ನೀರಿನ ಸೆಳೆತಕ್ಕೆ ಸಿಲುಕಿದ ವಿದ್ಯಾರ್ಥಿಗಳ ರಕ್ಷಣೆ

ನೀರಿನ ಸೆಳೆತದಲ್ಲಿ ಸಿಲುಕಿರುವ ವಿದ್ಯಾರ್ಥಿಗಳು.
ನೀರಿನ ಸೆಳೆತದಲ್ಲಿ ಸಿಲುಕಿರುವ ವಿದ್ಯಾರ್ಥಿಗಳು.
Published on

ಪ್ರಮುಖ ಮುಖ್ಯಾಂಶಗಳು

  • waterlogging
  • Mallalli Waterfall
ಸೋಮವಾರಪೇಟೆ: ತಾಲೂಕಿನ ಪ್ರಸಿದ್ಧ ಮಲ್ಲಳ್ಳಿ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದ ಆಂಧ್ರಪ್ರದೇಶ ಮೂಲದ ಇಬ್ಬರು ವಿದ್ಯಾರ್ಥಿಗಳು ನೀರಿನ ಸೆಳೆತಕ್ಕೆ ಸಿಲುಕಿ ಅಪಾಯಕ್ಕೊಳಗಾದ ಘಟನೆ ಸೋಮವಾರ ಸಂಜೆ ಸಂಭವಿಸಿದ್ದು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಕಾರ್ಯಾಚರಣೆಯಿಂದ ರಕ್ಷಿಸಲ್ಪಟ್ಟಿದ್ದಾರೆ.
ಆಂಧ್ರಪ್ರದೇಶದ ಗಣೇಶ್ ನಾಯಕ್ (21) ಹಾಗೂ ಸಂತೋಷ್ ಕುಮಾರ್ (23) ಅಪಾಯದಿಂದ ಪಾರಾದ ವಿದ್ಯಾರ್ಥಿಗಳು. ಪ್ರವಾಸಕ್ಕೆ ಬಂದಿದ್ದ ತಂಡದೊಂದಿಗೆ ಜಲಪಾತಕ್ಕೆ ಆಗಮಿಸಿದ್ದ ಇವರು, ರಕ್ಷಣಾ ಬೇಲಿಯನ್ನು ದಾಟಿ ಹೊಳೆಯಲ್ಲಿ ನೀರಿಗಿಳಿದು ಆಟವಾಡುತ್ತಿದ್ದ ವೇಳೆ ಮೇಲ್ಭಾಗದಲ್ಲಿರುವ ಜಲವಿದ್ಯುತ್ ಉತ್ಪಾದನಾ ಘಟಕದಿಂದ ನೀರು ಹರಿಸಲಾಗಿದೆ.
ನೀರು ಹರಿಸುವ ಮುನ್ನ ಸೈರನ್ ಮೊಳಗಿಸಲಾಗಿದ್ದರೂ, ನೀರಿನಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿಗಳಿಗೆ ಅದು ಗಮನಕ್ಕೆ ಬಂದಿಲ್ಲ. ಕೆಲವೇ ಕ್ಷಣಗಳಲ್ಲಿ ನೀರಿನ ಹರಿವು ಹಾಗೂ ರಭಸ ಹೆಚ್ಚಾಗಿ, ಇಬ್ಬರೂ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಕಲ್ಲುಬಂಡೆಯನ್ನು ಹಿಡಿದುಕೊಂಡು ಸಹಾಯಕ್ಕಾಗಿ ಕಾಯುತ್ತಿದ್ದರು.
ಸುಮಾರು ಒಂದು ಗಂಟೆಯ ಬಳಿಕ ಗ್ರಾಮಸ್ಥರಿಗೆ ವಿಷಯ ತಿಳಿದುಬಂದಿದ್ದು, ತಕ್ಷಣ ಜಲವಿದ್ಯುತ್ ಘಟಕಕ್ಕೆ ಮಾಹಿತಿ ನೀಡಿ ನೀರಿನ ಹರಿವನ್ನು ಸ್ಥಗಿತಗೊಳಿಸಲಾಗಿದೆ. ಬಳಿಕ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಇಬ್ಬರು ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ರಕ್ಷಿಸಿದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಪವನ್ ಕುಮಾರ್, ಪಿ.ಎಸ್. ನಾಗೇಶ್, ಲತೇಶ್ ಕುಮಾರ್, ಪ್ರಶಾಂತ್ ಹಾಗೂ ವಿನಿ ಕುಮಾರ್ ಭಾಗವಹಿಸಿದ್ದರು.
ರಕ್ಷಿಸಲ್ಪಟ್ಟ ವಿದ್ಯಾರ್ಥಿಗಳನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯಿಂದ ಕೆಲಕಾಲ ಮಲ್ಲಳ್ಳಿ ಜಲಪಾತ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net