ಕೊಡಗು ಸೈನಿಕ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ ನಡೆಯಿತು. ಕರ್ನಲ್ ಅಮರ್ ಜೀತ್ ಸಿಂಗ್, ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್, ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಎನ್. ವಿಬಿನ್ ಕುಮಾರ್ ಇದ್ದರು.
ಯಾವುದೇ ಜವಾಬ್ದಾರಿ ಕೇವಲ ಸೌಲಭ್ಯವಲ್ಲ, ಅದೊಂದು ಕರ್ತವ್ಯ ಎಂದು ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್ ಅಮರ್ ಜೀತ್ ಸಿಂಗ್ ಹೇಳಿದರು. ಕೂಡಿಗೆಯ ಕೊಡಗು ಸೈನಿಕ ಶಾಲೆಯ ಕುವೆಂಪು ವಿವಿಧೋದ್ದೇಶ ಸಭಾಂಗಣದಲ್ಲಿ ಮಂಗಳವಾರ ನಡೆದ 2026-27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಜವಾಬ್ದಾರಿಯು ಕೇವಲ ಸೌಲಭ್ಯವಲ್ಲ, ಅದೊಂದು ಕರ್ತವ್ಯ ಎಂದು ತಿಳಿಸಿದ ಅವರು, ಪದಾಧಿಕಾರಿಗಳಾಗಿ ಆಯ್ಕೆಯಾದ ನೂತನ ನಾಯಕರು ಮುಂಚೂಣಿಯಲ್ಲಿ ನಿಂತು ಶಾಲೆಯ ಎಲ್ಲಾ ಚಟುವಟಿಕೆಗಳನ್ನು ಮುನ್ನಡೆಸಬೇಕು. ಸಮಗ್ರತೆಯನ್ನು ಕಾಪಾಡಿಕೊಂಡು ಕೊಡಗಿನ ಸೈನಿಕ ಶಾಲೆಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ನಿಜವಾದ ನಾಯಕರು ಮಾದರಿಯಾಗಿ ನಿಂತು ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾರೆ ಎಂದರಲ್ಲದೆ ನಾಯಕತ್ವ ಹಾಗೂ ಜವಾಬ್ದಾರಿಯ ಸಾರವನ್ನು ಒತ್ತಿ ಹೇಳಿದರು. ವಿದ್ಯಾರ್ಥಿಗಳು ಕರ್ತವ್ಯನಿಷ್ಠರಾಗಿ ತಮ್ಮ 'ನಾಯಕತ್ವ ಧರ್ಮ'ವನ್ನು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ನಿರ್ವಹಿಸುವಂತೆ ಅವರು ಕರೆ ನೀಡಿದರು
ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್, ಉಪ ಪ್ರಾಚಾರ್ಯ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕ ಎನ್. ವಿಬಿನ್ ಕುಮಾರ್ ಶಾಲೆಯ ಹಿರಿಯ ವಿದ್ಯಾರ್ಥಿಗಳ ನಾಯಕರಿಗೆ ಭುಜದ ಮೇಲಿನ ಬ್ಯಾಡ್ಜಗಳನ್ನ ಅನಾವರಣಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಜವಾಬ್ದಾರಿಗಳನ್ನು ಹಸ್ತಾಂತರಿಸಿದರು.
ಇದರೊಂದಿಗೆ ವಿವಿಧ ನಿಲಯಗಳ ನಾಯಕರ ನೇಮಕಾತಿಗಳನ್ನು ಸಹ ಮಾಡಲಾಯಿತು. ವಿವಿಧ ನಿಲಯಗಳ ನಿಲಯ ಶಿಕ್ಷಕರು ಶಾಲೆಯ ಪ್ರಾಚಾರ್ಯರೊಂದಿಗೆ ಸೇರಿ ವಿದ್ಯಾರ್ಥಿಗಳಿಗೆ ಹೆಗಲ ಬ್ಯಾಡ್ಜ್ಗಳನ್ನು ಧರಿಸಿ ಅವರವರ ನಿಲಯಗಳ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲಾಯಿತು. ನಂತರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಶಾಲಾ ನಾಯಕನಾಗಿ ಆಯ್ಕೆಯಾದ ಚಿನ್ಮಯ ಖಾನಾವಲ್ಲಿ ಮಾರ್ಗದರ್ಶನದಲ್ಲಿ ನೂತನ ವಿದ್ಯಾರ್ಥಿ ನಾಯಕರು ಶಾಲೆಯ ಮೌಲ್ಯಗಳು, ಶಿಸ್ತು ಮತ್ತು ಗೌರವವನ್ನು ಎತ್ತಿಹಿಡಿಯುವುದಾಗಿ ಪ್ರತಿಜ್ಞೆ ಮಾಡಿದರು.
ಶಾಲೆಯ ಶಿಸ್ತಿನ ನಾಯಕನಾಗಿ ಭರತ್ ಚೌಧರಿ, ಕ್ರೀಡಾ ನಾಯಕನಾಗಿ ಸೋಹಮ್ ಬಾಗೇವಾಡಿ, ಶೈಕ್ಷಣಿಕ ವಿಭಾಗದ ನಾಯಕನಾಗಿ ಅಕ್ಷತ್ ಗೈರೋಲಾ, ಸಾಂಸ್ಕೃತಿಕ ನಾಯಕನಾಗಿ ಗಿತೇಶ್ ಆರ್, ಭೋಜನಾಲಯದ ನಾಯಕನಾಗಿ ಪೂರ್ವಿಕ್ ಆರ್, ಐಟಿ ನಾಯಕನಾಗಿ ನೀರಜ್ ಧರಣಿ ಆಯ್ಕೆಯಾದರು.
ಶಾಲೆಯ ಎಲ್ಲಾ ಬೋಧಕ - ಬೋಧಕೇತರ ಸಿಬ್ಬಂದಿ, ಎನ್‌ಸಿಸಿ ಸಿಬ್ಬಂದಿ, ದೈಹಿಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.