ಶ್ರೀ ಓಂಕಾರೇಶ್ವರ ದೇವಾಲಯಕ್ಕೆ 1 ಕೋಟಿ ರೂ. ಅನುದಾನ

ಶ್ರೀ ಓಂಕಾರೇಶ್ವರ ದೇವಾಲಯ ಸಮುಚ್ಛಯ ಅಭಿವೃದ್ಧಿಗೆ ನೆರವು ಕೋರಿ ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಶಾಸಕ ಡಾ. ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. ಚುಮ್ಮಿ ದೇವಯ್ಯ, ಅಂಬೆಕಲ್ ಕುಶಾಲಪ್ಪ , ಪ್ರಕಾಶ್ ಆಚಾರ್ಯ, ಜಿ. ರಾಜೇಂದ್ರ ಇದ್ದರು.
ಶ್ರೀ ಓಂಕಾರೇಶ್ವರ ದೇವಾಲಯ ಸಮುಚ್ಛಯ ಅಭಿವೃದ್ಧಿಗೆ ನೆರವು ಕೋರಿ ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಶಾಸಕ ಡಾ. ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. ಚುಮ್ಮಿ ದೇವಯ್ಯ, ಅಂಬೆಕಲ್ ಕುಶಾಲಪ್ಪ , ಪ್ರಕಾಶ್ ಆಚಾರ್ಯ, ಜಿ. ರಾಜೇಂದ್ರ ಇದ್ದರು.
Published on
ಮಡಿಕೇರಿ:
ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ಉಸ್ತುವಾರಿಯಲ್ಲಿರುವ ಶ್ರೀ ಓಂಕಾರೇಶ್ವರ, ಶ್ರೀ ಆಂಜನೇಯ ಹಾಗೂ ಶ್ರೀ ಕೋಟೆ ಮಹಾಗಣಪತಿ ದೇವಾಲಯಗಳ ಅಭಿವೃದ್ಧಿಗೆ ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸಲುವಾಗಿ ಒಟ್ಟು 1 ಕೋಟಿ ರೂ. ಅನುದಾನವನ್ನು ಸರ್ಕಾರದಿಂದ ಒದಗಿಸುವುದಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದ್ದಾರೆ. ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಸದಸ್ಯರುಗಳಾದ ಅಂಬೆಕಲ್ ಕುಶಾಲಪ್ಪ , ಪ್ರಕಾಶ್ ಆಚಾರ್ಯ ಹಾಗೂ ಜಿ. ರಾಜೇಂದ್ರ ಇವರುಗಳು ಬುಧವಾರ ಮಾಡಿದ ಮನವಿಗೆ ಸ್ಪಂದಿಸಿದ ಶಾಸಕರು ಈ ಭರವಸೆ ನೀಡಿದ್ದಾರೆ.
ಸರ್ಕಾರದಿಂದ ತನಗೆ ಶಾಸಕರ ಅನುದಾನ ದೊರಕುವ ಮೂಲದಿಂದ 50 ಲಕ್ಷ ರೂ., ಮುಜರಾಯಿ ಇಲಾಖೆಯಿಂದ ಸಚಿವ ರಾಮಲಿಂಗಾ ರೆಡ್ಡಿ ಅವರ ಮೂಲಕ 50 ಲಕ್ಷ ರೂ. ಹೀಗೆ ಒಟ್ಟು ರೂ. 1 ಕೋಟಿ ರೂ. ಒದಗಿಸುವುದಾಗಿ ಭರವಸೆಯಿತ್ತಿದ್ದಾರೆ.
ಈಗಾಗಲೇ ಸಮಿತಿಯಿಂದ ಸುಮಾರು 36 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಯೋಜನೆಯನ್ನು ಆಂಜನೇಯ ದೇವಾಲಯ ಆವರಣದಲ್ಲಿ ಕೈಗೊಂಡು ಅದು ಮುಕ್ತಾಯ ಹಂತದಲ್ಲಿದೆ. ದೇವಾಲಯ ಸುತ್ತಲೂ ನೆಲ ಹಾಸು ಹಾಗೂ ಛಾವಣಿಯನ್ನು ನಿರ್ಮಿಸಲಾಗಿದೆ. ಆಂಜನೇಯ ದೇವಾಲಯದ ಹೊರ ಆವರಣವನ್ನು ವಿಸ್ತರಿಸಲಾಗಿದೆ. ಅಲ್ಲದೆ ದೇವಾಲಯ ಆವರಣದಲ್ಲಿ ನೂತನವಾಗಿ ನವಗ್ರಹಗಳನ್ನು ಪ್ರತಿಷ್ಠಾಪಿಸಲು ಕಾರ್ಯೋನ್ಮುಖವಾಗಿರುವುದಾಗಿ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ತಿಳಿಸಿದ್ದಾರೆ.
ಈಗಾಗಲೇ ನವಗ್ರಹ ಮೂರ್ತಿಗಳನ್ನು ಶಿಲ್ಪಿಗಳಿಂದ ನಿರ್ಮಿಸಿ ತರಿಸಲಾಗಿದ್ದು. ಏ. 25 ರಂದು ಕ್ಷೇತ್ರ ತಂತ್ರಿಯವರಾದ ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿ ಆಂಜನೇಯ ದೇಗುಲದ ಆವರಣದಲ್ಲಿ ಪ್ರತಿಷ್ಠಾಪನಾ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರೆ. ಈ ಸಮುಚ್ಛಯ ದೇವಾಲಯಗಳ ಅಭಿವೃದ್ಧಿಗೆ ಒಟ್ಟು 5 ಕೋಟಿ ರೂ. ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು ಈ ಪೈಕಿ ಸರ್ಕಾರದ ಮೂಲಕ 1 ಕೋಟಿ ರೂ. ಒದಗಿಸುವ ಭರವಸೆ ಶಾಸಕರು ನೀಡಿದ್ದಾರೆ.
ಇನ್ನುಳಿದಂತೆ ಕೈಗೊಳ್ಳಬೇಕಾದ ಬೃಹತ್ ಯೋಜನೆಗಳಿಗಾಗಿ ಕೊಡಗಿನ ಉದಾರ ದಾನಿಗಳಿಂದಲೂ ಹಣ ಸಂಗ್ರಹಿಸಲು ಸಹಕಾರ ಕೋರಲಾಗಿದೆ.
ದೇವಾಲಯಗಳ ಮುಂಭಾಗ ಮಹಾದ್ವಾರ ನಿರ್ಮಾಣ, ಓಂಕಾರೇಶ್ವರ ದೇವಾಲಯ ಒಳ ಆವರಣದಲ್ಲಿರುವ ಪೌಳಿಗಳ ದುರಸ್ತಿ, ಹೊರ ಆವರಣದಲ್ಲಿರುವ ಕಲ್ಯಾಣಿ ಕೆರೆ ದುರಸ್ತಿ ಮತ್ತು ನೂತನ ಗ್ರಿಲ್ ಅಳವಡಿಕೆ, ದೇವಾಲಯ ಹೊರ ಆವರಣದ ಸುತ್ತಲೂ ಕಲ್ಲಿನ ಹಾಸು ಅಳವಡಿಕೆ, ಓಂಕಾರ ಸದನದ ದ್ವಿತೀಯ ಅಂತಸ್ತು ನಿರ್ಮಾಣ, ಸಿಬ್ಬಂದಿಗೆ ವಾಸಿಸಲು ಅತ್ಯಗತ್ಯವಾದ ವಸತಿ ಗೃಹ ನಿರ್ಮಾಣ ಮೊದಲಾದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಮಡಿಕೇರಿಯ ಐತಿಹಾಸಿಕ ಕೋಟೆ ಗಣಪತಿ ದೇವಾಲಯಕ್ಕೆ ನೂತನ ಮೇಲ್ಛಾವಣಿ ನಿರ್ಮಿಸಲು ಹಾಗೂ ನೆಲ ಭಾಗಕ್ಕೆ ಇಂಟರ್ ಲಾಕ್ ಅಳವಡಿಸಲು ಯೋಜಿಸಿದ್ದು ಈ ದೇವಾಲಯದ ಪರಿಧಿಯು ವಾಸ್ತು ಪುರಾತತ್ವ ಇಲಾಖೆಗೆ ಒಳಪಡುವುದರಿಂದ ಕಾರ್ಯ ನಿರ್ವಹಿಸಲು ಇಲಾಖೆಯಿಂದ ಅನುಮತಿ ಕೋರಲಾಗಿದೆ ಎಂದು ಅಧ್ಯಕ್ಷ ಚುಮ್ಮಿ ದೇವಯ್ಯ ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net