ಕುಶಾಲನಗರ : ಪುರಸಭಾ ವ್ಯಾಪ್ತಿಯ ಬೈಚನಹಳ್ಳಿಯ ಆರ್.ಸಿ.ಬಡಾವಣೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ತೆರೆಯಲು ಯೋಜಿಸಿರುವ ಮೌಲಾನ ಆಜಾದ್ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿ ವಿರೋಧಿಸಿ ಬಡಾವಣೆ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಬಡಾವಣೆಯ ನಿವಾಸಿಗಳು ಶ್ರಮದಾನ ಮಾಡುವ ಮೂಲಕ ಹಾಗೂ ಪ್ರತಿ ಮನೆಯಲ್ಲಿ ಹಣ ಸಂಗ್ರಹಿಸಿ ಸಮತಟ್ಟು ಹಾಗೂ ಸ್ವಚ್ಛವಾಗಿಟ್ಟುಕೊಂಡಿರುವ ವಿಶಾಲ ಉದ್ಯಾನ ಜಾಗದಲ್ಲಿ ಶಾಲೆ ತೆರೆಯಲು ಹೊರಟಿರುವುದು ಅವೈಜ್ಞಾನಿಕ. ಸರ್ಕಾರದ ವತಿಯಿಂದ ನಿರ್ಮಾಣವಾಗುವ ಹೊಸ ಶಾಲಾ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಆಟದ ಮೈದಾನ, ವಾಹನಗಳ ಪಾರ್ಕಿಂಗ್, ವಿಶಾಲವಾದ ರಸ್ತೆ. ಹೀಗೆ ಮೂಲ ಸೌಕರ್ಯ ಇರಬೇಕು. ಆದರೆ ಕಿಷ್ಕಿಂಧೆಯಂತಿರುವ ಜಾಗದಲ್ಲಿ ಕೊಡಗು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಶಾಲೆ ತೆರೆಯಲು ಯೋಜಿಸಿರುವುದು ಸಮಂಜಸವಲ್ಲ ಎಂದು ಬಡಾವಣೆ ಹಿತರಕ್ಷಣಾ ಸಮಿತಿ ಗೌರವಾಧ್ಯಕ್ಷ ಕಣಿವೆ ನಾಗೇಂದ್ರ ಕಿಡಿಕಾರಿದರು.
ಬಡಾವಣೆಯ ನಿವಾಸಿಗಳು ಈಗಾಗಲೇ ಒಂದೆಡೆ ಸೇರಿ ಸಭೆ ನಡೆಸಿ ಇಲಾಖೆಯ ಕ್ರಮವನ್ನು ಖಂಡಿಸಿ ಸಂಸದ, ಶಾಸಕ ಹಾಗೂ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ಸಮಿತಿ ಉಪಾಧ್ಯಕ್ಷೆ ರಾಣಿ ಮಾಹಿತಿ ನೀಡಿದರು.
ಸಮಿತಿ ಕಾರ್ಯದರ್ಶಿ ಕಮಲ್ ಮಾತನಾಡಿ, ದೇಶದ ಗಡಿಗಳಲ್ಲಿ ಜೀವದ ಹಂಗು ತೊರೆದು ಸೇವೆ ಮಾಡಿ ನಿವೃತ್ತಿಯಾಗಿ ಬಂದಿರುವ ಅನೇಕ ಮಾಜಿ ಸೈನಿಕರು ಇಲ್ಲಿ ಮನೆಗಳನ್ನು ನಿರ್ಮಿಸಿ ಶಾಂತಿ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ. ಜತೆಗೆ ಬಡಾವಣೆಯಲ್ಲಿ ವೃದ್ಧರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರೆಲ್ಲರ ನೆಮ್ಮದಿಗೆ ಭಂಗವಾಗದ ರೀತಿಯಲ್ಲಿ ಉದ್ದೇಶಿತ ಶಾಲೆ ಕಟ್ಟಡ ಕಾಮಗಾರಿಯನ್ನು ಕೂಡಲೇ ಬೇರೆ ಜಾಗದಲ್ಲಿ ಆರಂಭಿಸಲಿ ಎಂದು ಒತ್ತಾಯಿಸಿದರು.
ಸಮಿತಿ ಖಜಾಂಚಿ ನಾಗರಾಜು ಮಾತನಾಡಿ, ಒಂದು ವೇಳೆ ಇಲಾಖೆ ಅಧಿಕಾರಿಗಳು ಹಟಮಾರಿ ಧೋರಣೆ ಅನುಸರಿಸಿದಲ್ಲಿ ಒಗ್ಗಟ್ಟಿನಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು,
ಪ್ರತಿಭಟನೆಯಲ್ಲಿ ಬಡಾವಣೆಯ ಪ್ರಮುಖರಾದ ವಕೀಲ ಜಗದೀಶ್, ಇಂಜಿನಿಯರ್ ಸಂದೀಪ್, ಚೈತ್ರಾ, ಪುಷ್ಪಾ, ಮಂಜು, ನಾಗಮಣಿ, ಸುರೇಖಾ, ಶ್ಯಾಮಲಾ ಮೊದಲಾದವರು ಇದ್ದರು.