ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಸಮೀಪದ ಬೆಳ್ಳೂರು ಗ್ರಾಮದ ದಲಿತ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ತಪ್ಪಿತಸ್ಥನಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಜಿಲ್ಲಾ ದಸಂಸ ಆಗ್ರಹ
ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಸಮೀಪದ ಬೆಳ್ಳೂರು ಗ್ರಾಮದ ದಲಿತ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸಂಘಟನೆ ಕೊಡಗು ಹಾಗೂ ಮೈಸೂರು ಜಿಲ್ಲಾ ಸಂಚಾಲಕ ಎಚ್.ಎನ್.ಕೃಷ್ಣಪ್ಪ ನೇತೃತ್ವದಲ್ಲಿ ಪೊನ್ನಂಪೇಟೆ ಬಸ್ ನಿಲ್ದಾಣದಿಂದ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿದರು. ತಪ್ಪಿತಸ್ಥನಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಮೈಸೂರಿನಲ್ಲಿ ಅಂತಿಮ ಬಿಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ರಂಜಿತಾಳನ್ನು ಪ್ರೀತಿಸುವ ನಾಟಕವಾಡಿ ಮದುವೆ ಆಗುವುದಾಗಿ ನಂಬಿಸಿದ ವಿವಾಹಿತ, ಮಾ.12ರಂದು ಬೆಂಗಳೂರಿನ ವರ್ತೂರಿನಲ್ಲಿ ಕೊಲೆ ಮಾಡಿದ್ದಾನೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಮತ್ತು ಕೊಲೆಗೆ ಸಹಕರಿಸಿದವರನ್ನು ಬಂಧಿಸಿ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಮೃತಳ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ, ಸರ್ಕಾರಿ ನೌಕರಿ ಮತ್ತು 5 ಎಕರೆ ಜಾಗ ಮಂಜೂರು ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘಟನೆ ಮಹಿಳಾ ಒಕ್ಕೂಟದ ರಾಜ್ಯ ಸಂಯೋಜಕಿ ಗಿರಿಜಾ ಮಾತನಾಡಿ, ವಿದ್ಯಾರ್ಥಿನಿ ರಂಜಿತಾ ಹತ್ಯೆಯಾಗಿ ದಿನಗಳೇ ಕಳೆದರೂ ಕಾನೂನು ಕ್ರಮ ಕೈಗೊಳ್ಳದಿರುವುದು ಹಾಗೂ ಸ್ಥಳೀಯ ಅಧಿಕಾರಿ ಮೃತಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳದೆ ಇರುವುದು ವಿಪರ್ಯಾಸ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಸಂಚಾಲಕ ಎಚ್.ಎನ್.ಕೃಷ್ಣಪ್ಪ ಮಾತನಾಡಿ, ಸೂಕ್ತ ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ನಂತರ ಉಪ ತಹಸೀಲ್ದಾರ್‌ಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಯೋಜಕ ರಜನೀಕಾಂತ್, ಯೋಗೇಶ್ ಮಡಿಕೇರಿ, ನಾಗೇಶ್, ಕೆ.ಪೂವಣ್ಣಿ, ರಾಜು, ವಿಜಯ್, ನಿತೀಶ್ ಇತರರಿದ್ದರು.