ಅನಧಿಕೃತ ಹೋಂಸ್ಟೇಗಳ ನಿಯಂತ್ರಣಕ್ಕೆ ನಿಯಮಾವಳಿ ರೂಪಿಸಬೇಕು

ಕೊಡಗು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್
ಕೊಡಗು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್
Published on
ಮಡಿಕೇರಿ
ಅನಧಿಕೃತ ಹೋಂಸ್ಟೇಗಳ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಕೊಡಗು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್ ಮನವಿ ಮಾಡಿದ್ದಾರೆ.
ಕೊಡಗಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಕಾಣುತ್ತಿದ್ದಂತೆಯೇ ಹೋಂಸ್ಟೇಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇವುಗಳನ್ನು ಶಿಸ್ತುಬದ್ಧ ವ್ಯವಸ್ಥೆ ಅಡಿಯಲ್ಲಿ ನಡೆಸಲು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಕೆಲವು ನಿಯಮಾವಳಿಗಳಿದ್ದು ಅದರ ಪ್ರಕಾರವೇ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಹೋಂಸ್ಟೇಗಳಿಗೆ ಪರವಾನಗಿ ನೀಡಲಾಗುತ್ತದೆ. ಆದರೆ ಅನಧಿಕೃತ ಹೋಂಸ್ಟೇಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕಾನೂನು ಬಾಹಿರ ಚಟುವಟಿಕೆಗಳು ನಡೆಯಲು ಆಸ್ಪದ ಕೊಡುತ್ತಿವೆ. ಇವುಗಳ ವಿರುದ್ಧ ದೂರುಗಳಿದ್ದರೂ ನಿಯಮಾವಳಿಗಳು ಇಲ್ಲದ ಕಾರಣ ಕ್ರಮ ತೆಗೆದುಕೊಳ್ಳಲು ಪೊಲೀಸರು ಅಸಹಾಯಕರಾಗಿದ್ದಾರೆ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೊಡಗಿನಲ್ಲಿ 2,478 ಹೋಂಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಆಗಿ ಪರವಾನಗಿ ಪಡೆದುಕೊಂಡು ವ್ಯವಹಾರ ನಡೆಸುತ್ತಿವೆ. ಆದರೆ 2-3 ಸಾವಿರದಷ್ಟು ಹೋಂ ಸ್ಟೇಗಳು ನೋಂದಣಿ ಆಗದೆ ಕಾರ್ಯನಿರ್ವಹಿಸುತ್ತಿವೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಹೋಂಸ್ಟೇಗಳ ನೋಂದಣಿಗೆ ಬಳಸುವ ಆ್ಯಪ್‌ನಲ್ಲಿ ಸಮಸ್ಯೆ ಇರುವ ಕಾರಣ ನೋಂದಣಿ ನಿಧಾನ ಆಗುತ್ತಿದೆ. ಆದರೂ ನ್ಯಾಯಬದ್ಧವಾಗಿ ವ್ಯವಹಾರ ನಡೆಸುವ ಉದ್ದೇಶದಿಂದ ಎಲ್ಲಾ ಹೋಂಸ್ಟೇಗಳೂ ನೋಂದಣಿ ಮಾಡಿಕೊಳ್ಳಬೇಕಾಗಿದೆ. ನೋಂದಣಿಗೆ ನಿಯಮಾವಳಿಗಳು ಇರುವುದರಿಂದ ಹೋಂಸ್ಟೇಗಳಲ್ಲಿ ನಡೆಯುವ ಕಾನೂನು ವಿರೋಧಿ ಚಟುವಟಿಕೆಗಳು ನಿಯಂತ್ರಣಕ್ಕೆ ಬರುತ್ತದೆ.
ಕುಟ್ಟ ಗ್ರಾಮದ ಹೋಂಸ್ಟೇ ಒಂದರಲ್ಲಿ ನಡೆದಿದೆ ಎನ್ನಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ನಮ್ಮ ಸಂಘಟನೆ ಖಂಡಿಸುತ್ತದೆ. ಇಂಥ ಘಟನೆ ಕೊಡಗಿನಲ್ಲಿ ನಡೆಯಬಾರದಿತ್ತು. ಇದು ಹೋಂಸ್ಟೇಗಳಿಗೆ ಎಚ್ಚರಿಕೆಯ ಗಂಟೆ. ಈ ಪ್ರಕರಣದ ಬಗ್ಗೆ ಕೂಲಂಕುಶ ತನಿಖೆಯ ಅಗತ್ಯವಿದೆ. ಸಂತ್ರಸ್ತೆಯನ್ನು ಕರೆತಂದ ವಾಹನ ಚಾಲಕನನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಬೇಕು.
ನಮ್ಮ ಸಂಘಟನೆಯಲ್ಲಿ ಸದಸ್ಯತ್ವ ಪಡೆಯಬೇಕಾದರೆ ಹೋಂಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಆಗಿರಬೇಕು. ಮತ್ತು ಸಂಘಟನೆಯ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಈ ಸಂಬAಧ ಖುದ್ದು ಪರಿಶೀಲನೆ ನಡೆಸಿದ ನಂತರವೇ ಸದಸ್ಯತ್ವ ನೀಡಲಾಗುತ್ತದೆ. ಕುಟ್ಟ ಗ್ರಾಮದ ಹೋಂಸ್ಟೇ ಕೂಡ ನಮ್ಮಲ್ಲಿ ಸದಸ್ಯತ್ವ ಪಡೆದುಕೊಂಡಿದ್ದು, ನಿಯಮಾವಳಿಗಳ ಪ್ರಕಾರವೇ ನಡೆಯುತ್ತಿತ್ತು. ಅದರ ಮಾಲೀಕರ ವಿರುದ್ಧ ದೂರು ದಾಖಲಾದ ಕೂಡಲೇ ಹೋಂ ಸ್ಟೇ ಪರವಾನಗಿ ರದ್ದು ಮಾಡಬಾರದಿತ್ತು. ಅಮಾನತ್ತಿನಲ್ಲಿ ಇಟ್ಟಿದ್ದರೆ ಸಾಕಿತ್ತು ಎಂದು ಹೇಳಿದರು.
ಕೊಡಗು ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಉಪಾಧ್ಯಕ್ಷ ಅಂಬೇಕಲ್ ನವೀನ್ ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಮೀನಾ ಕಾರ್ಯಪ್ಪ, ಮಾಜಿ ಅಧ್ಯಕ್ಷರಾದ ಕೆ.ಎಂ. ಕರುಂಬಯ್ಯ ಹಾಗೂ ಮದನ್ ಸೋಮಣ್ಣ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net