ಕೊಡಗು ಕೆನ್ನೆಲ್ ಕ್ಲಬ್ ನೇತೃತ್ವದಲ್ಲಿ, ಕರ್ನಾಟಕ ಪಶುವೈದ್ಯಕೀಯ ಸಂಘ ಹಾಗೂ ಪಶುವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ರೇಬಿಸ್ ವಿರುದ್ಧ ಲಸಿಕಾ ಕಾರ್ಯಕ್ರಮ ಹಾಗೂ ಜಾಗೃತಿ ಶಿಬಿರ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಿತು.
ಗೋಣಿಕೊಪ್ಪ: ಕೊಡಗು ಕೆನ್ನೆಲ್ ಕ್ಲಬ್ ನೇತೃತ್ವದಲ್ಲಿ, ಕರ್ನಾಟಕ ಪಶುವೈದ್ಯಕೀಯ ಸಂಘ ಹಾಗೂ ಪಶುವೈದ್ಯಕೀಯ ಇಲಾಖೆಯ ಸಹಯೋಗದಲ್ಲಿ ರೇಬಿಸ್ ವಿರುದ್ಧ ಲಸಿಕಾ ಕಾರ್ಯಕ್ರಮ ಹಾಗೂ ಜಾಗೃತಿ ಶಿಬಿರ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಿತು.
ಶ್ವಾನ ಪ್ರಿಯರು ತಮ್ಮ ಸಾಕು ನಾಯಿಗಳಿಗೆ ರೇಬಿಸ್ ಲಸಿಕೆ ಮತ್ತು ಬೆಕ್ಕುಗಳಿಗೆ ಲಸಿಕೆ ಹಾಕಿಸುವ ಮೂಲಕ ಶಿಬಿರದ ಸದುಪಯೋಗ ಪಡೆದುಕೊಂಡರು.
ಗೋಣಿಕೊಪ್ಪ ಪಶುವೈದ್ಯಕೀಯ ಇಲಾಖೆಯ ಅಧಿಕಾರಿ ಡಾ.ಭವಿಷ್ ಕುಮಾರ್ ಅವರು ಶ್ವಾನಗಳಿಗೆ ಲಸಿಕೆ ನೀಡುವ ಮೂಲಕ ರೇಬಿಸ್ ತಡೆ ಕುರಿತು ಜಾಗೃತಿ ಮೂಡಿಸಿದರು.
ಈ ಸಂದರ್ಭ ಮಾತನಾಡಿದ ಡಾ.ಭವಿಷ್ ಕುಮಾರ್, ರೇಬಿಸ್ ಮಾರಣಾಂತಿಕ ಕಾಯಿಲೆಯಾಗಿದ್ದು, ರೋಗದ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಮನುಷ್ಯರು ಹಾಗೂ ಪ್ರಾಣಿಗಳಲ್ಲಿ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿಲ್ಲ. ಲಸಿಕೆ ಹಾಕಿಸುವುದೇ ರೇಬಿಸ್ ತಡೆಗೆ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ತಿಳಿಸಿದರು.
ಸಾಕು ನಾಯಿ ಹಾಗೂ ಬೆಕ್ಕುಗಳ ಮಾಲೀಕರು ತಮ್ಮ ಪ್ರಾಣಿಗಳಿಗೆ ನಿಯಮಿತವಾಗಿ ರೇಬಿಸ್ ಲಸಿಕೆ ಹಾಕಿಸಬೇಕು. ಆಯಾ ಗ್ರಾಮಗಳಲ್ಲಿರುವ ಸಾಕುಪ್ರಾಣಿಗಳ ಮಾಲೀಕರು ಮುಂದಿನ ಲಸಿಕಾ ಶಿಬಿರಗಳ ಸದುಪಯೋಗ ಪಡೆದುಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಮುಂದಿನ ಹಂತದಲ್ಲಿ ಸೆ.೭ರಂದು ಪೊನ್ನಂಪೇಟೆ ಪಶು ಆಸ್ಪತ್ರೆ, ಸೆ.೮ರಂದು ಬಾಳೆಲೆ ಪಶು ಆಸ್ಪತ್ರೆ ಹಾಗೂ ಸೆ.೧೦ರಂದು ಶ್ರೀಮಂಗಲ ಪಶು ಆಸ್ಪತ್ರೆಯಲ್ಲಿ ರೇಬಿಸ್ ಲಸಿಕಾ ಶಿಬಿರ ನಡೆಯಲಿದೆ. ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧ರವರೆಗೆ ಲಸಿಕಾ ಕಾರ್ಯಕ್ರಮ ನಡೆಯಲಿದೆ ಎಂದು ಡಾ.ಭವಿಷ್ ಕುಮಾರ್ ತಿಳಿಸಿದರು.
ಶಿಬಿರದಲ್ಲಿ ೬೭ ನಾಯಿಗಳಿಗೆ ಮತ್ತು ೧೬ ಬೆಕ್ಕುಗಳಿಗೆ ಚುಚ್ಚುಮದ್ದು ಅಳವಡಿಸಲಾಯಿತು. ತಾಲೂಕು ಪಶು ವೈದ್ಯಕೀಯ ಇಲಾಖೆ ಅಧಿಕಾರಿ ಗಿರೀಶ್.ಬಿ.ಜಿ ಗೋಣಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕೆವಿಕೆ ಸಭಾಂಗಣದಲ್ಲಿ ರಾಬಿಸ್ ರೋಗದ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭ ಕೇನಲ್ ಕ್ಲಬ್ ಅಧ್ಯಕ್ಷ ಅಳಮೇಂಗಡ ಪಿ.ರಮೇಶ್ ಮತ್ತು ಡಾ.ಸುರೇಶ್ ಇದ್ದರು.