ಸೋಮವಾರಪೇಟೆ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಸೋಮವಾರಪೇಟೆ ಠಾಣೆಗೆ ಪ್ರಥಮ ಮಹಿಳಾ ಠಾಣಾಧಿಕಾರಿಯಾಗಿ ಆಗಮಿಸಿರುವ ಖತೀಜಾ ಅವರನ್ನು ಸನ್ಮಾನಿಸಲಾಯಿತು. ಸಂಪತ್, ಕವನ್, ಜಗದೀಶ್ ಇದ್ದರು.
Published on:
Copied
Follow Us
ಸೋಮವಾರಪೇಟೆ: ಪಟ್ಟಣದ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಕಾರ್ಯಕಾರಿ ಸಭೆ ಹಾಗೂ ಪೊಲೀಸ್ ಇಲಾಖೆಯ ವತಿಯಿಂದ ತಂಬಾಕು ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಾಗಾರ ಬುಧವಾರ ಪತ್ರಿಕಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಠಾಣಾಧಿಕಾರಿ ಖತೀಜಾ ಅವರು, ಆಟೊ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ವಾಹನದ ದಾಖಲಾತಿಗಳು, ವಿಮೆಯ ನಕಲು ಪ್ರತಿ ಹಾಗೂ ವಾಹನದ ರಹದಾರಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸದಾ ತಮ್ಮೊಂದಿಗೆ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ಆಟೋ ಚಾಲಕರು ಸೇವಾ ವೃತ್ತಿಯಲ್ಲಿರುವುದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಎಎಸ್‌ಐ ಮಹದೇವ್ ಮಾತನಾಡಿ, ತಂಬಾಕು ಹಾಗೂ ಮಾದಕ ವಸ್ತು ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಯುವಜನರು ಇಂತಹ ದುಶ್ಚಟಗಳಿಗೆ ಬಲಿಯಾಗದಂತೆ ಜಾಗೃತಿ ಮೂಡಿಸುವಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಸ್.ವಿ.ಸಂಪತ್ ವಹಿಸಿದ್ದರು. ಉಪಾಧ್ಯಕ್ಷ ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಪಿ.ಎಂ.ಕವನ್, ಸಹ ಕಾರ್ಯದರ್ಶಿ ಎ.ಸಿ.ಜಗದೀಶ್, ಖಜಾಂಚಿ ಬಿ.ಆರ್.ವಿಜು ಐಗೂರು, ಮಾಜಿ ಅಧ್ಯಕ್ಷ ಆರ್.ಮೋಹನ್, ರವೀಶ್ ಕಲ್ಕಂದೂರು ಹಾಗೂ ಅವಿಲಾಶ್ ಐಗೂರು ಇದ್ದರು.
ಸೋಮವಾರಪೇಟೆ ಠಾಣೆಗೆ ಪ್ರಥಮ ಮಹಿಳಾ ಠಾಣಾಧಿಕಾರಿಯಾಗಿ ಆಗಮಿಸಿರುವ ಖತೀಜಾ ಅವರನ್ನು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.