ಅಯ್ಯಪ್ಪ ಮಾಲೆ ಬಿಚ್ಚಿಸಿದ ಮುಖ್ಯ ಶಿಕ್ಷಕಿ ವಿರುದ್ಧ ಧರಣಿ

ಪೊನ್ನಂಪೇಟೆಯ ಪ್ರತಿಷ್ಠಿತ ಶಾಲೆಯಲ್ಲಿ ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿನಿಯ ಮಾಲೆ ಬಿಚ್ಚಿಸಿದ ಶಾಲೆಯ ಮುಖ್ಯಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡ ಹಿಂದು ಕಾರ್ಯಕರ್ತರು.
ಪೊನ್ನಂಪೇಟೆಯ ಪ್ರತಿಷ್ಠಿತ ಶಾಲೆಯಲ್ಲಿ ಅಯ್ಯಪ್ಪ ಮಾಲಾಧಾರಿ ವಿದ್ಯಾರ್ಥಿನಿಯ ಮಾಲೆ ಬಿಚ್ಚಿಸಿದ ಶಾಲೆಯ ಮುಖ್ಯಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡ ಹಿಂದು ಕಾರ್ಯಕರ್ತರು.
Published on

ಪ್ರಮುಖ ಮುಖ್ಯಾಂಶಗಳು

  • ಪೊನ್ನಂಪೇಟೆಯ ಪ್ರತಿಷ್ಠಿತ ಶಾಲೆ ವಿರುದ್ಧ ಆಕ್ರೋಶ
  • ವ್ರತ ಮಾಲೆಯನ್ನು ಬಲವಂತವಾಗಿ ತೆಗೆಸಿದ ಶಾಲೆಯ ಮುಖ್ಯ ಶಿಕ್ಷಕಿ
ಪೊನ್ನಂಪೇಟೆ : ಅಯ್ಯಪ್ಪ ಸ್ವಾಮಿ ಮಾಲಾಧಾರಿಯಾಗಿ ಶಾಲೆಗೆ ಬಂದಿದ್ದ ವಿದ್ಯಾರ್ಥಿಯ ವ್ರತ ಮಾಲೆಯನ್ನು ಬಲವಂತವಾಗಿ ತೆಗೆಸಿದ ಶಾಲೆಯ ಮುಖ್ಯ ಶಿಕ್ಷಕಿ ವಿರುದ್ಧ ಹಿಂದುಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪೊನ್ನಂಪೇಟೆಯ ಪ್ರತಿಷ್ಠಿತ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯ ಮಾಲೆಯನ್ನು ಸಿಸ್ಟರ್ ಶೆರ್ವಿನ್ ಡಿ.16ರಂದು ಬಲವಂತವಾಗಿ ಬಿಚ್ಚಿಸಿದ್ದರು. ಬಳಿಕ ಅಲ್ಲಿಯೇ ಇದ್ದ ಶಿಕ್ಷಕರು ಮತ್ತೆ ಮಾಲೆಯನ್ನು ಬಾಲಕಿಗೆ ಹಾಕಿದ್ದರು. ಇದರಿಂದ ಬೇಸರಗೊಂಡ ವಿದ್ಯಾರ್ಥಿನಿ ಪಾಲಕರಿಗೆ ವಿಷಯ ತಿಳಿಸಿದ್ದಳು. ಶಾಲೆಯಲ್ಲಿ ಮಾಲೆ ತೆಗೆಸಿದ ವಿಚಾರ ಹಿಂದು ಸಂಘಟನೆಗಳ ಮುಖಂಡರು. ಕಾರ್ಯಕರ್ತರಿಗೆ ತಿಳಿದು ಶನಿವಾರ ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಇದರ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು ಪ್ರತಿಭಟನಾಕಾರರು ಪ್ರಶ್ನಿಸಿದಾಗ, ಆಚಾತುರ್ಯದಿಂದ ಈ ಘಟನೆ ಸಂಭವಿಸಿದ್ದು ಇನ್ನು ಮುಂದಕ್ಕೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸುವುದಾಗಿ ಮತ್ತು ಮುಂದಿನ ದಿನಗಳಲ್ಲಿ ಯಾರಿಗೂ ನೋವಾಗದ ಹಾಗೆ ನಡೆದುಕೊಳ್ಳುವುದಾಗಿ ತಪ್ಪೊಪ್ಪಿಗೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಈ ಶಾಲೆಯಲ್ಲಿ ಎಲ್ಲ ಧರ್ಮದ 700ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಪ್ರತಿದಿನ ಮಕ್ಕಳಿಗೆ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಪ್ರಾರ್ಥನೆ ಮಾಡಿಸುತ್ತಿರುವ ಆರೋಪ ಕೇಳಿಬಂದಿದೆ. ಇಲ್ಲಿ 25ಕ್ಕೂ ಅಧಿಕ ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. 10 ಬೋಧಕೇತರ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಇದರಲ್ಲಿ ಆರು ಶಿಕ್ಷಕರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರಾಗಿದ್ದಾರೆ.
ಪ್ರತಿಭಟನೆ ಸಂದರ್ಭ ಮುಖಂಡರಾದ ಮುದ್ದಿಯಡ ಮಂಜು ಗಣಪತಿ, ಮತ್ರಂಡ ಕಬೀರ್ ದಾಸ್, ಆಲೇಮಾಡ ನವೀನ್, ಸುಳ್ಳಿಮಾಡ ಸಂಪತ್, ಅಡ್ಡಂಡ ನಿಲನ್, ಪುತ್ತಾಮನೆ ಅನಿಲ್ ಪ್ರಸಾದ್, ವಿನು ಕೆ.ಬಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ, ಹಿಂದು ಜಾಗರಣ ವೇದಿಕೆ, ಬಜರಂಗದಳದ ಕಾರ್ಯಕರ್ತರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net