ಸೋಮವಾರಪೇಟೆಯಲ್ಲಿ ಆಯೋಜಿಸಿದ್ದ ಶಾಂತಳ್ಳಿ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ಬಜೆಗುಂಡಿ ಗ್ರಾಮದ ಒಕ್ಕೂಟದ ಅಧ್ಯಕ್ಷೆ ಎ.ಆರ್.ದಿವ್ಯಾ ಉದ್ಘಾಟಿಸಿದರು. ಹನುಮಂತಪ್ಪ, ವಿಠಲ್ ಇದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಶಾಂತಳ್ಳಿ ವಲಯದ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ಇತ್ತೀಚೆಗೆ ಯೋಜನಾ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಬಜೆಗುಂಡಿ ಗ್ರಾಮದ ಒಕ್ಕೂಟದ ಅಧ್ಯಕ್ಷೆ ಎ.ಆರ್.ದಿವ್ಯಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಜನರ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕ ವಿಠಲ ಸಾಲ್ಯಾನ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಬಡಜನರ ಉನ್ನತಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳನ್ನು ಅರ್ಹರಿಗೆ ತಲುಪಿಸುವಲ್ಲಿ ಸಂಸ್ಥೆಯ ಸಿಬ್ಬಂದಿ ಹಾಗೂ ಸಂಘದ ಪದಾಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ ಎಂದರು.
ತಾಲೂಕು ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ ಮಾತನಾಡಿ, ಪದಾಧಿಕಾರಿಗಳು ಸಂಘಗಳಿಗೆ ಭೇಟಿ ನೀಡುವ ಸಂದರ್ಭ ಪರಿಶೀಲಿಸಬೇಕಾದ ದಾಖಲೆಗಳು, ಉತ್ತಮ ನಾಯಕತ್ವಕ್ಕೆ ಅಗತ್ಯವಿರುವ ಅಂಶಗಳನ್ನು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಮೇಲ್ವಿಚಾರಕಿ ಪವಿತ್ರಾಕ್ಷಿ ಒಕ್ಕೂಟ ಸಭೆಯ ನಿರ್ವಹಣೆ, ಪದಾಧಿಕಾರಿಗಳ ಜವಾಬ್ದಾರಿ, ಬಡ್ಡಿದರ ಲೆಕ್ಕಾಚಾರ ಹಾಗೂ ಮರುಪಾವತಿ ಚೀಟಿ, ಆಂತರಿಕ ಲೆಕ್ಕಪರಿಶೋಧಕಿ ರೂಪಾ ಸಂಘಗಳ ಗ್ರೇಡಿಂಗ್ ಹಾಗೂ ನಿರ್ಣಯ ಪುಸ್ತಕ ನಿರ್ವಹಣೆ ಕುರಿತು ತರಬೇತಿ ನೀಡಿದರು.