರೆ. ಈ ಕ್ರಮದಿಂದ ಮುಸಲ್ಮಾನರಿಗೆ ಮಾತ್ರ ತೊಂದರೆ ಎಂದು ಯಾರೂ ಭಾವಿಸಬಾರದು, ಆದ್ದರಿಂದ ಇದರ ವಿರುದ್ಧ ಸರ್ವ ಜನರು ಜಾಗೃತರಾಗಬೇಕು ಎಂದು ಕರೆ ನೀಡಿದರು.
ಎಸ್‌ಐಆರ್ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಯಾವುದೇ ಹೋರಾಟಗಳನ್ನು ಮಾಡದೆ ಯಾಕೆ ನಿದ್ರಾವಸ್ಥೆಯಲ್ಲಿದೆ ಎಂದು ಪ್ರಶ್ನಿಸಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಬುಳ್ಡೋಸರ್ ಬಳಸಿ ಬಡವರ ಮನೆಗಳನ್ನು ನೆಲಸಮಗೊಳಿಸುತ್ತಿದೆ. ಮನೆಗಳನ್ನು ತೆರವು ಮಾಡುವ ಸಂದರ್ಭ ನಿವಾಸಿಗಳಿಗೆ ನೋಟಿಸ್ ನೀಡಬೇಕೆಂದು ಸುಪ್ರೀಂಕೋಟ್ ಹೇಳಿದೆ. ಆದರೆ, ರಾಜ್ಯ ಸರ್ಕಾರ ಯಾವ ಮುನ್ಸೂಚನೆಯನ್ನೂ ನೀಡದೆ ಕಾನೂನಿಗೆ ವಿರುದ್ಧವಾಗಿ ಮುಂಜಾನೆ ೪ಗಂಟೆಗೆ ಬುಳ್ಡೋಸರ್ ಬಳಸಿ ಮನೆ ಕೆಡವಿ ಬಡವರನ್ನು ಬೀದಿ ಪಾಲು ಮಾಡಿದೆ. ಸಿದ್ದರಾಮಯ್ಯ ಹಾಗೂ ಯೋಗಿ ಅವರಿಗೆ ಏನು ವ್ಯತ್ಯಾಸವಿದೆ. ತಪ್ಪುಗಳಿದ್ದರೆ ಕ್ರಮ ಕೈಗೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ, ಆದರೆ ಅದು ಕಾನೂನಿನ ಚೌಕಟ್ಟಿನಡಿ ನಡೆಯಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಡಿಕೇರಿ ಶಾಸಕ ಮಂತರ್ ಗೌಡ ಅವರು ವಿಧಾನಸಭೆಯಲ್ಲಿ ಅಸ್ಸಾಂ ಕಾರ್ಮಿಕರು ಹೆಚ್ಚಾಗಿದ್ದಾರೆ. ಗೃಹ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಿದ್ದಾರೆ. ಆದರೆ, ಇದಕ್ಕೂ ಗಂಭೀರವಾದ ಸಮಸ್ಯೆಗಳು ಕೊಡಗನ್ನು ಕಾಡುತ್ತಿದೆ. ನಿವೇಶನ ಮತ್ತು ವಸತಿಗಾಗಿ ಸಾವಿರಾರು ಬಡವರು ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿದೆ, ಆದರೆ ಜಿಲ್ಲೆಯ ಶಾಸಕರುಗಳು ಅಕ್ರಮ ಸಕ್ರಮ ಸಮಿತಿಯಲ್ಲಿ ಸಕ್ರಮಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಬ್ದುಲ್ ಮಜೀದ್ ಆರೋಪಿಸಿದ ಅವರು, ಮೊದಲು ಜಿಲ್ಲೆಯ ಜನರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಸೂಚಿಸಲು ಶಾಸಕರುಗಳು ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಮಾತನಾಡಿ, ಭಯಮುಕ್ತ ಸಮಾಜದ ನಿರ್ಮಾಣಕ್ಕಾಗಿ ಎಸ್‌ಡಿಪಿಐ ಹೋರಾಟ ನಡೆಸುತ್ತಿದೆ. ಇಂದು ದೇಶದಲ್ಲಿ ಬಿಜೆಪಿಯನ್ನು ಬಲವಾಗಿ ಎದುರಿಸಬಲ್ಲ ಶಕ್ತಿ ಇರುವುದು ಎಸ್‌ಡಿಪಿಐಗೆ ಮಾತ್ರ, ದೇಶ ಕಾಂಗ್ರೆಸ್ ಮುಕ್ತವಾಗುತ್ತಿದೆ, ಆ ಪಕ್ಷಕ್ಕೆ ಇನ್ನು ಉಳಿಗಾವಿಲ್ಲ. ರಾಜಕೀಯವಾಗಿ ಕಾಂಗ್ರೆಸ್‌ಗೆ ಇನ್ನೂ ಉಳಿದುಕೊಳ್ಳಬೇಕೆನ್ನುವ ಇಚ್ಛೆ ಇದ್ದರೆ ಅದು ಎಸ್‌ಡಿಪಿಐಗೆ ಬೆಂಬಲ ಸೂಚಿಸಲಿ ಎಂದರು.
ದೇಶಕ್ಕೆ ಅಚ್ಚೇ ದಿನ್ ಬರಲಿದೆ ಎಂದು ಎನ್‌ಡಿಎ ಸರಕಾರ ಘೋಷಿಸಿತು, ಆದರೆ ಇಲ್ಲಿಯವರೆಗೆ ಪ್ರಜೆಗಳಿಗೆ ಒಳ್ಳೆಯ ದಿನಗಳು ಬರಲಿಲ್ಲ. ಎಸ್‌ಐಆರ್ ಎನ್ನುವುದು ಎನ್‌ಆರ್‌ಸಿಯ ಹಿಂಬಾಗಿಲಾಗಿದೆ, ಮತಗಳ್ಳತನದ ಷಡ್ಯಂತ್ರವಾಗಿದೆ ಎಂದು ಆರೋಪಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಎಸ್‌ಐಅರ್ ಎನ್ನುವುದು ನುಸುಳುಕೋರರನ್ನು ಪತ್ತೆ ಹಚ್ಚುವ ಪ್ರಕ್ರಿಯೆಯಲ್ಲ. ದೇಶದ ಪೌರತ್ವವನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ. ಬೆಟ್ಟ ಕೊರೆದು ಇಲಿ ಹಿಡಿಯುವ ಸಾಹಸ ಇದಾಗಿದೆ. ಇಲ್ಲಿಯವರೆಗೆ ಕೇವಲ ಇಬ್ಬರು ಬಾಂಗ್ಲಾ ದೇಶಿಗರನ್ನು ಮಾತ್ರ ಪತ್ತೆ ಮಾಡಲಾಗಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆಸಿದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ೯ ಕೋಟಿ ಮತದಾರರು ಮತದಾನದ ಹಕ್ಕಿನಿಂದ ಹೊರಗುಳಿದಿದ್ದಾರೆ. ಮತದಾನದ ಹಕ್ಕನ್ನು ಸಾಬೀತು ಪಡಿಸಬೇಕಾದರೆ ಜನನ ಪ್ರಮಾಣ ಪತ್ರ, ಆಸ್ತಿ ಪತ್ರ, ಪಾಸ್ ಪೋರ್ಟ್ ಮೊದಲಾದ ದಾಖಲೆಗಳನ್ನು ಒದಗಿಸಬೇಕೆನ್ನುವ ನಿಯಮ ರೂಪಿಸಲಾಗಿದೆ. ದೇಶದ ಒಟ್ಟು ಜನಸಂಖ್ಯೆಯ ಶೇ.೫ ಮಂದಿಯ ಬಳಿ ಶೇ.೯೫ರಷ್ಟು ಆಸ್ತಿ ಇದೆ, ಉಳಿದ ಪ್ರಜೆಗಳ ಬಳಿ ಸ್ವಂತ ಆಸ್ತಿಯೇ ಇಲ್ಲ. ಮತದಾರರ ಪಟ್ಟಿ ಪರಿಷ್ಕರಣೆಯ ಹಿಂದೆ ಷಡ್ಯಂತ್ರ ಅಡಗಿದೆ. ಇದು ಕತ್ತಲೆ ಯುಗದ ಕಾನೂನಾಗಿದೆ. ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನವಾಗಿದೆ. ರಾಜ್ಯ ಸರ್ಕಾರ ವಿಶೇಷ ಅಧಿವೇಶನ ಕರೆದು ಪರಿಷ್ಕರಣೆಯ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಬೇಕು. ಕೊಡಗಿನ ಇಬ್ಬರು ಶಾಸಕರು ಈ ಕುರಿತು ಒತ್ತಡ ಹೇರಬೇಕು ಎಂದು ಒತ್ತಾಯಿಸಿದರು.
ಮತದಾರರ ಪಟ್ಟಿ ತೀವ್ರ ಪರಿಷ್ಕರಣೆಯನ್ನು ಕೈಬಿಡಬೇಕು. ಕೃಷಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ರೈತರ ಜಮೀನನ್ನು ಸಿಎನ್‌ಡಿ ವ್ಯಾಪ್ತಿಗೆ ತಂದು ಸೆಕ್ಷನ್ ೪ರ ಅಡಿಯಲ್ಲಿ ನೋಟಿಸ್ ಜಾರಿ ಮಾಡಿರುವ ಕ್ರಮವನ್ನು ಕೈಬಿಟ್ಟು ಜಮೀನನ್ನು ೫೭ರ ಅಡಿಯಲ್ಲಿ ಸಕ್ರಮಗೊಳಿಸಬೇಕು. ಮಾನವ ಹಾಗೂ ವನ್ಯಜೀವಿ ನಡುವಿನ ಸಂಘರ್ಷವನ್ನು ತಡೆಯಲು ಶಾಶ್ವತ ಯೋಜನೆಯನ್ನು ರೂಪಿಸಬೇಕು. ಕೊಡಗಿನಲ್ಲಿರುವ ನಿವೇಶನ ರಹಿತ ಮತ್ತು ವಸತಿ ರಹಿತ ಕುಟುಂಬಗಳಿಗೆ ತಕ್ಷಣ ನಿವೇಶನ, ವಸತಿ ಮಂಜೂರು ಮಾಡಬೇಕು. ಎಲ್ಲಾ ನಮೂನೆ ೫೦, ೫೩, ೫೭ ಹಾಗೂ ೯೪ಸಿ, ೯೪ಸಿಸಿ ಫಾಸ್ಟ್ ಟ್ರ್ಯಾಕ್ ಸಮಿತಿ ರಚಿಸಿ ಸಕ್ರಮಗೊಳಿಸಬೇಕು. ಜೀವನದಿ ಕಾವೇರಿ ಕಲುಷಿತಗೊಳ್ಳುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಅಮೀನ್ ಮೊಹಿಸಿನ್ ಆಗ್ರಹಿಸಿದರು.
ಎಸ್‌ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ಅಶ್ರಫ್ ಮೌಲವಿ ಮೂವಾಟ್ಟುಪುಝ ಮಾತನಾಡಿ, ನಿರಂತರವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದ ಮುಸಲ್ಮಾನರಿಗೆ ಆ ಪಕ್ಷದಿಂದ ನ್ಯಾಯ ಸಿಗಲಿಲ್ಲ. ಇನ್ನು ಮುಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಆಟ ನಡೆಯುವುದಿಲ್ಲ. ಭಯಮುಕ್ತ ಸಮಾಜ ನಿರ್ಮಾಣ, ಮನುಷ್ಯತ್ವ, ಸಮಗ್ರ ಅಭಿವೃದ್ಧಿ, ಎಲ್ಲಾ ಮಕ್ಕಳಿಗೆ ಶಿಕ್ಷಣ, ಬಡವರಿಗೆ ಮನೆಗಳನ್ನು ನೀಡುವುದು ಎಸ್‌ಡಿಪಿಐ ಗುರಿಯಾಗಿದೆ. ಎಸ್‌ಡಿಪಿಐಗೆ ಕೇವಲ ಮತ ನೀಡಿದರೆ ಸಾಲದು ಪಕ್ಷವನ್ನು ಬಲಪಡಿಸಲು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಪತ್ರಕರ್ತ ರಾ.ಚಿಂತನ್ ಮಾತನಾಡಿ, ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯಲು ಎಸ್‌ಐಆರ್ ಪ್ರಕ್ರಿಯೆ ಆರಂಭಿಸಲಾಗಿದೆ. ಇದರಿಂದ ಕೋಟ್ಯಾಂತರ ಜನರಿಗೆ ತೊಂದರೆಯಾಗಲಿದೆ, ಇದೊಂದು ಸಂವಿಧಾನಬಾಹಿರ ಕ್ರಮವಾಗಿದ್ದು, ಅಧಿಕಾರದ ದುರುಪಯೋಗವಾಗಿದೆ ಎಂದು ಆರೋಪಿಸಿದರು.
ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ಅಡ್ಕಾರ್, ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಎಂ.ಕೆ.ಮನ್ಸೂರ್ ಆಲಿ, ಕಾರ್ಯದರ್ಶಿ ಮೇರಿ ವೇಗಸ್, ಸದಸ್ಯ ಅಬ್ದುಲ್ ಅಡ್ಕಾರ್, ನಗರಾಧ್ಯಕ್ಷ ಮೊಹಮ್ಮದ್ ಅಲಿ, ನಗರಸಭಾ ಸದಸ್ಯೆ ನೀಮಾ ಅರ್ಷದ್, ಕಾರ್ಯದರ್ಶಿ ಬಶೀರ್ ಅಹಮ್ಮದ್, ಕೆ.ಸಿ.ಬಷೀರ್, ಅಬ್ದುಲ್ ಜಮೀರ್, ಫಾರುಕ್ ಖಾನ್, ಷರೀಫ್, ಭಾಷಾ, ಹನೀಫ್ ವಿರಾಜಪೇಟೆ, ಜಕ್ರಿಯ ಕುಶಾಲನಗರ, ಹಫೀಜ್ ಮತ್ತಿತರರು ಉಪಸ್ಥಿತರಿದ್ದರು. ಸಮಾವೇಶಕ್ಕೂ ಮೊದಲು ಎಸ್‌ಡಿಪಿಐ ಮುಖಂಡರು ಹಾಗೂ ಕಾರ್ಯಕರ್ತರು ಎವಿ ಶಾಲೆ ಬಳಿಯಿಂದ ಗಾಂಧಿ ಮೈದಾನದವರೆಗೆ ಘೋಷಣೆಗಳೊಂದಿಗೆ ರ‌್ಯಾಲಿ ನಡೆಸಿದರು.
ರಾಜ್ಯದಲ್ಲಿ ಯಾವುದೇ ಗ್ಯಾರಂಟಿ ಯೋಜನೆಗಳಿದ್ದರೂ ಮಹಿಳಾ ವಿರೋಧಿ, ಶಿಕ್ಷಣ ವಿರೋಧಿ ಸರ್ಕಾರವಿದೆ. ಬುಳ್ಡೋಸರ್ ಬಳಸಿ ಮನೆಗಳನ್ನು ನೆಲಸಮಗೊಳಿಸುವಾಗ ವಿದ್ಯಾರ್ಥಿಗಳ ಸರ್ಟಿಫಿಕೇಟ್‌ಗಳು ಬೆಲೆ ನೀಡಿಲ್ಲ. ಹಿಜಾಬ್ ಕುರಿತು ಸರಕಾರ ಮಾತು ಉಳಿಸಿಕೊಂಡಿಲ್ಲ ಎಂದು ಟೀಕಿಸಿದರು.
ಶಾಹಿದಾ ತಸ್ನೀಮ್, ರಾಜ್ಯ ಉಪಾಧ್ಯಕ್ಷೆ, ಎಸ್‌ಡಿಪಿಐ
ದೇಶ ಸೇವೆ, ಜನ ಸೇವೆ, ಅಂಬೇಡ್ಕರ್ ಸಿದ್ಧಾಂತ, ಸಂವಿಧಾನದ ಆಶಯಗಳನ್ನು ತಿಳಿಯದವರು ಇಂದು ಆಡಳಿತ ನಡೆಸುತ್ತಿದ್ದಾರೆ. ಮುಂದೊಂದು ದಿನ ಎಸ್‌ಡಿಪಿಐಯನ್ನು ಎದುರಿಸಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗೂಡುವ ಕಾಲ ಬರಲಿದೆ.
ದೇವನೂರು ಪುಟ್ಟ ನಂಜಯ್ಯ, ರಾಜ್ಯ ಉಪಾಧ್ಯಕ್ಷ, ಎಸ್‌ಡಿಪಿಐ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net