ಕ್ಷಿಪ್ರ ಕಾರ್ಯಪಡೆ ತಂಡದ ಸಿಬ್ಬಂದಿಗೆ ಸಂಕಷ್ಟ

ಮಡಿಕೇರಿ ಅರಣ್ಯ ಭವನ
ಮಡಿಕೇರಿ ಅರಣ್ಯ ಭವನ
Published on

ಪ್ರಮುಖ ಮುಖ್ಯಾಂಶಗಳು

  • ಹೊರಗುತ್ತಿಗೆ ನೌಕರರ ಸಂಕಷ್ಟದ ಬದುಕು
  • ಅಲ್ಪ ವೇತನಕ್ಕೆ ದುಡಿಯುತ್ತಿರುವ ನೌಕರರು
  • ಕಷ್ಟ ಪರಿಹಾರ ಭತ್ಯೆಯೂ ಮರೀಚಿಕೆ
ಮಡಿಕೇರಿ:
ಅರಣ್ಯ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರಾಗಿದ್ದುಕೊಂಡು ಅಪಾಯಕಾರಿ ಕೆಲಸಗಳಲ್ಲಿ ಮಹತ್ವದ ಪಾತ್ರವಹಿಸುವ ಕ್ಷಿಪ್ರ ಕಾರ್ಯಪಡೆ ತಂಡ ಮತ್ತು ಆನೆ ಕಾರ್ಯಾಚರಣೆ ಪಡೆ ಸದಸ್ಯರು ಸೇರಿದಂತೆ ತಳಮಟ್ಟದ ಸಿಬ್ಬಂದಿ ಸಂಕಷ್ಟದ ಬದುಕು ನಡೆಸುತ್ತಿದ್ದಾರೆ. ಅತ್ಯಲ್ಪ ವೇತನಕ್ಕೆ ದುಡಿಯುತ್ತಿರುವ ಇವರಿಗೆ ಸರ್ಕಾರ ಘೋಷಿಸಿರುವ ಹೆಚ್ಚುವರಿ ಕಷ್ಟ ಪರಿಹಾರ ಭತ್ಯೆ ಇನ್ನೂ ಗಗನ ಕುಸುಮವಾಗಿದೆ. ಆಹಾರ ಭತ್ಯೆ ಬದಲು ನೇರವಾಗಿ ರೇಷನ್ ಕೊಡಲಾಗುತ್ತಿದ್ದು ಇದನ್ನು ಪ್ರಾಣಿಗಳು ಕೂಡ ಸೇವಿಸಲಾರದ ಸ್ಥಿತಿಯಲ್ಲಿ ಇರುತ್ತದೆ ಎನ್ನುವ ಆರೋಪ ಕೇಳಿಬರುತ್ತಿದೆ.
ಕ್ಷಿಪ್ರ ಕಾರ್ಯಪಡೆ ತಂಡ (ಆರ್‌ಆರ್‌ಟಿ), ಆನೆ ಕಾರ್ಯಾಚರಣೆ ಪಡೆ (ಇಟಿಎಫ್), ಚಿರತೆ ಕಾರ್ಯಾಚರಣೆ ಪಡೆ (ಎಲ್‌ಟಿಎಫ್), ಹುಲಿ ಕಾರ್ಯಾಚರಣೆ ಪಡೆ (ಟಿಟಿಎಫ್), ಕಳ್ಳಬೇಟೆ ತಡೆ ಶಿಬಿರ (ಎಪಿಸಿ), ಕಾಳ್ಗಿಚ್ಚು ತಡೆ ಶಿಬಿರ (ಎಫ್‌ಪಿಸಿ)...ಇವೆಲ್ಲಾ ಅರಣ್ಯ ಇಲಾಖೆಯಲ್ಲಿ ತಳಮಟ್ಟದಲ್ಲಿ ಕಾರ್ಯಾಚರಿಸುವ ತಂಡಗಳು. ಅರಣ್ಯ ಮತ್ತು ವನ್ಯ ಸಂಪತ್ತು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಇವರು ಮಾಡುವ ಕೆಲಸ ತೀವ್ರ ಅಪಾಯಕಾರಿ ಆಗಿರುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಹಾನಿ ಸಂಭವಿಸಬಹುದು. ಶಾಶ್ವತ ಅಂಗವಿಕಲರೂ ಆಗಬಹುದು. ಆದರೆ ಇರ‍್ಯಾರೂ ಇಲಾಖೆಯ ಕಾಯಂ ನೌಕರರಲ್ಲ. ಉಪ ವಲಯಾರಣ್ಯಾಧಿಕಾರಿ ಅಥವಾ ಅರಣ್ಯ ರಕ್ಷಕ ದರ್ಜೆ ಅಧಿಕಾರಿಗಳ ಜತೆ ಕೆಲಸ ಮಾಡುವ ಈ ಸಿಬ್ಬಂದಿ ಬಗ್ಗೆ ಹಿರಿಯ ಅಧಿಕಾರಿಗಳು ಯಾರು ಕೂಡ ಕಾಳಜಿ ತೋರಿಸುವುದೂ ಇಲ್ಲ.
ಆನೆ, ಹುಲಿ, ಚಿರತೆಯಂಥ ಅಪಾಯಕಾರಿ ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ನುಗ್ಗಿದಾಗ ಮುಂದೆ ನಿಂತು ಕಾಯಾಚರಣೆಗೆ ಇಳಿಯುವುದು ಇದೇ ತಂಡ. ಕಾಳ್ಗಿಚ್ಚು ಕಾಣಿಸಿಕೊಳ್ಳದಂತೆ ಮುಂಜಾಗ್ರತೆ ವಹಿಸುವುದು ಮಾತ್ರವಲ್ಲದೆ ಬೆಂಕಿ ನಂದಿಸುವ ಸಂದರ್ಭ ಅಗ್ನಿಯೊಂದಿಗೆ ಸೆಣೆಸಾಡುವವರು ಕೂಡ ಇವರೇ. ಅಕ್ರಮ ಮರಸಾಗಾಟ, ಕಾಡು ಪ್ರಾಣಿಗಳ ಬೇಟೆ ಸಂದರ್ಭ ದಂಧೆಕೋರರ ಎದುರು ಮುಖಾಮುಖಿ ಆಗುವುದು ಇದೇ ತಂಡದ ಸದಸ್ಯರು. ಜೋರು ಮಳೆ, ಗಾಳಿಗೆ ರಸ್ತೆಗೆ ಅಡ್ಡಲಾಗಿ ಮರ ಬಿದ್ದರೆ ಯಂತ್ರಗಳನ್ನು ಹೊತ್ತುಕೊಂಡು ಇದೇ ತಂಡ ಸ್ಥಳಕ್ಕೆ ತಲುಪಿ ಕಾರ್ಯಾಚರಣೆಗೆ ಇಳಿಯಬೇಕಾಗುತ್ತದೆ. ಮೇಲಾಧಿಕಾರಿಗಳು ವಾಹನದಲ್ಲಿ ಅಥವಾ ಕಚೇರಿಯಲ್ಲಿ ಕುಳಿತು ನಿರ್ದೇಶನಗಳನ್ನು ಕೊಡುತ್ತಿರುತ್ತಾರೆ. ಅದನ್ನು ಇವರು ಚಾಚೂ ತಪ್ಪದೇ ಪಾಲಿಸಬೇಕಾಗುತ್ತದೆ.
ಆರ್‌ಆರ್‌ಟಿ, ಇಟಿಎಫ್, ಎಲ್‌ಟಿಎಫ್, ಟಿಟಿಎಫ್, ಎಪಿಸಿ, ಎಫ್‌ಪಿಸಿ ಎಂದು ಅರಣ್ಯ ಇಲಾಖೆಯಲ್ಲಿ ಬೇರೆ ಬೇರೆ ಹೆಸರಿನ ತಂಡಗಳು ಇದ್ದರೂ ಹೆಚ್ಚಿನ ಅರಣ್ಯ ವಿಭಾಗಗಳಲ್ಲಿ ಒಂದು ತಂಡದ ಸದಸ್ಯರೇ ಬಹುತೇಕ ಎಲ್ಲಾ ತಂಡಗಳಲ್ಲೂ ಇರುತ್ತಾರೆ. ಆದರೆ ವೇತನ ಮಾತ್ರ ಯಾವುದಾದರೂ ಒಂದು ತಂಡದ್ದು ಸಿಗುತ್ತದೆ. ಉಳಿದ ತಂಡಗಳಿಗೆ ಬರುವ ಅನುದಾನ ಎಲ್ಲಿ ಹೋಗುತ್ತದೆ ಎನ್ನುವ ಪ್ರಶ್ನೆಗಳ ಮಧ್ಯೆಯೇ ಇಲ್ಲಿರುವ ಹೊರಗುತ್ತಿಗೆ ನೌಕರರಿಗೆ ಸಿಗುವ ಮಾಸಿಕ ಅತ್ಯಲ್ಪ ವೇತನಕ್ಕೂ ಹಿರಿಯ ಅಧಿಕಾರಿಗಳ ಹೆಸರು ಹೇಳಿಕೊಂಡು ಕಮಿಷನ್ ರೂಪದಲ್ಲಿ ಕನ್ನ ಹಾಕುವ ಅಧಿಕಾರಿಗಳೂ ಇರುವ ಬಗ್ಗೆ ಆರೋಪಗಳಿವೆ.
ಅಪಾಯಕಾರಿ ವಾತಾವರಣದಲ್ಲಿ ಕೆಲಸ ಮಾಡುವ ಈ ನೌಕರರ ಸಂಕಷ್ಟ ಗಮನಿಸಿ ಸರ್ಕಾರ ಇವರಿಗೆ ತಲಾ 2 ಸಾವಿರ ರೂ. ಕಷ್ಟ ಪರಿಹಾರ ಭತ್ಯೆಯನ್ನೂ ಮಂಜೂರು ಮಾಡಿದೆ. ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಸರಣ್ಯ ಸಂರಕ್ಷಣಾಧಿಕಾರಿಗಳು ಈ ಸಂಬAಧ 2025ರ ಮಾ.1ರಂದು ಆದೇಶವನ್ನೂ ಹೊರಡಿಸಿದ್ದಾರೆ. ಆದರೆ ಕೊಡಗಿನಲ್ಲಿ ಕೆಲವೊಂದು ಅರಣ್ಯ ವಲಯ ವ್ಯಾಪ್ತಿಯ ನೌಕರರಿಗೆ ಮಾತ್ರ ಈ ಭತ್ಯೆ ಕೈ ಸೇರಿದೆ. ಉಳಿದವರು ಪ್ರಶ್ನಿಸಿದರೆ ಸರ್ಕಾರದಿಂದ ಅನುದಾನ ಬಂತ ನಂತರ ನಿಮಗೆಲ್ಲಾ ಕೊಡಲಾಗುವುದು ಎನ್ನುವ ಉತ್ತರ ಮೇಲಾಧಿಕಾರಿಗಳಿಂದ ಸಿಗುತ್ತಿದೆ. ಆದರೆ ಸರ್ಕಾರದ ಆದೇಶದ ಪ್ರಕಾರ 2024ರ ಜು.23ರಿಂದಲೇ ಪೂರ್ವಾನ್ವಯ ಆಗುವಂತೆ ಮಡಿಕೇರಿ ವನ್ಯಜೀವಿ ವಿಭಾಗದ 100 ನೌಕರರಿಗೆ ಬಿಡುಗಡೆ ಆದ 16.50 ಲಕ್ಷ ಮತ್ತು ವಿರಾಜಪೇಟೆ ವಿಭಾಗದ 60 ನೌಕರರಿಗೆ ಬಿಡುಗಡೆ ಆದ 9.90 ಲಕ್ಷ ರೂ. ಏನಾಯಿತು ಎನ್ನುವುದು ಈ ನೌಕರರ ಪ್ರಶ್ನೆ.
ಕ್ಷಿಪ್ರ ಕಾರ್ಯಪಡೆ ತಂಡ, ಆನೆ ಕಾರ್ಯಪಡೆ ತಂಡ ಹಾಗೂ ಆನೆ ಹಿಮ್ಮೆಟ್ಟಿಸುವ ತಂಡಗಳಲ್ಲಿ ಕಾವಲುಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಅವರವರು ಕೆಲಸ ಮಾಡುವ ಶಿಬಿರಗಳಿಗೆ ಆಹಾರ ಸಾಮಗ್ರಿಗಳನ್ನು ಇಲಾಖೆಯಿಂದ ಪೂರೈಸಲಾಗುತ್ತದೆ. ಈ ಮೊದಲು ಆಹಾರ ಸಾಮಗ್ರಿ ಬದಲು ತಲಾ 2 ಸಾವಿರ ರೂ. ಆಹಾರ ಭತ್ಯೆಯನ್ನು ನೌಕರರಿಗೆ ಕೊಡಲಾಗುತ್ತಿತ್ತು. ವಿರಾಜಪೇಟೆ ವಿಭಾಗದಲ್ಲಿ ಇದೇ ವ್ಯವಸ್ಥೆ ಈಗಲೂ ಮುಂದುವರಿದಿದೆ. ಆದರೆ ಮಡಿಕೇರಿ ವಿಭಾಗದಲ್ಲಿ ಆಹಾರ ಸಾಮಗ್ರಿಗಳನ್ನು ಗುತ್ತಿಗೆದಾರರ ಮುಖಾಂತರ ಪೂರೈಕೆ ಮಾಡಲಾಗುತ್ತಿದೆ. ಈ ಆಹಾರ ಪದಾರ್ಥಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು ಅಡುಗೆ ಮಾಡಲು ಸಾಧ್ಯವಾಗದ ರೀತಿಯಲ್ಲಿ ಇರುತ್ತದೆ ಎನ್ನುವುದು ನೌಕರರ ಆರೋಪ.
"

ಅರಣ್ಯ ಇಲಾಖೆಯ ಅತ್ಯಂತ ತಳಮಟ್ಟದಲ್ಲಿ ನಾವುಗಳು ಕೆಲಸ ಮಾಡಿದರೂ ನಮ್ಮ ಕೆಲಸ ಹೆಚ್ಚು ಜವಾಬ್ದಾರಿಯುತ ಮತ್ತು ಅಪಾಯಕಾರಿ ಆಗಿದೆ. ನಮ್ಮನ್ನು ಇಲಾಖೆ ಕಾಯಂ ಮಾಡುವ ಲಕ್ಷಣಗಳು ಕಾಣುತ್ತಿಲ್ಲ. ಸರ್ಕಾರದಿಂದ ಬರುವ ಸವಲತ್ತುಗಳನ್ನೂ ಸರಿಯಾಗಿ ಕೊಡುತ್ತಿಲ್ಲ. ಸರ್ಕಾರ ಕಷ್ಟ ಪರಿಹಾರ ಭತ್ಯೆ ಮಂಜೂರು ಮಾಡಿದರೂ ಅದು ನಮ್ಮ ಕೈ ಸೇರಿಲ್ಲ. ಆಹಾರ ಭತ್ಯೆ ಬದಲು ಕೊಡುತ್ತಿರುವ ಆಹಾರ ಸಾಮಗ್ರಿಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ. ಹಿರಿಯ ಅಧಿಕಾರಿಗಳನ್ನು ಕೆಲವು ಕೆಳ ಹಂತದ ಅಧಿಕಾರಿಗಳು ತಮ್ಮ ಲಾಭಕ್ಕೋಸ್ಕರ ದಿಕ್ಕುತಪ್ಪಿಸುತ್ತಿರುವುದರಿಂದ ಈ ಪರಿಸ್ಥಿತಿ ಉಂಟಾಗಿದೆ.

"

ಕ್ಷಿಪ್ರ ಕಾರ್ಯಪಡೆ ತಂಡ, ಆನೆ ಕಾರ್ಯಪಡೆ ತಂಡ ಹಾಗೂ ಆನೆ ಹಿಮ್ಮೆಟ್ಟಿಸುವ ತಂಡಗಳಲ್ಲಿ ಕಾವಲುಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವವರು ಒಂದು ತಂಡವಾಗಿ ಕೆಲಸ ಮಾಡಬೇಕು. ಹಾಗಾಗಿ ಅವರು ಶಿಬಿರದಲ್ಲೇ ಇರಬೇಕಿರುವುದರಿಂದ ಅಡುಗೆ ಮಾಡಿಕೊಳ್ಳಲು ಆಹಾರ ಪದಾರ್ಥ ಕೊಡಲಾಗುತ್ತದೆ. ಆಹಾರ ಭತ್ಯೆ ಕೊಟ್ಟರೆ ಅವರು ಶಿಬಿರದಲ್ಲಿ ಇರುವುದಿಲ್ಲ. ಪೂರೈಕೆ ಆದ ಆಹಾರ ಕಳಪೆ ಎಂದಾದರೆ ಗುತ್ತಿಗೆದಾರನ ಒಪ್ಪಂದ ರದ್ದು ಮಾಡಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅನುದಾನ ಬಂದ ಕೂಡಲೇ ಕಷ್ಟ ಪರಿಹಾರ ಭತ್ಯೆ ಕೊಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net