ಸುಂಟಿಕೊಪ್ಪ: ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಸಮಿತಿ ವತಿಯಿಂದ ಸುಂಟಿಕೊಪ್ಪದ ಶ್ರೀ ಕೋದಂಡರಾಮ ದೇವಾಲಯದಲ್ಲಿ ಗುರುವಾರ ಶ್ರದ್ಧಾಭಕ್ತಿಯಿಂದ ರಾಮನವಮಿಯನ್ನು ಆಚರಿಸಲಾಯಿತು.
ಶ್ರೀ ಕೋದಂಡ ರಾಮ ಮಂದಿರ ಮತ್ತು ರಾಜ್ಯ ಹೆದ್ದಾರಿಯಲ್ಲಿ ಕೇಸರಿ ಬಣ್ಣದ ಬಂಟಿಂಗ್ಸ್, ಶ್ರೀರಾಮನ ಪ್ಲೆಕ್ಸ್, ವಿದ್ಯುತ್ ದೀಪ, ಬಣ್ಣ, ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಶ್ರೀರಾಮ, ಸೀತೆ, ಲಕ್ಷ್ಮಣ, ಆಂಜನೇಯ ಸ್ವಾಮಿಗೆ ಬೆಳ್ಳಿಯ ಕವಚವನ್ನು ಅಳವಡಿಸಿ ವಿವಿಧ ಹೂಗಳಿಂದ ಅಲಂಕರಿಸಿ ಪೂಜಾ ಕೈಂಕರ್ಯವನ್ನು ದೇವಾಲಯದ ಮುಖ್ಯ ಅರ್ಚಕ ಜಯಂತ್ ಭಟ್ ನೇತೃತ್ವದಲ್ಲಿ ನೆರವೇರಿಸಲಾಯಿತು.
ನಂತರ ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕದ ಬಳಿಗೆ ರಾಮತಾರಕ ಹೋಮವನ್ನು ಪ್ರಧಾನ ಅರ್ಚಕ ಹಾ.ಮಾ.ಗಣೇಶ್ ಶರ್ಮಾ ನೇತೃತ್ವದಲ್ಲಿ ಜಯಂತ್ ಭಟ್, ನರಸಿಂಹ ಭಟ್, ಪುರುಷೋತ್ತಮ ಭಟ್, ಮನೋಜ್ ಭಟ್ ಇತರರು ನೆರವೇರಿಸಿದರು.
ಮಧ್ಯಾಹ್ನ ವಿಶೇಷ ಮಂಗಳಾರತಿ, ಮಹಾಆರತಿ, ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ನೆರೆದಿದ್ದ ಭಕ್ತರಿಗೆ ಸಮಿತಿಯಿಂದ ಅನ್ನಸಂತರ್ಪಣೆ ಮಾಡಲಾಯಿತು. ಸುಂಟಿಕೊಪ್ಪ ಸೇರಿದಂತೆ ಸುತ್ತಲಿನ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದರು.
ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಘ್ನೇಶ್, ನಿಖಿಲ್, ಪಿ.ಆರ್.ಸುನಿಲ್ ಕುಮಾರ್, ಧನುಕಾವೇರಪ್ಪ, ಜೆ.ಎನ್.ಚಂದ್ರಶೇಖರ್, ಸದಾಶಿವ ರೈ, ಸುರೇಶ್ ಗೋಪಿ, ಬಿ.ಕೆ.ಪ್ರಶಾಂತ್, ಎಂ.ಎಸ್.ಸುನಿಲ್, ಮಹೇಂದ್ರ, ಲೀಲಾಮೇದಪ್ಪ, ಪವಿತ್ರಾ ಶೆಟ್ಟಿ ಇತರರು ಇದ್ದರು.