ಆರೋಗ್ಯ, ಶಿಕ್ಷಣವನ್ನು ಖರೀದಿಸುವಂತಾಗಿದೆ

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿನ ಪತ್ರಕರ್ತರ ಮಕ್ಕಳಿಗೆ ವಿದ್ಯಾನಿಧಿಯನ್ನು ವಿತರಿಸಲಾಯಿತು. ನಾರಾಯಣ ಗೌಡ, ಎಸ್.ಜಿ.ಉಮೇಶ್, ಎಂ.ಪಿ.ಕೇಶವ ಕಾಮತ್ ಇತರರಿದ್ದರು.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿನ ಪತ್ರಕರ್ತರ ಮಕ್ಕಳಿಗೆ ವಿದ್ಯಾನಿಧಿಯನ್ನು ವಿತರಿಸಲಾಯಿತು. ನಾರಾಯಣ ಗೌಡ, ಎಸ್.ಜಿ.ಉಮೇಶ್, ಎಂ.ಪಿ.ಕೇಶವ ಕಾಮತ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯ, ಶಿಕ್ಷಣವನ್ನು ಖರೀದಿಸುವಂತಾಗಿದೆ
  • ವಿದ್ಯಾನಿಧಿ ವಿತರಣೆ ಕಾರ್ಯಕ್ರಮದಲ್ಲಿ ಕಲ್ಲಡ್ಕ ನಾರಾಯಣ ಗೌಡ
ಮಡಿಕೇರಿ: ಒಳ್ಳೆಯ ಮನಸ್ಸು ಮತ್ತು ಒಳ್ಳೆಯ ಭಾವನೆ ಒಟ್ಟು ಸೇರಿದಾಗ ಮಾತ್ರ ಸಾಧನೆ ಸಾಧ್ಯ ಎಂದು ನಿವೃತ್ತ ಶಿಕ್ಷಕ ಕಲ್ಲಡ್ಕದ ನಾರಾಯಣ ಗೌಡ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿತ ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಮೂರನೇ ವರ್ಷದ ವಿದ್ಯಾನಿಧಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ವಿದ್ಯೆಯನ್ನು ಖರೀದಿಸುವ ಕಾರ್ಯವಾಗುತ್ತಿದೆ. ಆರೋಗ್ಯ ಮತ್ತು ಶಿಕ್ಷಣವನ್ನು ಉಚಿತವಾಗಿ ನಿಡಬೇಕೆನ್ನುವುದು ಹಿರಿಯರ ಅಭಿಲಾಷೆಯಾಗಿತ್ತು. ಆದರೆ, ಇಂದು ಇವೆರಡು ದುಬಾರಿಯಾಗಿದೆ. ಉಚಿತ ಶಿಕ್ಷಣ ಮತ್ತು ಆರೋಗ್ಯ ನೀಡುವುದು ಇಂದು ಅಸಾಧ್ಯವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಎದುರಾಗಿದೆ. ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದರೂ, ಮಕ್ಕಳ ಕೊರತೆ ಎದುರಾಗಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಹಾಲು, ಹಣ್ಣು, ಊಟ, ಮೊಟ್ಟೆ, ಎಲ್ಲವೂ ಸಿಗುತ್ತದೆ, ಆದರೆ, ಶಿಕ್ಷಕರೇ ಇಲ್ಲ. ಅತಿಥಿ ಶಿಕ್ಷಕರೇ ಇಂದು ಶಾಲೆಯನ್ನು ಮುನ್ನಡೆಸಬೇಕಾದ ಪರಿಸ್ಥಿತಿ ಬಂದಿದೆ. ಒಬ್ಬರು ಅಥವಾ ಇಬ್ಬರು ಅಧ್ಯಾಪಕರು ಇಡೀ ಶಾಲೆಯನ್ನು ನಿಭಾಯಿಸಬೇಕಾಗಿದೆ. ಪಠ್ಯ ಚಟುವಟಿಕೆಯ ಜೊತೆಯಲ್ಲಿ ೧೦ ರೂ. ಗಳಿಗೆ ನೀಡಿದ ಊಟದ ಲೆಕ್ಕವನ್ನು ನೀಡಬೇಕಾಗಿದೆ. ಇದರ ಲೆಕ್ಕ ನೀಡಲು ನೆಟ್ ವರ್ಕ್ ಸಮಸ್ಯೆಯಿಂದ ಬೆಟ್ಟದ ತುದಿಯನ್ನು ಏರಬೆೇಕಾಗಿದೆಯೆಂದು ಪ್ರಸ್ತುತ ವ್ಯವಸ್ಥೆಯನ್ನು ನಾರಾಯಣ ಗೌಡ ವಿಶ್ಲೇಷಿಸಿದರು.
ಸರ್ಕಾರಿ ಶಾಲಾ ಶಿಕ್ಷಕರಿಗೆ ಪ್ರತಿ ವರ್ಷ, ೨೦ ರಿಂದ ೨೫ ದಿನ ತರಬೇತಿ ನೀಡಲಾಗುತ್ತದೆ. ಆದರೆ, ಖಾಸಗಿ ಶಾಲಾ ಶಿಕ್ಷಕರಿಗೆ ಈ ವ್ಯವಸ್ಥೆ ಇಲ್ಲ. ಸರಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ ಎಂದ ಅವರು, ಒಳ್ಳೆಯ ಮನಸ್ಸು ಮತ್ತು ಒಳ್ಳೆಯ ಭಾವನೆ ಒಟ್ಟು ಸೇರಿದಾಗ ಮಾತ್ರ ಸಾಧನೆ ಸಾಧ್ಯ. ಕೊಡಗು ಪತ್ರಿಕಾ ಭವನ ಟ್ರಸ್ಟ್ ವಿದ್ಯಾನಿಧಿಯ ಮೂಲಕ ದೊಡ್ಡ ಮೊತ್ತದ ನೆರವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಉತ್ತಮ ಕಾರ್ಯವೆಂದು ಮೆಚ್ಚುಗೆಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಭಾವನೆಯನ್ನು ಬೆಳೆಸಿಕೊಳ್ಳಬೇಕು, ಇಂದು ಮಕ್ಕಳಲ್ಲಿ ಭಾವನೆಗಳು ಇಲ್ಲದಂತಾಗಿದೆ. ಮೊಬೈಲ್ ಎನ್ನುವ ಬೆಂಕಿ ಪೆಟ್ಟಿಗೆ ಸರ್ವನಾಶ ಮಾಡುತ್ತಿದೆ. ವಿದ್ಯಾರ್ಥಿಗಳ ಬಳಿ ಸ್ಮಾರ್ಟ್ ಫೋನ್ ಇರಬೇಕು. ಅದೇ ರೀತಿ ವಿದ್ಯಾರ್ಥಿಗಳು ಸ್ಮಾರ್ಟ್ ಆಗಿರಬೇಕು, ಮೊಬೈಲ್ ಸದುಪಯೋಗವಾಗಬೇಕು. ಮೊಬೈಲ್‌ನ ಮೇಲೆ ನಿಯಂತ್ರಣ ಸಾಧಿಸಬೇಕು, ಹಾಗಿದ್ದರೆ ಮಾತ್ರ ವಿದ್ಯಾರ್ಥಿಗಳಿಗೆ ಭವಿಷ್ಯವಿದೆ. ವಿದ್ಯಾರ್ಥಿಗಳು ವಿದ್ಯಾನಿಧಿಯನ್ನು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಮತ್ತು ಉದ್ಯೋಗವನ್ನು ಪಡೆಯಬೇಕು. ಸಂಪಾದನೆ ಮಾಡಿದ ಹಣದಲ್ಲಿ ಒಂದು ಪಾಲನ್ನು ಭವಿಷ್ಯದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಗೆ ವಿನಿಯೋಗಿಸುವ ಗುಣವನ್ನು ಬೆಳೆಸಿಕೊಳ್ಳಬೇಕೆಂದು ನಾರಾಯಣ ಗೌಡ ಕಿವಿಮಾತು ಹೇಳಿದರು.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್ ಮಾತನಾಡಿ, ಕೊಡಗು ಪತ್ರಿಕಾ ಭವನ ಟ್ರಸ್ಟ್ ನಿರಂತರ ಸಾಮಾಜಿಕ ಕಳಕಳಿಯನ್ನು ಸದ್ದುಗದ್ದಲವಿಲ್ಲದೆ ತೋರುತ್ತಾ ಬಂದಿದೆ. ಕೋವಿಡ್, ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಆಹಾರದ ಕಿಟ್‌ಗಳನ್ನು ಜಿಲ್ಲಾ ವ್ಯಾಪ್ತಿಯ ಪತ್ರಕರ್ತರಿಗೆ ವಿತರಿಸಿದೆ. ೨೦೨೪ ರಿಂದ ವಿದ್ಯಾನಿಧಿ ವಿತರಣೆಯನ್ನು ವ್ಯವಸ್ಥಿತವಾಗಿ ಆರಂಭಿಸಲಾಗಿದ್ದು, ಆರಂಭಿಕ ವರ್ಷದಲ್ಲಿ ೧.೬೦ ಲಕ್ಷ ರೂ., ೨೦೨೫ ರಲ್ಲಿ ೨೮ ವಿದ್ಯಾರ್ಥಿಗಳಿಗೆ ೨.೧೯ ಲಕ್ಷ ರೂ. ನೀಡಲಾಗಿದ್ದು, ಪ್ರಸ್ತುತ ವರ್ಷ ೫೦ ವಿದ್ಯಾರ್ಥಿಗಳಿಗೆ ೨.೨೬ ಲಕ್ಷ ರೂ. ನೀಡಲಾಗುತ್ತಿದೆಯೆಂದು ತಿಳಿಸಿದರು.
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ.ಕೇಶವ ಕಾಮತ್, ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಹಂತದಲ್ಲಿ ದೊರಕುವ ಎಲ್ಲ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಅದು ಬುದ್ಧಿವಂತಿಕೆಯಾಗುತ್ತದೆ. ಮಕ್ಕಳು ತಮ್ಮ ಶಿಕ್ಷಣದ ಹಂತದಲ್ಲಿ ಪಾಠ ಪ್ರವಚನಗಳೊಂದಿಗೆ ಸಾಮಾನ್ಯ ಜ್ಞಾನವನ್ನು ಪಡೆದುಕೊಳ್ಳಬೇಕು. ಶಿಕ್ಷಣದ ಬಳಿಕ ಎದುರಾಗುವ ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು ಸಾಮನ್ಯ ಜ್ಞಾನ ಅತ್ಯಂತ ಸಹಕಾರಿಯಾಗಲಿದೆ. ಟ್ರಸ್ಟ್ ಮೂಲಕ ನೀಡುತ್ತಿರುವ ವಿದ್ಯಾನಿಧಿ ಪಡೆಯುವ ಮಕ್ಕಳು, ಭವಿಷ್ಯದಲ್ಲಿ ತಾವು ಸಮಾಜಕ್ಕೆ ಏನನ್ನಾದರು ನೀಡುವಂತಹ ಸಾಮರ್ಥ್ಯವನ್ನು ಪಡೆಯಬೇಕೆಂದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿನ ಪತ್ರಕರ್ತರ ೫೦ ಮಕ್ಕಳಿಗೆ ೨.೨೬ ಲಕ್ಷ ರೂ. ನೆರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಕೋಶಾಧಿಕಾರಿ ಕೆ.ತಿಮ್ಮಪ್ಪ, ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷರು ಹಾಗೂ ಹಾಲಿ ಟ್ರಸ್ಟಿಗಳಾದ ಟಿ.ಪಿ.ರಮೇಶ್, ಟ್ರಸ್ಟಿ ಎಚ್.ಟಿ.ಅನಿಲ್, ಟ್ರಸ್ಟಿ ಮಧೋಷ್ ಪೂವಯ್ಯ, ಟ್ರಸ್ಟಿ ವಿ.ಪಿ.ಸುರೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net