ಮೊಂಬತ್ತಿ ಬೆಳಕಿನಲ್ಲೇ ಮಕ್ಕಳ ಓದು

ಕುಡಿಯಲು ಕೆರೆ ನೀರೇ ಗತಿ
ಬಡಾವಣೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಸೇರಿದಂತೆ ಬಡ ಕುಟುಂಬಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಕೆರೆಯ ನೀರನ್ನೇ ಅವಲಂಬಿಸಿದ್ದಾರೆ.
ಬಡಾವಣೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಸೇರಿದಂತೆ ಬಡ ಕುಟುಂಬಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಕೆರೆಯ ನೀರನ್ನೇ ಅವಲಂಬಿಸಿದ್ದಾರೆ.
Published on: 

ಪಿ.ವಿ.ಅಂತೋಣಿ ಸಿದ್ದಾಪುರ

ಇನ್ನೂ ಕುಡಿಯುವ ನೀರಿಗಾಗಿ ಕೆರೆಯನ್ನೇ ಆಶ್ರಯಿಸಿರುವ ಕುಟುಂಬಗಳು, ಮೊಂಬತ್ತಿ ಬೆಳಕಿನಲ್ಲಿ ಅಕ್ಷರ ಕಲಿಯುತ್ತಿರುವ ಮಕ್ಕಳು... ಇದು, ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊನ್ನತ್ ಮೊಟ್ಟೆ ಗ್ರಾಮದ ರಾಮ್ ಜೀ ಸಕ್ಪಾಲ್ ಬಡಾವಣೆಯ ದುಸ್ಥಿತಿ. ಕುಡಿಯುವ ನೀರು ಮತ್ತು ವಿದ್ಯುತ್‌ನಂತಹ ಮೂಲಸೌಲಭ್ಯಗಳಿಲ್ಲದೆ ಸುಮಾರು 30 ಕುಟುಂಬಗಳು ಸಂಕಷ್ಟದ ಜೀವನ ನಡೆಸುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಡಾವಣೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಸೇರಿದಂತೆ ಬಡ ಕುಟುಂಬಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಹೀಗಾಗಿ ಕೆರೆಯ ನೀರನ್ನೇ ಕುಡಿಯುವಂತಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ನಿವಾಸಿಗಳ ಬದುಕು ದುಸ್ತರವಾಗಿದೆ. ಕಲುಷಿತ ನೀರು ಸೇವನೆಯಿಂದ ಮಕ್ಕಳಲ್ಲಿ ಕಜ್ಜಿ ಹಾಗೂ ತುರಿಕೆಯಂತಹ ಚರ್ಮದ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಪಾಲಕರು ಆತಂಕ ತೋಡಿಕೊಳ್ಳುತ್ತಾರೆ.

ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ತುರ್ತು ಅಗತ್ಯವಾಗಿದೆ. ಕಡಿತಗೊಳಿಸಿರುವ ನೀರಿನ ಸಂಪರ್ಕವನ್ನು ಕೂಡಲೇ ಮರುಸ್ಥಾಪಿಸಿ ಜನರ ಆರೋಗ್ಯ ರಕ್ಷಿಸಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ವಿದ್ಯುತ್ ಸಮಸ್ಯೆ ಗಂಭೀರ: ಸಮರ್ಪಕವಾಗಿ ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕದ ಸಮಸ್ಯೆಯೂ ಗಂಭೀರವಾಗಿದೆ. ರಾತ್ರಿ ವೇಳೆ ಮೊಂಬತ್ತಿ ಬೆಳಕಿನಲ್ಲೇ ಕುಟುಂಬಗಳು ಜೀವನ ಸಾಗಿಸುತ್ತಿವೆ. ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸೇರಿದಂತೆ ಮಕ್ಕಳು ಓದಲು ಸಮರ್ಪಕ ಬೆಳಕಿಲ್ಲದೆ ಪರದಾಡುತ್ತಿದ್ದಾರೆ. ವಿದ್ಯುತ್ ಸೌಲಭ್ಯವಿಲ್ಲದ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದ್ದು, ಅವರ ಭವಿಷ್ಯದ ಬಗ್ಗೆ ಪಾಲಕರು ಆತಂಕ ವ್ಯಕ್ತಪಡಿಸುತ್ತಾರೆ.

ಗುಡಿಸಲು ತೆರವು ಬೆದರಿಕೆ ಆರೋಪ: ಸುಮಾರು ಎರಡು ವರ್ಷಗಳ ಹಿಂದೆ ಜೈ ಭೀಮ್ ಸಂಘಟನೆ ನೇತೃತ್ವದಲ್ಲಿ ನಿವೇಶನ ರಹಿತರು ಹೋರಾಟ ನಡೆಸಿ, ಈ ಪ್ರದೇಶದ ಸರ್ಕಾರಿ ಭೂಮಿಯಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದರು. ನಿವಾಸಿಗಳಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಮತದಾನದ ಹಕ್ಕು ದೊರೆತಿದ್ದರೂ ಮೂಲಸೌಲಭ್ಯಗಳು ಸಮರ್ಪಕವಾಗಿ ಲಭ್ಯವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಅಲ್ಲದೆ ಇದೀಗ ಗ್ರಾಪಂ ಅಧಿಕಾರಿಗಳು ಕುಡಿಯುವ ನೀರಿನ ಸಂಪರ್ಕವನ್ನೂ ಕಡಿತಗೊಳಿಸಿದ್ದು, ಜೆಸಿಬಿ ತಂದು ಗುಡಿಸಲುಗಳನ್ನು ಧ್ವಂಸಗೊಳಿಸುವ ಬೆದರಿಕೆ ಹಾಕಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಈಗಾಗಲೇ ಬಡತನ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೀರಿನ ಸಂಪರ್ಕ ಕಡಿತಗೊಂಡಿರುವುದು ಗಾಯದ ಮೇಲೆ ಉಪ್ಪು ಸುರಿದಂತಾಗಿದೆ.

ಚುನಾವಣೆ ಬಹಿಷ್ಕರಿಸಿ ಪ್ರತಿಭಟನೆ : ಬಡಾವಣೆಗೆ ಕೂಡಲೇ ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ನಿವಾಸಿಗಳು ಎಚ್ಚರಿಸಿದ್ದಾರೆ. ಅಲ್ಲದೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಮನೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಮತದಾನದ ಹಕ್ಕು ಹೊಂದಿದ್ದರೂ ಮೂಲಭೂತ ಸೌಲಭ್ಯಗಳಿಗಾಗಿ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಬಡಾವಣೆಗೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಆಲಿಸಿ, ಮಾನವೀಯ ನೆಲೆಯಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕೋಟ್

ಮತ ಪಡೆಯುವುದಕ್ಕಾಗಿ ಮಾತ್ರ ನಮ್ಮ ಬಳಿಗೆ ಬರುವ ಜನಪ್ರತಿನಿಧಿಗಳು, ನಂತರ ನಮ್ಮ ಸಂಕಷ್ಟಗಳನ್ನು ಆಲಿಸುತ್ತಿಲ್ಲ. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವ ನಾವು ಪೊನ್ನತ್ ಮೊಟ್ಟೆಯ ಸರ್ಕಾರಿ ಜಾಗದಲ್ಲಿ ಕಳೆದ ಎರಡು ವರ್ಷಗಳಿಂದ ಪ್ಲಾಸ್ಟಿಕ್ ಶೆಡ್‌ಗಳಲ್ಲಿ ವಾಸಿಸುತ್ತಿದ್ದೇವೆ. ಇದೀಗ ನಮ್ಮನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದ್ದು, ಕುಡಿಯುವ ನೀರಿನ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. ಅಲ್ಲದೆ ಪಿಡಿಒ ಅವರು ಬುಲ್ಡೋಜರ್ ತಂದು ಗುಡಿಸಲುಗಳನ್ನು ಧ್ವಂಸಗೊಳಿಸುವುದಾಗಿ ಬೆದರಿಸಿದ್ದಾರೆ. ಬಡ ಕುಟುಂಬಗಳ ಸಮಸ್ಯೆಗೆ ಪರಿಹಾರ ಕಲ್ಪಿಸುವ ಬದಲು ಇನ್ನಷ್ಟು ಸಂಕಷ್ಟಕ್ಕೆ ದೂಡಲಾಗುತ್ತಿದೆ.

-ಸೌಕತ್ ಅಲಿ,

ನಿರಾಶ್ರಿತ ಕುಟುಂಬಗಳ ಹೋರಾಟ ಸಮಿತಿ ಅಧ್ಯಕ್ಷ

ಕೋಟ್

ಪ್ರತಿವರ್ಷ ಬಾಡಿಗೆ ಮನೆ ಹಾಗೂ ಲೈನ್‌ಮನೆಗಳಲ್ಲಿ ವಾಸಿಸುತ್ತಾ ಅಲೆದಾಡಿ ಸುಸ್ತಾಗಿದ್ದೇವೆ. ನಿವೇಶನ ರಹಿತರ ಪಟ್ಟಿಯಲ್ಲಿ ನಮ್ಮ ಹೆಸರಿದ್ದರೂ ಶಾಶ್ವತ ನೆಲೆ ಇಲ್ಲದೆ ಪರದಾಡುತ್ತಿದ್ದೇವೆ. ಕಳೆದೆರಡು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಮತದಾನದ ಹಕ್ಕು ದೊರೆತಿದೆ. ಆದರೆ ಕುಡಿಯುವ ನೀರು, ಹಕ್ಕುಪತ್ರ ಮತ್ತು ವಿದ್ಯುತ್ ಸಂಪರ್ಕ ಇನ್ನೂ ಲಭಿಸಿಲ್ಲ. ನಮ್ಮ ಸಮಸ್ಯೆಯನ್ನು ಕೂಡಲೇ ಪರಿಹರಿಸದಿದ್ದರೆ ಮಡಿಕೇರಿ ಕ್ಷೇತ್ರದ ಶಾಸಕರ ಮನೆ ಮುಂದೆ ಧರಣಿ ನಡೆಸುತ್ತೇವೆ.

-ಸುಮಿತ್ರಾ, ಸಂತ್ರಸ್ತ ಮಹಿಳೆ

ಕೋಟ್

ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊನ್ನತ್ ಮೊಟ್ಟೆ ಗ್ರಾಮದ ರಾಮ್ ಜೀ ಸಕ್ಪಾಲ್ ಬಡಾವಣೆಯ ನಿವಾಸಿಗಳ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು, ಕೂಡಲೇ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಜಿ.ಎಸ್.ಸೋಮಶೇಖರ್, ಜಿಲ್ಲಾಧಿಕಾರಿ, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net