ಪಾರಾಣೆ ಕೇಂದ್ರ ಕ್ರೀಡಾ ಮಂಡಳಿಯಿಂದ ಆಯೋಜಿಸಿದ್ದ ಗ್ರಾಮಾಂತರ ಕ್ರೀಡಾಕೂಟದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದರು.
Published on:
Copied
Follow Us
ನಾಪೋಕ್ಲು: ಇಲ್ಲಿಗೆ ಸಮೀಪದ ಪಾರಾಣೆ ಕೇಂದ್ರ ಕ್ರೀಡಾ ಮಂಡಳಿ ವತಿಯಿಂದ ಪಾರಾಣೆ ಜಿಎಂಪಿ ಶಾಲಾ ಆಟದ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮಾಂತರ ಕ್ರೀಡಾಕೂಟಕ್ಕೆ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು, ನಮ್ಮ ಹಿರಿಯರು ಕೊಡುಗೈ ದಾನಿಗಳಾಗಿದ್ದು ಶಾಲೆ, ಮೈದಾನ, ಆಸ್ಪತ್ರೆಗೆ ಬೇಕಾದಷ್ಟು ಜಾಗಗಳನ್ನು ದಾನವಾಗಿ ನೀಡಿದ್ದಾರೆ. ಇದನ್ನು ಉಳಿಸಿಕೊಳ್ಳಲು ಎಲ್ಲರ ಸಹಕಾರ ಅಗತ್ಯ. ಕ್ರೀಡಾಕೂಟಗಳು ಗ್ರಾಮೀಣ ಕ್ರೀಡೆಯನ್ನು ಪೋಷಿಸಿ ಬೆಳೆಸುವುದಕ್ಕೆ ಸಹಕಾರಿಯಾಗಲಿದೆ ಎಂದರು.
ನಾನು ಇಲ್ಲಿಗೆ ಪ್ರಥಮವಾಗಿ ಭೇಟಿ ನೀಡಿದಾಗ ನಿಮಗೆ ನೀಡಿದ ಆಶ್ವಾಸನೆಯಂತೆ ಪೆವಿಲಿಯನ್ ನಿರ್ಮಿಸಿಕೊಡಲಾಗಿದೆ. ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ನಿಮ್ಮ ಜತೆ ಇದ್ದೇನೆ ಎಂದರು. ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಬಳಿಕ ಪಥಸಂಚಲನದ ಗೌರವ ವಂದನೆ ಸ್ವೀಕರಿಸಿದರು. ಕ್ರೀಡಾ ಜ್ಯೋತಿ ಬೆಳಗಿಸಿ ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಪಾರಾಣೆ ಕೇಂದ್ರ ಕ್ರೀಡಾ ಮಂಡಳಿ ಅಧ್ಯಕ್ಷ ಮಚ್ಚಾಂಡ ಸಾಬು ದೇವಯ್ಯ, ಪಾರಾಣೆ ಪಂಚಾಯಿತಿ ಅಧ್ಯಕ್ಷ ಪಾಡೆಯಂದ ಕಟ್ಟಿ ಕುಶಾಲಪ್ಪ, ಕ್ರೀಡಾ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.