ಮಲೆನಾಡಿನಲ್ಲೂ ಮಳೆಯ ಕೊರತೆ

ಸೋಮವಾರಪೇಟೆ ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಭತ್ತದ ಕೃಷಿ ಕೆಲಸಕ್ಕೆ ಸಮಸ್ಯೆ ಆಗಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಭತ್ತದ ಕೃಷಿ ಕೆಲಸಕ್ಕೆ ಸಮಸ್ಯೆ ಆಗಿದೆ.
Published on
ಮಡಿಕೇರಿ:
ಸರ್ಕಾರ ಪ್ರಕಟಿಸಿರುವ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಜಿಲ್ಲೆಯ ಸೋಮವಾರಪೇಟೆ ತಾಲೂಕು ಕೂಡ ಸ್ಥಾನ ಪಡೆದುಕೊಂಡಿದೆ. ಸೋಮವಾರಪೇಟೆ ತಾಲೂಕುನ್ನು ಸರ್ಕಾರ ಸಾಧಾರಣ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ತಾಲೂಕಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 52ಕ್ಕೂ ಅಧಿಕ ಪ್ರಮಾಣದಲ್ಲಿ ಮಳೆಯ ಕೊರತೆ ಕಾಣಿಸಿಕೊಂಡಿದೆ. ಅದರಲ್ಲೂ ಹಾಸನ ಜಿಲ್ಲೆಗೆ ಹೊಂದಿಕೊAಡಿರುವ ಪ್ರದೇಶ ಹೆಚ್ಚು ಬಾಧಿತವಾಗಿದೆ.
ಮಲೆನಾಡಿನ ಮಡಿಲು, ಸಮೃದ್ಧ ಅರಣ್ಯ ಹಾಗೂ ನಿರಂತರ ಮಳೆಗೆ ಹೆಸರಾಗಿದ್ದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಈ ವರ್ಷ ಸಾಧಾರಣ ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆಯಾಗಿರುವುದು ಸ್ಥಳೀಯರಲ್ಲಿ ಹಾಗೂ ಪರಿಸರ ಪ್ರೇಮಿಗಳಲ್ಲಿ ತೀವ್ರ ಕಳವಳ ಮೂಡಿಸಿದೆ. ಹಸಿರು ಕಾನನದ ಸೊಬಗಿನ ಈ ತಾಲೂಕಿನಲ್ಲಿ ಉಂಟಾಗಿರುವ ಬದಲಾವಣೆ ಹಲವು ರೀತಿಯ ಚರ್ಚೆಗಳನ್ನು ಹುಟ್ಟುಹಾಕಿದೆ.
ಮುಂಗಾರು ಮಳೆಯ ವಾರ್ಷಿಕ ಸರಾಸರಿ ಪ್ರಮಾಣ ಗಣನೀಯವಾಗಿ ಕುಸಿದಿದೆ. ನಿಯಮಿತವಾಗಿ ಬೀಳಬೇಕಾದ ಮಳೆ ಸುರಿಯದೆ, ಸುರಿದಾಗ ಅತಿವೃಷ್ಟಿ ಅಥವಾ ಸುದೀರ್ಘ ಒಣ ಹವೆ ಕಾಣಿಸಿಕೊಳ್ಳುತ್ತಿದೆ. ಈ ವರ್ಷ ಜನವರಿಯಿಂದ ಇಲ್ಲಿಯ ತನಕ 1524.32 ಮಿಮೀ ಮಾತ್ರ ಮಳೆಯಾಗಿದೆ. ಕಳೆದ ವರ್ಷ ಈ ವೇಳೆಗೆ 2860.02 ಮಿಮೀನಷ್ಟು ಮಳೆ ಬಂದಿತ್ತು. ಮಳೆಯ ಈ ಕೊರತೆ ತಾಲೂಕಿನಲ್ಲಿ ವಿವಿಧ ರೀತಿಯ ಪರಿಣಾಮಗಳಿಗೆ ಕಾರಣವಾಗಿರುವ ಆತಂಕ ಸ್ಥಳೀಯರಲ್ಲಿ ಕಾಣಿಸಿಕೊಂಡಿದೆ.
ಜಾಗತಿಕ ತಾಪಮಾನ ಏರಿಕೆ ಕೊಡಗು ಮತ್ತು ಸೋಮವಾರಪೇಟೆ ತಾಲೂಕಿನ ಮೇಲೂ ಪರಿಣಾಮ ಬೀರಿದೆ. ಕಾಫಿ ತೋಟಗಳು, ರೆಸಾರ್ಟ್ಗಳ ನಿರ್ಮಾಣ, ಹೋಮ್‌ಸ್ಟೇ ಹಾಗೂ ವಾಣಿಜ್ಯ ಉದ್ದೇಶಗಳಿಗಾಗಿ ವ್ಯಾಪಕವಾಗಿ ಮರ ಕತ್ತರಿಸಿರುವುದು ಸ್ಥಳೀಯ ಮಳೆ ಚಕ್ರದ ಮೇಲೆ ದುಷ್ಪರಿಣಾಮ ಬೀರಿರುವ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಮೇಲ್ಮೈ ನೀರು ವೇಗವಾಗಿ ಹರಿದುಹೋಗುತ್ತಿರುವುದು ಮತ್ತು ಬೋರ್‌ವೆಲ್‌ಗಳ ಸತತ ಬಳಕೆಯಿಂದಾಗಿ ಅಂತರ್ಜಲ ಮಟ್ಟ ಅಪಾಯಕಾರಿ ಹಂತಕ್ಕೆ ತಲುಪಿದೆ.
ನದಿಗಳು, ಕಾವೇರಿಯ ಉಪನದಿಗಳು, ನೈಸರ್ಗಿಕ ತೊರೆ ಹಾಗೂ ಬಾವಿಗಳಲ್ಲಿ ಸಾಮಾನ್ಯ ದಿನಗಳಂತೆ ನೀರಿನ ಪ್ರಮಾಣ ಇಲ್ಲ. ಇದು ಭವಿಷ್ಯದಲ್ಲಿ ಕುಡಿಯುವ ನೀರಿನ ಮೇಲೂ ಪರಿಣಾಮ ಬೀರುವ ಆತಂಕ ಉಂಟಾಗುವAತೆ ಮಾಡಿದೆ. ಕೃಷಿ ಮತ್ತು ಪ್ಲಾಂಟೇಶನ್ ವಲಯ ಕೂಡ ಮಳೆ ಕೊರತೆಯ ಸಂಕಷ್ಟ ಎದುರಿಸುತ್ತಿವೆ. ಕಾಫಿ ಬೆಳೆ ಹೂ ಅರಳುವ ಮತ್ತು ಕಾಯಿ ಕಟ್ಟುವ ಹಂತದಲ್ಲಿ ಮಳೆಯಿಲ್ಲದೆ ಇಳುವರಿ ಶೇ. 30 ರಿಂದ 40 ರಷ್ಟು ಕುಸಿತ ಕಾಣುವ ಸಾಧ್ಯತೆ ಇದೆ. ಸುದೀರ್ಘ ಒಣ ಹವೆಯಿಂದ ಕಾಳು ಮೆಣಸು ಬಳ್ಳಿ, ಏಲಕ್ಕಿ ಗಿಡಗಳು ಒಣಗುತ್ತಿವೆ. ರೋಗ ಮತ್ತು ಕೀಟಬಾಧೆ ಹೆಚ್ಚಾಗಿದೆ. ಭತ್ತದ ಗದ್ದೆಗಳಲ್ಲಿ ನೀರಿಲ್ಲದೆ ಸಾಂಪ್ರದಾಯಿಕ ಭತ್ತದ ಬೆಳೆಯ ವಿಸ್ತೀರ್ಣ ಕಡಿಮೆ ಆಗಿರುವುದು ಪ್ರಜ್ಞಾವಂತರನ್ನು ಚಿಂತನೆಗೆ ದೂಡಿದೆ.
ಸಾಲ ಮಾಡಿ ಬೆಳೆ ಬೆಳೆದ ಸಣ್ಣ ಮತ್ತು ಅತಿ ಸಣ್ಣ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಡಿನಲ್ಲಿ ನೀರು ಮತ್ತು ಮೇವಿನ ಅಭಾವದಿಂದ ಆನೆ, ಕಾಡುಕೋಣಗಳು ನಾಡಿಗೆ ಲಗ್ಗೆ ಇಡುತ್ತಿದ್ದು, ಬೆಳೆ ಹಾನಿ ಹಾಗೂ ಮಾನವರ ಮೇಲಿನ ದಾಳಿ ಹೆಚ್ಚುತ್ತಿವೆ. ತೋಟಗಳಲ್ಲಿ ಕೆಲಸ ಕಡಿಮೆಯಾಗುತ್ತಿರುವುದರಿಂದ ದಿನಗೂಲಿ ಕಾರ್ಮಿಕರ ಜೀವನೋಪಾಯಕ್ಕೆ ಕುತ್ತು ಬಂದಿದೆ.
ಇದೀಗ ಸರ್ಕಾರ ಸೋಮವಾರಪೇಟೆ ತಾಲೂಕನ್ನು ಸಾಧಾರಣ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿರುವುದರಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ಹಲವು ರೀತಿಯ ರಕ್ಷಣೆ ಒದಗಿಬರುವ ನಿರೀಕ್ಷೆ ಇದೆ. ಶೇ. 33ಕ್ಕಿಂತ ಹೆಚ್ಚು ಬೆಳೆ ನಷ್ಟ ಅನುಭವಿಸಿದ ರೈತರಿಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಿಯಮಾವಳಿಯಂತೆ ಪರಿಹಾರ ಸಿಗಲಿದ್ದು, ಬೆಳೆ ವಿಮೆ ಪಾವತಿಯೂ ಶೀಘ್ರವಾಗಿ ದೊರೆಯಲಿದೆ. ಕೃಷಿ, ತೋಟಗಾರಿಕೆ ಸಾಲಗಳ ಕಂತು ಮರುಪಾವತಿಯನ್ನು 1 ವರ್ಷದವರೆಗೆ ಅಮಾನತಿನಲ್ಲಿಡಲಾಗುತ್ತದೆ. ಅಲ್ಪಾವಧಿ ಸಾಲಗಳನ್ನು ಮಧ್ಯಮ ಅಥವಾ ದೀರ್ಘಾವಧಿ ಸಾಲಗಳಾಗಿ ಪರಿವರ್ತಿಸಲಾಗುತ್ತದೆ. ಬಲಾತ್ಕಾರದ ಜಪ್ತಿಯನ್ನು ನಿಷೇಧಿಸಲಾಗುತ್ತದೆ.
ನೀರಿನ ಅಭಾವವಿರುವ ಗ್ರಾಮಗಳಿಗೆ ಟ್ಯಾಂಕರ್ ಅಥವಾ ಖಾಸಗಿ ಕೊಳವೆಬಾವಿ ಬಾಡಿಗೆಗೆ ಪಡೆದು ನೀರು ಪೂರೈಸಲು ವಿಶೇಷ ಅನುದಾನ ಬಿಡುಗಡೆಯಾಗುತ್ತದೆ. ವಿಬಿ ಜಿ ರಾಮ್ ಜಿಯಂಥ ಗ್ರಾಮೀಣ ಭಾಗದ ಉದ್ಯೋಗ ಖಾತರಿ ದಿನಗಳನ್ನು ಹೆಚ್ಚಿಸಲಾಗುತ್ತದೆ. ಜಾನುವಾರುಗಳ ರಕ್ಷಣೆಗೆ ಮೇವು ಬ್ಯಾಂಕ್ ಸ್ಥಾಪನೆ ಅಥವಾ ತಾತ್ಕಾಲಿಕ ಗೋಶಾಲೆಗಳನ್ನು ತೆರೆಯಲಾಗುತ್ತದೆ. ಭೂ ಕಂದಾಯ ಪಾವತಿಯಿಂದ ರೈತರಿಗೆ ವಿನಾಯಿತಿ ಸಿಗಲಿದ್ದು, ರೈತರ ಮಕ್ಕಳಿಗೆ ಶಾಲಾ-ಕಾಲೇಜು ಪರೀಕ್ಷಾ ಶುಲ್ಕದಲ್ಲಿ ವಿನಾಯಿತಿ ಅಥವಾ ಮನ್ನಾ ಸೌಲಭ್ಯ ದೊರೆಯಲಿದೆ.
"

ಕೇಂದ್ರ ಸರ್ಕಾರದ ಬರಪೀಡಿರ ಪ್ರದೇಶಗಳ ಮಾನದಂಡ -2020 ರ ಪ್ರಕಾರ ಬರಪೀಡಿತ ತಾಲೂಕು ಎಂದು ಘೋಷಿಸಲು ಹಲವು ಟ್ರಿಗರ್ ಪಾಯಿಂಟುಗಳ ಅವಶ್ಯವಿದೆ. ಟ್ರಿಗರ್ 1ರಲ್ಲಿ 3 ಅಥವಾ ಅದಕ್ಕಿಂತ ಹೆಚ್ಚಿನ ವಾರಗಳಲ್ಲಿ ಮಳೆಯಾಗದಿದ್ದರೆ- ಡ್ರೈ ಸೈಲ್ ವೀಕ್ಸ್ ಎಂದು ಕರೆಯಲಾಗುತ್ತದೆ. ಟ್ರಿಗರ್ 2ರಲ್ಲಿ ಬಿತ್ತನೆಯ ಪ್ರಮಾಣ, ಬಿತ್ತಿದ ಬೆಳೆಗಳ ಸ್ಥಿತಿಗತಿ, ಮಣ್ಣಿನ ತೇವಾಂಶ, ಅಂತರ್ಜಲದ ಪ್ರಮಾಣ, ಕೆರೆಕಟ್ಟೆಗಳಲ್ಲಿ, ಅಣೆಕಟ್ಟುಗಳಲ್ಲಿನ ನೀರಿನ ಪ್ರಮಾಣ ಇತ್ಯಾದಿಗಳು ಸೇರುತ್ತವೆ. ಈ ಎರಡೂ ಅಂಶಗಳನ್ನು ಆಧರಿಸಿ 134 ತಾಲ್ಲೂಕುಗಳು ಟ್ರಿಗರ್ - 1 ಪ್ರಕಾರ ಅರ್ಹತೆ ಪಡೆದಿವೆ.

— ಡಾ. ಜಿ. ಪರಮೇಶ್ವರ, ಉಪಮುಖ್ಯಮಂತ್ರಿ

"

ಸೋಮವಾರಪೇಟೆ ಸ್ಟೋರಿಗೆ ಹೆಚ್ಚುವರಿ ಕೋಟ್ ಬಳಸಿಕೊಳ್ಳಿ: ಸೋಮವಾರಪೇಟೆ ತಾಲೂಕು ಸಾಧಾರಣ ಬರಪೀಡಿತ ಘೋಷಣೆ ಸರಿಯಾಗಿದೆ. ಆದರೂ ಹೋಬಳಿವಾರ ಯಾವ ರೀತಿಯ ಬರ ಇದೆ ಎಂದು ಪರಿಶೀಲನೆ ಮಾಡಬೇಕಿದೆ. ಕಾಫಿ ಹೂ ಕಟ್ಟಲು ಮಳೆ ಸರಿಯಾಗಿ ಬರಲಿಲ್ಲ, ಕೆಲವೆಡೆ ಬತ್ತದ ಗದ್ದೆ ನಾಟಿ ಮಾಡಲು ಮಳೆ ಬಂದಿದೆ ಕೆಲವೆಡೆ ಮಳೆ ಸರಿಯಾಗಿ ಬಾರದೆ ಆಕಾಶದೆಡೆ ನೋಡುತ್ತಿದ್ದಾರೆ. ಈ ಘೋಷಣೆಯಿಂದ ನಿಜವಾದ ಪರಿಹಾರ ಪಡೆಯಬೇಕಾದವರಿಗೆ ವಂಚನೆ ಆಗದಿರಲಿ.

— ಎಸ್.ಎಂ. ಉಮಾಶಂಕರ್, ಕಾಫಿ ಬೆಳೆಗಾರರು ಸಿಡಿಗಳಲೆ

ವಿಮೆಗೆ ಸಂಬAಧಿಸಿದAತೆ ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ಅರ್ಜಿಗಳು ಅಂದರೆ 353 ಅರ್ಜಿಗಳು ಸೋಮವಾರಪೇಟೆ ತಾಲೂಕಿನಲ್ಲಿ ಸಲ್ಲಿಕೆಯಾಗಿವೆ. ಅತಿ ಹೆಚ್ಚು ವಿಮೆ ಮಾಡಿಸಿದ ಪ್ರದೇಶ ಅಂದರೆ 127.45 ಹೆಕ್ಟೇರ್ ಪ್ರದೇಶದೊಂದಿಗೆ ಮೊದಲ ಸ್ಥಾನದಲ್ಲಿದೆ. ಸಾಮಾನ್ಯವಾಗಿ ಸುಮಾರು 5,300 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಈ ವರ್ಷ 2,300 ಹೆಕ್ಟೇರ್ ಪ್ರದೇಶದಲ್ಲಿ ಸದ್ಯ ನಾಟಿ ಕಾರ್ಯ ನಡೆದಿದೆ. ಬಿತ್ತನೆ ಮತ್ತು ನಾಟಿ ಕಾರ್ಯ ಇನ್ನೂ ಮುಂದುವರಿದಿದ್ದು ಈ ಪ್ರದೇಶ ಮತ್ತಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ. ಸದ್ಯದ ಮಟ್ಟಿಗೆ ಮಳೆ ಕೊರತೆ ಕಾರಣದಿಂದ ಬೆಳೆ ನಷ್ಟ ಆದ ಬಗ್ಗೆ ಮಾಹಿತಿ ಇಲ್ಲ ಎಂದು ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net