ಹದಗೆಟ್ಟ ರಸ್ತೆಗಳ ದುರಸ್ತಿಕಾರ್ಯ ಕೈಗೊಳ್ಳದ ಮತ್ತು ಅನುದಾನ ನೀಡದ ಕಾಂಗ್ರೆಸ್ ಸÀರ್ಕಾರದ ವಿರುದ್ಧ ಮಂಗಳವಾರ (ನ.25) ವಿರಾಜಪೇಟೆ ಲೋಕೋಪಯೋಗಿ ಇಲಾಖೆ ಕಚೇರಿ ಮುಂಭಾಗದಲ್ಲಿ ವಿರಾಜಪೇಟೆ ತಾಲೂಕು ಬಿಜೆಪಿ ಮಂಡಲ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ತಿಳಿಸಿದ್ದಾರೆ. ಕಳೆದ ಎರಡು ದಶಕಗಳಿಂದ ರಸ್ತೆಗಳು ಸುಗಮ ಸಂಚಾರಕ್ಕೆ ತೆರೆದುಕೊಂಡಿದ್ದವು. ಇದೀಗ ಎರಡೂವರೆ ವರ್ಷಗಳಿಂದ ತಾಲೂಕಿನಾದ್ಯಂತ ಹದಗೆಟ್ಟಿರುವ ಲೋಕೋಪಯೋಗಿ, ಗ್ರಾಮೀಣ ರಸ್ತೆಗಳು ಜನಸೌಕರ್ಯಕ್ಕೆ ಅನಾನುಕೂಲವಾಗಿದೆ. ವಾಹನಗಳ ಸಂಚಾರಕ್ಕೆ ಅಯೋಗ್ಯವಾಗಿದೆ. ತಾಲೂಕಿನ ಯಾವುದೇ ಮುಖ್ಯ ರಸ್ತೆಗಳನ್ನು ಗಮನಿಸಿದರೆ ಡಾಂಬರುಗಳು ಕಿತ್ತುಹೋದ ರಸ್ತೆಗಳೇ ಕಾಣಿಸುತ್ತಿವೆ ಎಂದು ಭಾನುವಾರ ಗೋಣಿಕೊಪ್ಪಲಿನಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಈ ವಿಚಾರವನ್ನು ಮುಂದಿಟ್ಟು, ಮಾಜಿ ಶಾಸಕರು, ಎಂಎಲ್‌ಸಿ, ಪಕ್ಷದ ನಾಯಕರು, ಬೂತ್ ಮಟ್ಟದ ಅಧ್ಯಕ್ಷರು ಸೇರಿದಂತೆ ಪಕ್ಷದ ಕಾರ್ಯಕರ್ತರ ಹಾಜರಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗುಮ್ಮಟ್ಟಿರ ಕಿಲನ್ ಗಣಪತಿ ಮಾತನಾಡಿ ರೋಗಿಗಳಿಗೆ, ವಿದ್ಯಾರ್ಥಿಗಳಿಗೆ, ಗರ್ಭಿಣಿಯರಿಗೆ ಸೇರಿದಂತೆ ಹಲವಾರು ತುರ್ತು ಸಂದರ್ಭಗಳಲ್ಲಿ ಸಂಚರಿಸಲು ಸೂಕ್ತವಾದ ರಸ್ತೆ ವ್ಯವಸ್ಥೆ ಇಲ್ಲದಿರುವುದು ಆಡಳಿತದಲ್ಲಿನ ವಿಫಲತೆಯನ್ನು ತೋರಿಸುತ್ತಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಸಹ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನೆಲ್ಲಿರ ಚಲನ್ ಕುಮಾರ್ ಮಾತನಾಡಿ ಗುಂಡಿ ಮುಚ್ಚಲೂ ಸಾಧ್ಯವಾಗದ ಆರ್ಥಿಕ ಕೊರತೆ ಸರ್ಕಾರಕ್ಕೆ ಎದುರಾಗಿದೆ. ಜಿಲ್ಲೆಗೆ ಯಾವುದೇ ಅನುದಾನ ಬಾರದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಷ್ಟೇ ಅನುದಾನ ಬಂದಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಶಾಸಕರು ಅನುದಾನ ಬಂದಿರುವ ಬಗ್ಗೆ ಮಾಹಿತಿ ಆಧಾರಿತ ಶ್ವೇತ ಪತ್ರ ಹೊರಡಿಸುವ ಮೂಲಕ ಜನರ ಗಮನಕ್ಕೆ ತರುವಂತಾಗಲಿ ಎಂದು ಹೇಳಿದರು.
ವಕ್ತಾರ ಚೆಪ್ಪುಡಿರ ರಾಕೇಶ್ ಮಾತನಾಡಿದರು. ಬಿಜೆಪಿ ಮಂಡಲ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ ಸುದ್ದಿಗೋಷ್ಠಿಯಲ್ಲಿ ಇದ್ದರು.