ರಾಮಕೃಷ್ಣ ಕೊಡುಗೆ ಚಿರಸ್ಥಾಯಿಯಾಗಿಸಬೇಕು

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ತಾಲೂಕು ಕ.ಸಾ.ಪ. ವತಿಯಿಂದ ಇಲ್ಲಿನ ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ತ್ರಿಭಾಷಾ ಸಾಹಿತಿ ದಿ.ವಿ.ಎಸ್. ರಾಮಕೃಷ್ಣ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಉದ್ಘಾಟಿಸಿದರು. ಆರ್.ಕೆ. ನಾಗೇಂದ್ರ ಬಾಬು, ಕೆ.ಎಸ್. ನಾಗೇಶ್, ವಿ.ಆರ್. ದಿನೇಶ್, ಲೀಲಾಕುಮಾರಿ ತೊಡಿಕಾನ ಮತ್ತಿತರರು ಇದ್ದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ತಾಲೂಕು ಕ.ಸಾ.ಪ. ವತಿಯಿಂದ ಇಲ್ಲಿನ ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ತ್ರಿಭಾಷಾ ಸಾಹಿತಿ ದಿ.ವಿ.ಎಸ್. ರಾಮಕೃಷ್ಣ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಉದ್ಘಾಟಿಸಿದರು. ಆರ್.ಕೆ. ನಾಗೇಂದ್ರ ಬಾಬು, ಕೆ.ಎಸ್. ನಾಗೇಶ್, ವಿ.ಆರ್. ದಿನೇಶ್, ಲೀಲಾಕುಮಾರಿ ತೊಡಿಕಾನ ಮತ್ತಿತರರು ಇದ್ದರು.
Published on
ಕುಶಾಲನಗರ:
ಕೊಡಗಿನ ತ್ರಿಭಾಷಾ ಸಾಹಿತಿ ವಿ.ಎಸ್. ರಾಮಕೃಷ್ಣ ಅವರ ಸಾಹಿತ್ಯಿಕ ಕೊಡುಗೆಯನ್ನು ಚಿರಸ್ಥಾಯಿಯಾಗಿಸಲು ಕುಶಾಲನಗರ ಪಟ್ಟಣದ ಗುಂಡೂರಾವ್ ಬಡಾವಣೆಯಲ್ಲಿ ಅವರ ಹೆಸರಿನಲ್ಲಿ ಸುಸಜ್ಜಿತ ಸಾರ್ವಜನಿಕ ಗ್ರಂಥಾಲಯ ಸ್ಥಾಪನೆ ಆಗಬೇಕು ಎಂದು ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರಬಾಬು ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ತಾಲೂಕು ಕ.ಸಾ.ಪ. ವತಿಯಿಂದ ಇಲ್ಲಿನ ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ತ್ರಿಭಾಷಾ ಸಾಹಿತಿ ದಿ.ವಿ.ಎಸ್. ರಾಮಕೃಷ್ಣ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವಿ.ಎಸ್. ರಾಮಕೃಷ್ಣ ಅವರ ಸಾಹಿತ್ಯಿಕ ಸಾಧನೆಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಗ್ರಂಥಾಲಯ ಸ್ಥಾಪನೆಯ ಹೊಣೆಗಾರಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ವಹಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗ ಪಡೆದುಕೊಂಡು, ಸಾಹಿತ್ಯ ಕೃತಿಗಳ ಅಧ್ಯಯನದ ಮೂಲಕ ಸೃಜನಶೀಲತೆ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ವಿ.ಎಸ್. ರಾಮಕೃಷ್ಣ ಅವರ ಬದುಕು-ಬರಹ ಕುರಿತು ಪ್ರಧಾನ ಉಪನ್ಯಾಸ ನೀಡಿದ ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜೀವನ ದರ್ಶನ ಕುರಿತು ಸ್ವತಂತ್ರ ಭಾನು ಎಂಬ ಕಾವ್ಯವನ್ನು ಭೋಗ ಷಟ್ಪದಿಯಲ್ಲಿ ರಚಿಸುವ ಮೂಲಕ ರಾಮಕೃಷ್ಣ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಆಯಾಮ ನೀಡಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ಕೊಡಗಿನ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯಕ್ಕೆ ಕೊಡುಗೆ ನೀಡಿರುವ ಅವರು, 1994ರಲ್ಲಿ ಕುಶಾಲನಗರದಲ್ಲಿ ನಡೆದ 4ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಅವರ ಸಮಗ್ರ ಸಾಹಿತ್ಯವನ್ನು ಗ್ರಂಥ ರೂಪದಲ್ಲಿ ಹೊರತರುವ ಸಂಘಟಿತ ಪ್ರಯತ್ನ ಕ.ಸಾ.ಪ.ದಿಂದ ನಡೆಯಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕ.ಸಾ.ಪ. ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, ನಾಗರಿಕರ ಪರವಾಗಿ ಸ್ಥಳೀಯ ಪುರಸಭೆಯೊಂದಿಗೆ ವ್ಯವಹರಿಸಿ ಸಾಹಿತಿಯ ಹೆಸರಿನಲ್ಲಿ ಗ್ರಂಥಾಲಯ ಆರಂಭಿಸಲು ಸೂಕ್ತ ಜಾಗದ ವ್ಯವಸ್ಥೆ ಮಾಡಲಾಗುವುದು. ಕುಶಾಲನಗರದ ಕಲಾಭವನಕ್ಕೆ ತೆರಳುವ ರಸ್ತೆಗೆ ವಿ.ಎಸ್. ರಾಮಕೃಷ್ಣ ಅವರ ಹೆಸರಿಡಲು ಈಗಾಗಲೇ ಪುರಸಭೆಗೆ ಮನವಿ ಸಲ್ಲಿಸಲಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ರುದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಹಿತ್ಯಾಭಿರುಚಿಯಿಂದ ಜ್ಞಾನ ವೃದ್ಧಿ ಹಾಗೂ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ. ದಿನೇಶ್, ಸಾಹಿತಿ ವಿ.ಎಸ್. ರಾಮಕೃಷ್ಣ ಅವರ ಪುತ್ರ ವಿ.ಆರ್. ದಿನೇಶ್, ಕ.ಸಾ.ಪ. ಸದಸ್ಯ ಎಂ.ಎನ್. ಕಾಳಪ್ಪ, ಕೋಶಾಧಿಕಾರಿ ಕೆ.ವಿ. ಉಮೇಶ್, ಎಸ್‌ಬಿಐ ಬ್ಯಾಂಕ್ ನಿವೃತ್ತ ಹಿರಿಯ ವ್ಯವಸ್ಥಾಪಕಿ ಸೂದನ ರತ್ನಾವತಿ, ಸಾಹಿತಿ ಲೀಲಾಕುಮಾರಿ ತೊಡಿಕಾನ, ಉಪನ್ಯಾಸಕಿ ಸುಮಯ ತಬಸಮ್, ಬಿ.ಜಿ.ಸ್ಮಿತಾ, ಎ. ದರ್ಶಿನಿ ಇದ್ದರು.
ಇದೇ ವೇಳೆ ಉಪನ್ಯಾಸ ನೀಡಿದ ಟಿ.ಜಿ. ಪ್ರೇಮಕುಮಾರ್ ಹಾಗೂ ಆರ್.ಕೆ. ನಾಗೇಂದ್ರಬಾಬು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net