ಪತ್ರಕರ್ತನಿಗೆ ಬದ್ಧತೆ-ಜನಪರ ಕಾಳಜಿ ಮುಖ್ಯ

೧ನೇ ತರಗತಿಗೆ ಮೇಲ್ಪಟ್ಟ ವಿವಿಧ ಹಂತದಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ಒಟ್ಟು ೨೨ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
೧ನೇ ತರಗತಿಗೆ ಮೇಲ್ಪಟ್ಟ ವಿವಿಧ ಹಂತದಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ಒಟ್ಟು ೨೨ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಪತ್ರಕರ್ತನಿಗೆ ಬದ್ಧತೆ-ಜನಪರ ಕಾಳಜಿ ಮುಖ್ಯ
  • ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಹೃಷಿಕೇಶ್

ಮಡಿಕೇರಿ: ಪತ್ರಕರ್ತನಿಗೆ ಸಮಾಜಮುಖಿ ಬದ್ಧತೆ, ಸತ್ಯನಿಷ್ಠೆ ಮತ್ತು ಜನಪರ ಕಾಳಜಿ ಮುಖ್ಯ. ಪತ್ರಕರ್ತನು ತನ್ನ ಪದವಿಯಿಂದಲ್ಲ, ತನ್ನ ಕಾರ್ಯದಿಂದ ಗುರುತಿಸಲ್ಪಡುತ್ತಾನೆ ಎಂದು ಬೆಳಗಾವಿ ಆವೃತ್ತಿಯ ದಿ ಹಿಂದೂ ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕ ಹೃಷಿಕೇಶ್ ಬಹದ್ದೂರ್ ದೇಸಾಯಿ ಹೇಳಿದರು.

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‌ಕ್ಲಬ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಪತ್ರಿಕಾ ದಿನಾಚರಣೆ ಹಾಗೂ ಶೈಕ್ಷಣಿಕವಾಗಿ ಸಾಧನೆಗೈದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಾಗಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪತ್ರಿಕಾ ದಿನವು ಕೇವಲ ಸಂಭ್ರಮದ ದಿನವಲ್ಲ. ಆತ್ಮಾವಲೋಕನ ಮಾಡಿಕೊಳ್ಳುವ ದಿನವೂ ಹೌದು. ಕೃತಕ ಬುದ್ಧಿಮತ್ತೆ (ಎಐ) ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಸಾಂಪ್ರದಾಯಿಕ ಮಾಧ್ಯಮಗಳು ಅಸ್ತಿತ್ವದ ಪ್ರಶ್ನೆಯನ್ನು ಎದುರಿಸುತ್ತಿವೆ. ಎಐನಂತಹ ಅವಿಷ್ಕಾರಗಳು ಪತ್ರಕರ್ತರು ಪ್ರಶ್ನಿಸುವ ಮನೋಭಾವವನ್ನೇ ಕಸಿಯುತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೂ ಪರಿಣಾಮ ಬೀರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಪತ್ರಕರ್ತರು ಸದಾ ವೃತ್ತಿಯ ಒತ್ತಡದಲ್ಲೇ ಕಾರ್ಯನಿರ್ವಹಿಸುತ್ತಿದ್ದು, ಸಮಾಜದ ಎಲ್ಲ ವರ್ಗಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಶ್ರಮಜೀವಿಗಳಾಗಿದ್ದಾರೆ. ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಜೀವನಶೈಲಿಯೂ ಬದಲಾಗುತ್ತಿದೆ. ಸಮಾಜದಿಂದ ದೊರೆಯುವ ಪ್ರೋತ್ಸಾಹ ಮತ್ತು ಗೌರವವು ಇನ್ನಷ್ಟು ಉತ್ತಮ ಸಾಧನೆ ಮಾಡಲು ಹುರಿದುಂಬಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಸಮಾಜ ಸೇವಕ ಹಾಗೂ ಉದ್ಯಮಿ ಎಡಿಕೇರಿ ಪ್ರಸನ್ನ, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್.ಸವಿತಾ ರೈ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಅವರು ವಹಿಸಿದ್ದರು.
ಸನ್ಮಾನ-ಪ್ರತಿಭಾ ಪುರಸ್ಕಾರ: ಪತ್ರಿಕಾ ದಿನದ ಅಂಗವಾಗಿ ಗೋಣಿಕೊಪ್ಪ ಭಾಗದ ಪತ್ರಿಕಾ ವಿತರಕ ಕೆ.ಕೆ.ವಿನೋದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ೧ನೇ ತರಗತಿಗೆ ಮೇಲ್ಪಟ್ಟ ವಿವಿಧ ಹಂತದಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ಒಟ್ಟು ೨೨ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net