ದೊಡ್ಡಮಳ್ತೆಯಲ್ಲಿ ಅಳ್ತೆ ಮೀರಿ ರಸ್ತೆ ಫಜೀತಿ

ಸೋಮವಾರಪೇಟೆ ತಾಲೂಕಿನ ದೊಡ್ಡಮಳ್ತೆ ಅಂಗನವಾಡಿಯಿಂದ ತೆರಳುವ ಸಂಪರ್ಕ ರಸ್ತೆಯ ದುಸ್ಥಿತಿ.
ಸೋಮವಾರಪೇಟೆ ತಾಲೂಕಿನ ದೊಡ್ಡಮಳ್ತೆ ಅಂಗನವಾಡಿಯಿಂದ ತೆರಳುವ ಸಂಪರ್ಕ ರಸ್ತೆಯ ದುಸ್ಥಿತಿ.
Published on

ಪ್ರಮುಖ ಮುಖ್ಯಾಂಶಗಳು

  • ಮಳೆಗಾಲದಲ್ಲಿ ಪ್ರಯಾಸದ ಸಂಚಾರ
  • ಕನಿಷ್ಠ ಮೂಲಸೌಕರ್ಯಗಳೂ ಇಲ್ಲ
ಸೋಮವಾರಪೇಟೆ: ತಾಲೂಕಿನ ಪುರಾತನ ಗ್ರಾಮ ಎಂದೇ ಹೆಸರಾಗಿರುವ ದೊಡ್ಡಮಳ್ತೆ ಗ್ರಾಮದಲ್ಲಿ ದುಸ್ಥಿತಿಯಲ್ಲಿರುವ ರಸ್ತೆಗಳಲ್ಲಿ ಸಂಚಾರ ದುಸ್ತರವಾಗಿದೆ. ಕನಿಷ್ಠ ಮೂಲಸೌಕರ್ಯಗಳಲ್ಲಿ ಒಂದಾದ ರಸ್ತೆಗಳು ಮಳೆಗಾಲದಲ್ಲಿ ಅಧ್ವಾನದ ಸ್ಥಿತಿಗೆ ತಲುಪುವುದರಿಂದ ಗ್ರಾಮಸ್ಥರು ಪ್ರಯಾಸದಿಂದಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ತನ್ನ ಐತಿಹಾಸಿಕ, ಧಾರ್ಮಿಕ ಹಾಗೂ ಪ್ರವಾಸೋದ್ಯಮದ ಮಹತ್ವದಿಂದ ವಿಶಿಷ್ಟ ಗುರುತನ್ನು ಹೊಂದಿದೆ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿದೆ ಎನ್ನಲಾಗುವ ಈ ಗ್ರಾಮವು ಒಂದು ಕಡೆ ಅಭಿವೃದ್ಧಿಯ ಹೆಜ್ಜೆ ಇಡುತ್ತಿದ್ದರೆ, ಮತ್ತೊಂದು ಕಡೆ ಗ್ರಾಮದೊಳಗಿನ ರಸ್ತೆಯ ದುರಸ್ತಿಗೆ ಅಂಗಲಾಚುವ ದುಸ್ಥಿತಿ ಒದಗಿದೆ.
ಗ್ರಾಮದ ಗುರುತಾಗಿ ಉಳಿದಿರುವ ಶ್ರೀಹೊನ್ನಮ್ಮ ಜಾತ್ರೋತ್ಸವ, ಗೌರಿಗಣೇಶ ಹಬ್ಬದ ಸಂದರ್ಭದಲ್ಲಿ ನಡೆಯುವ ಸಂಪ್ರದಾಯವಾಗಿದ್ದು, ಪ್ರತಿವರ್ಷ ಸಾವಿರಾರು ಭಕ್ತರನ್ನು ಸೆಳೆಯುತ್ತದೆ. ಇದೇ ಹಿನ್ನೆಲೆಯಲ್ಲಿ ಹೊನ್ನಮ್ಮನ ಕೆರೆ ಪ್ರದೇಶವನ್ನು ಪ್ರವಾಸಿ ತಾಣವಾಗಿ ರೂಪಿಸುವ ಕನಸನ್ನು ಗ್ರಾಮಸ್ಥರು ಹಲವು ವರ್ಷಗಳಿಂದ ಹೊತ್ತಿದ್ದಾರೆ. ಸ್ಥಳೀಯರ ನಿರಂತರ ಪ್ರಯತ್ನದಿಂದ ಕೆಲವು ಹಂತದ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಜನಪ್ರತಿನಿಧಿಗಳ ಸಹಕಾರದಿಂದ ಮೂಲಸೌಕರ್ಯಗಳಿಗೂ ಅನುದಾನ ದೊರೆತಿದೆ.
ಗ್ರಾಮದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಹೊನ್ನಮ್ಮನ ಕೆರೆಯಲ್ಲಿ ಜಲಕ್ರೀಡೆ ಯೋಜನೆಯನ್ನೂ ರೂಪಿಸಲಾಗಿದೆ. ಯೋಜನೆ ಜಾರಿಯಾದರೆ ಪ್ರವಾಸಿಗರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ. ಆದರೆ ಪ್ರವಾಸೋದ್ಯಮ ಬೆಳೆಯಬೇಕಾದರೆ ಮೊದಲು ಗ್ರಾಮ ಸಂಪರ್ಕ ವ್ಯವಸ್ಥೆ ಸುಧಾರಿಸಬೇಕೆಂಬುದು ಸ್ಥಳೀಯರ ಒತ್ತಾಯವಾಗಿದೆ.
ರೋಡ್‌ಗಳ ದುಸ್ಥಿತಿ; ಗ್ರಾಮಸ್ಥರಿಗೆ ಸಂಕಷ್ಟ
ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದರೂ ಕೆಲ ಪ್ರಮುಖ ಸಂಪರ್ಕ ರಸ್ತೆಗಳು ಇನ್ನೂ ಡಾಂಬರೀಕರಣದ ನಿರೀಕ್ಷೆಯಲ್ಲಿವೆ. ವಿಶೇಷವಾಗಿ ಅಂಗನವಾಡಿಯಿಂದ ವಳಗುಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಲವು ವರ್ಷಗಳಿಂದ ಗುಂಡಿಮಯವಾಗಿದ್ದು, ಮಳೆಗಾಲದಲ್ಲಿ ಸಂಚಾರ ಕಷ್ಟಕರವಾಗುತ್ತದೆ. ಹೊನವಳ್ಳಿ, ಸುಳಿಮಳ್ತೆ, ಹೊನ್ನಮ್ಮನ ಕೆರೆ ರಸ್ತೆ ಅಲ್ಲಲ್ಲಿ ಗುಂಡಿಮಯವಾಗಿದೆ.
ಸುಮಾರು 40 ಕುಟುಂಬಗಳು ಈ ರಸ್ತೆಯನ್ನೇ ನಿತ್ಯ ಜೀವನದ ಆಧಾರವನ್ನಾಗಿ ಮಾಡಿಕೊಂಡಿವೆ. ಕೃಷಿ ಚಟುವಟಿಕೆಗಳಿಗೂ ಇದೇ ರಸ್ತೆ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಗ್ರಾಮದ ಅನೇಕ ಕುಟುಂಬಗಳ ಕಾಫಿ ತೋಟ ಹಾಗೂ ಕೃಷಿ ಭೂಮಿಗಳಿಗೆ ತೆರಳಲು ಇದೇ ಮಾರ್ಗವನ್ನು ಬಳಸಬೇಕಾಗಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ.
ಮಳೆಗಾಲದಲ್ಲಿ ರಸ್ತೆಯ ಸ್ಥಿತಿ ಹದಗೆಡುವ ಕಾರಣ ವಾಹನಗಳು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ತುರ್ತು ಆರೋಗ್ಯ ಸೇವೆ, ಕೃಷಿ ಉತ್ಪನ್ನ ಸಾಗಣೆ ಹಾಗೂ ಶಾಲಾ ಮಕ್ಕಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಅಲ್ಲದೆ ಭೋವಿ ಮನೆ ಮಾರ್ಗದ ಸುಮಾರು ಒಂದು ಕಿಲೋಮೀಟರ್ ರಸ್ತೆ ಇದುವರೆಗೂ ಡಾಂಬರೀಕರಣ ಕಾಣದೇ ಉಳಿದಿದೆ. ರಸ್ತೆ ಮಣ್ಣಿನಿಂದ ಕೂಡಿರುವುದರಿಂದ ಮಳೆಯ ಸಮಯದಲ್ಲಿ ಜಾರುವ ಸ್ಥಿತಿ ನಿರ್ಮಾಣವಾಗಿ ವಾಹನ ಚಾಲಕರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಹೊನ್ನಮ್ಮನ ಕೆರೆ ತಟದ ಕೆಲ ಭಾಗಗಳಲ್ಲಿ ರಸ್ತೆ ಬಿರುಕು ಬಿಟ್ಟಿರುವುದೂ ಆತಂಕಕ್ಕೆ ಕಾರಣವಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಯ ಗುರಿ ಹೊಂದಿರುವ ಪ್ರದೇಶದಲ್ಲೇ ರಸ್ತೆ ಸುರಕ್ಷತೆ ಕೊರತೆಯಾಗಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ಆದ್ಯತೆ ನೀಡಲಿ
ದೊಡ್ಡಮಳ್ತೆ ಗ್ರಾಮದಲ್ಲಿ ಒಂದೆಡೆ ಪ್ರವಾಸೋದ್ಯಮ ಅಭಿವೃದ್ಧಿಯ ಕನಸು ಇದ್ದರೆ, ಮತ್ತೊಂದೆಡೆ ಗ್ರಾಮೀಣ ರಸ್ತೆ, ಮೂಲಸೌಕರ್ಯ ಮತ್ತು ಪಾರಂಪರಿಕ ಸಂಪತ್ತಿನ ಸಂರಕ್ಷಣೆಯ ಸವಾಲು ಎದುರಾಗಿದೆ. ಗ್ರಾಮಕ್ಕೆ ಈಗಾಗಲೇ ದೊರೆತಿರುವ ಅಭಿವೃದ್ಧಿ ಯೋಜನೆಗಳ ಜತೆಗೆ ಉಳಿದಿರುವ ರಸ್ತೆ ಕಾಮಗಾರಿಗಳು ಪೂರ್ಣಗೊಂಡು, ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಿದರೆ ದೊಡ್ಡಮಳ್ತೆ ಗ್ರಾಮವು ಜಿಲ್ಲೆಯ ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ನಕ್ಷೆಯಲ್ಲಿ ಇನ್ನಷ್ಟು ಪ್ರಾಮುಖ್ಯತೆ ಪಡೆಯುವ ಸಾಧ್ಯತೆ ಇದೆ ಎನ್ನುತ್ತಾರೆ ಸ್ಥಳೀಯರು.
ದೊಡ್ಡಮಳ್ತೆ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿ ಆಗಬೇಕಿದೆ. ಸ್ಥಳ ಪರಿಶೀಲನೆ ಮಾಡಲಾಗಿದೆ. ರಸ್ತೆ ಕಿರಿದಾಗಿರುವ ಕಾರಣ, ಮೋರಿಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಕಾಂಕ್ರೀಟ್ ರಸ್ತೆ ಮಾಡಬೇಕಿದೆ. ಹೆಚ್ಚಿನ ಅನುದಾನವೂ ಬೇಕಿದೆ. ಮೇಲಧಿಕಾರಿಗಳಿಗೆ ಮಾಹಿತಿ ನೀಡಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
ಸಲೀಂ ಇಂಜಿನಿಯರ್, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗ, ಸೋಮವಾರಪೇಟೆ
ಮಳೆಗಾಲದಲ್ಲಿ ರಸ್ತೆಯಲ್ಲಿ ತಿರುಗಾಡಲು ಸಾಧ್ಯವಾಗುವುದಿಲ್ಲ. ಗುಂಡಿಯಲ್ಲಿ ನೀರು ಸಂಗ್ರಹವಾಗುತ್ತದೆ. ಕಷ್ಟದ ಸ್ಥಿತಿಯಲ್ಲಿದ್ದೇವೆ. ಗ್ರಾಮ ಪಂಚಾಯಿತಿಗೆ ಅರ್ಜಿ ನೀಡಿ ಸಾಕಾಗಿದೆ. ಇಂಜಿನಿಯರ್ ಬಂದು ಹೋದವರು ಮತ್ತೆ ಬಂದಿಲ್ಲ. ಯಾರಿಗೆ ಹೇಳುವುದು ತಿಳಿಯುತ್ತಿಲ್ಲ.
ಭರತ್ ಕೃಷಿಕ, ದೊಡ್ಡಮಳ್ತೆ ಗ್ರಾಮ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net