ಸರ್ಕಾರದ ಸೌಲಭ್ಯ ಪಡೆದು ಮುಂದೆ ಬನ್ನಿ

ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ಸವಿತ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಟಿ.ಪಿ.ರಮೇಶ್, ಅನಿಲ್.ಎಚ್.ಟಿ, ದೊರೇಶ್ ಇತರರಿದ್ದರು.
ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ಸವಿತ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಟಿ.ಪಿ.ರಮೇಶ್, ಅನಿಲ್.ಎಚ್.ಟಿ, ದೊರೇಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ಸೌಲಭ್ಯ ಪಡೆದು ಮುಂದೆ ಬನ್ನಿ
ಮಡಿಕೇರಿ: ಸವಿತಾ ಸಮಾಜವು ಹಿಂದುಳಿದ ವರ್ಗಕ್ಕೆ ಸೇರಿದ್ದು, ಆರ್ಥಿಕ ಹಾಗೂ ಸಾಮಾಜಿಕವಾಗಿ ತುಂಬಾ ಹಿಂದೆ ಇದ್ದಾರೆ. ಆದ್ದರಿಂದ ಸರ್ಕಾರದ ಸೌಲಭ್ಯ ಬಳಸಿಕೊಂಡು ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಂದೆ ಬರಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಸಲಹೆ ಮಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಭಾನುವಾರ ನಡೆದ ಸವಿತ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಭಾರತೀಯ ವ್ಯವಸ್ಥೆಯಲ್ಲಿ ಸಮಸಮಾಜ ನಿರ್ಮಾಣ ಆಗುವವರೆಗೆ ಸರ್ಕಾರದ ಮೀಸಲಾತಿ ಸೌಲಭ್ಯ ಪಡೆದು ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಗತಿ ಸಾಧಿಸಬೇಕು. ರಾಷ್ಟ್ರದ ಎಲ್ಲೆಡೆ ಇರುವ ಸವಿತಾ ಸಮಾಜದವರು ವೃತ್ತಿಯ ಜತೆಗೆ ಎಂಜಿನಿಯರಿಂಗ್, ವೈದ್ಯಕೀಯ ಮತ್ತಿತರ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಬೇಕು ಎಂದರು.
ಪತ್ರಕರ್ತ ಅನಿಲ್.ಎಚ್.ಟಿ. ಮಾತನಾಡಿ, ಸಮಾಜ ಮತ್ತು ಸಮಾಜದ ಜನರು ಸುಂದರವಾಗಿ ಇರುವಲ್ಲಿ ಸವಿತಾ ಸಮಾಜದವರ ಕೊಡುಗೆ ಅಪಾರವಾಗಿದೆ. ನಿಜಾರ್ಥದಲ್ಲಿಯೂ ಸವಿತಾ ಸಮಾಜದವರು ಸಮಾಜದ ಜನತೆಯನ್ನು ಸುಂದರವಾಗಿ ರೂಪಿಸುಲ್ಲಿ ಕಾರಣರಾಗಿದ್ದಾರೆ. ಸವಿತಾ ಸಮಾಜದ ಬಾಂಧವರ ಕಾರ್ಯ ಇಲ್ಲದ ಸಮಾಜವನ್ನು ಊಹಿಸಲೇ ಸಾಧ್ಯವಿಲ್ಲ ಎಂದರು.
ಸವಿತಾ ಮಹರ್ಷಿಗಳು ಯುಗಪುರುಷರಾಗಿದ್ದಾರೆ ಎಂದು ಬಣ್ಣಿಸಿದ ಅನಿಲ್, ರಥಸಪ್ತಮಿಯಂದೇ ಜನಿಸಿದ ಸವಿತಾ ಮಹರ್ಷಿಗಳು, ದೇವರ ಆಯುಷ್ಕರ್ಮ ಮಾಡುವ ಸೇವಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದರಲ್ಲದೇ ನಾದಸ್ವರಕ್ಕೂ ಸವಿತಾ ಮಹರ್ಷಿಗಳ ಕೊಡುಗೆ ಅಪಾರ ಎಂದರು.
ಸವಿತಾ ಸಮಾಜದವರ ವತ್ತಿಯು ಆಧುನಿಕ ತಂತ್ರಜ್ಞಾನಗಳ ಸುಳಿಯಲ್ಲಿ ಸಿಲುಕಿದೆ. ಹೀಗಿದ್ದರೂ ಯಾವುದೇ ಯಂತ್ರಗಳು ಕೂಡ ವ್ಯಕ್ತಿಯ ವೃತ್ತಿ ಕೌಶಲ್ಯತೆಗೆ ಸರಿಸಾಟಿಯಾಗಲಾರದು. ಹೀಗಾಗಿ ಸವಿತಾ ಸಮಾಜದವರಿಗೆ ವತ್ತಿಯಲ್ಲಿನ ಸವಾಲುಗಳ ಆತಂಕ ಅನಗತ್ಯ ಎಂದರು.
ಕೊಡಗು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ದೊರೇಶ್, ತಾಲೂಕು ಅಧ್ಯಕ್ಷ ಮಧು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಮಾತನಾಡಿದರು. ಸವಿತಾ ಸಮಾಜದ ಮುಖಂಡರು ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net