ಜನರ ನಡುವಿನ ಸಂಬಂಧಗಳಿಗೆ ಬೆಲೆ ಕಟ್ಟಲಾಗದು

ಸೋಮವಾರಪೇಟೆ ತಾಲೂಕಿನ ಕೂಗೂರು ಗ್ರಾಮದ ದೇವರಾಜು ಅವರ ಗದ್ದೆಯಲ್ಲಿ ಭಾನುವಾರ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ 10ನೇ ವರ್ಷದ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಾಹಿಳಾ ಥ್ರೋಬಾಲ್ ಗಮನ ಸೆಳೆಯಿತು.
ಸೋಮವಾರಪೇಟೆ ತಾಲೂಕಿನ ಕೂಗೂರು ಗ್ರಾಮದ ದೇವರಾಜು ಅವರ ಗದ್ದೆಯಲ್ಲಿ ಭಾನುವಾರ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ 10ನೇ ವರ್ಷದ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಮಾಹಿಳಾ ಥ್ರೋಬಾಲ್ ಗಮನ ಸೆಳೆಯಿತು.
Published on

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಉಮಾಪತಿ ಶ್ರೀನಿವಾಸ್‌ಗೌಡ ಅಭಿಮತ

ಸೋಮವಾರಪೇಟೆ: ಕೊಡಗಿನ ಜನರಲ್ಲಿ ಮುಗ್ಧತೆ, ಸ್ವಾಭಿಮಾನ ಹಾಗೂ ಪರಸ್ಪರ ಆತ್ಮೀಯತೆ ಅಪಾರವಾಗಿದ್ದು, ಇಲ್ಲಿನ ಜನರ ನಡುವಿನ ಸಂಬಂಧಗಳಿಗೆ ಹಣದ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಹಾಗೂ ಚಲನಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹೇಳಿದರು.
ತಾಲ್ಲೂಕಿನ ಕೂಗೂರು ಗ್ರಾಮದ ದೇವರಾಜು ಅವರ ಗದ್ದೆಯಲ್ಲಿ ಭಾನುವಾರ ಒಕ್ಕಲಿಗರ ಯುವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ 10ನೇ ವರ್ಷದ ಜಿಲ್ಲಾಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಸಂಸ್ಕೃತಿ ಹಾಗೂ ಕೃಷಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಕೆಸರುಗದ್ದೆ ಕ್ರೀಡಾಕೂಟಗಳು ಸಮುದಾಯದ ಜನರನ್ನು ಒಂದೆಡೆ ಸೇರಿಸುವುದರ ಜತೆಗೆ ಪರಸ್ಪರ ಆತ್ಮೀಯತೆ ಮತ್ತು ಒಗ್ಗಟ್ಟನ್ನು ಹೆಚ್ಚಿಸುತ್ತವೆ. ಇಂತಹ ಕಾರ್ಯಕ್ರಮಗಳನ್ನು ಪ್ರತಿ ವರ್ಷವೂ ಮುಂದುವರಿಸಿಕೊಂಡು ಹೋಗಬೇಕು ಎಂದು ಉಮಾಪತಿ ಶ್ರೀನಿವಾಸ್ ಗೌಡ ಕರೆ ನೀಡಿದರು.
ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಮಾತನಾಡಿ, ಗದ್ದೆ ನಾಟಿ ಕೊಡಗಿನ ಕೃಷಿ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಪ್ರಸ್ತುತ ರೈತರ ಗಮನ ತೋಟಗಳತ್ತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೃಷಿ ಸಂಸ್ಕೃತಿಯನ್ನು ಉಳಿಸುವ ಇಂತಹ ಕ್ರೀಡಾಕೂಟಗಳು ಮಹತ್ವ ಪಡೆದುಕೊಂಡಿವೆ. ಇವು ಸಮುದಾಯದ ಒಗ್ಗಟ್ಟಿಗೂ ಸಹಕಾರಿಯಾಗುತ್ತವೆ ಎಂದರು.
ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೆ.ಬಿ.ಸುರೇಶ್ ಮಾತನಾಡಿ, 2013ರಲ್ಲಿ ಸ್ಥಾಪನೆಯಾದ ವೇದಿಕೆ ಕೊಡಗಿನ ರೈತರ ಉಳಿವಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಸಿ ಮತ್ತು ಡಿ ಭೂಮಿ ಸಮಸ್ಯೆ ಸೇರಿದಂತೆ ವಿವಿಧ ರೈತರ ಸಮಸ್ಯೆಗಳ ಬಗ್ಗೆ ವೇದಿಕೆ ಹೋರಾಟ ನಡೆಸಿದೆ. ಕಸ್ತೂರಿರಂಗನ್ ವರದಿ ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟ ಸಮಿತಿಯೊಂದಿಗೆ ಎಲ್ಲರೂ ಕೈಜೋಡಿಸಬೇಕು. ಸೆ.11ರಂದು ಮಡಿಕೇರಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ವೇದಿಕೆಯ ಸ್ಥಾಪಕ ಅಧ್ಯಕ್ಷ ಬಿ.ಜೆ.ದೀಪಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೆಸರುಗದ್ದೆ ಕ್ರೀಡಾಕೂಟದ ಮೂಲಕ ಸಮುದಾಯದ ಜನರನ್ನು ಒಂದೆಡೆ ಸೇರಿಸಿ, ಗ್ರಾಮೀಣ ಕ್ರೀಡೆ ಹಾಗೂ ಕೃಷಿ ಸಂಸ್ಕೃತಿಯನ್ನು ಉಳಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು. ವೇದಿಕೆಯ ದಿವಾಕರ್ ಕೂತಿ ಸ್ವಾಗತಿಸಿದರು. ಸುರೇಶ್ ಜಿಮ್ಮಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಗದ್ದೆ ಮಾಲೀಕ ದೇವರಾಜ್, ಕೂಗೂರು ಗ್ರಾಮಾಧ್ಯಕ್ಷ ಮಹೇಶ್, ದಾನಿಗಳಾದ ನಾಗರಾಜು ಕೂಗೂರು, ವೇದಿಕೆಯ ಪೃಥ್ವಿ ಗೌಡಳ್ಳಿ, ನತೀಶ್ ಮಂದಣ್ಣ, ಪ್ರಸೀ ಗೌಡಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net