ಅತ್ಯಾಧುನಿಕ ಮಾರುಕಟ್ಟೆಗೆ ನೀಲಿನಕ್ಷೆ ತಯಾರಿಸಿ

ಸುಂಟಿಕೊಪ್ಪ ಪಟ್ಟಣದ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಆಧುನಿಕ ಮಾರುಕಟ್ಟೆ ಮತ್ತು ಬಸ್ ನಿಲ್ದಾಣ ಸಂಬಂಧ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿದರು.
ಸುಂಟಿಕೊಪ್ಪ ಪಟ್ಟಣದ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಆಧುನಿಕ ಮಾರುಕಟ್ಟೆ ಮತ್ತು ಬಸ್ ನಿಲ್ದಾಣ ಸಂಬಂಧ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಸೂಚನೆ
  • ಅಧಿಕಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಸೂಚನೆ 10 ದಿನದಲ್ಲಿ ವಿಶೇಷ ಸಭೆ ಕರೆಯಲು ನಿರ್ದೇಶನ
ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಆಧುನಿಕ ಮಾರುಕಟ್ಟೆ ಮತ್ತು ಬಸ್ ನಿಲ್ದಾಣ ನಿರ್ಮಾಣ ಸಂಬಂಧ ನೀಲಿನಕ್ಷೆ ತಯಾರಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಶಾಸಕ ಡಾ.ಮಂತರ್ ಗೌಡ ಸೂಚನೆ ನೀಡಿದರು.
ಪಟ್ಟಣದ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯಿಂದ ಆಧುನಿಕ ಮಾರುಕಟ್ಟೆ ಮತ್ತು ಬಸ್ ನಿಲ್ದಾಣ ಸಂಬಂಧ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದರು.
ಸಾರ್ವಜನಿಕರೊಂದಿಗೆ ಚರ್ಚಿಸಿ ಅವರ ಬೇಡಿಕೆ ಅನುಸಾರ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು. ಆಗ ಮಾತ್ರ ಸುಸೂತ್ರ ಆಡಳಿತ ನಡೆಸಲು ಸಾಧ್ಯ. ಹಾಗಾಗಿ ಸಂತೆ ಮಾರುಕಟ್ಟೆಯ ಮಾಜಿ ಜನಪ್ರತಿನಿಧಿಗಳು, ವ್ಯಾಪಾರಸ್ಥರು ಹಾಗೂ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ 10 ದಿನದೊಳಗೆ ಮತ್ತೊಂದು ವಿಶೇಷ ಸಭೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದರು.
ಕನಿಷ್ಠ 3 ನೀಲಿನಕ್ಷೆ ತಯಾರಿಸಿ ಸಭೆಗೆ ವಿವರವಾಗಿ ವರದಿ ನೀಡುವಂತೆ ಕಂದಾಯ ಪರಿವೀಕ್ಷಕ ಎಚ್.ಎಂ.ಪ್ರಶಾಂತ್ ಮತ್ತು ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ರಾಕೇಶ್ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್‌ಗೆ ನಿರ್ದೇಶನ ನೀಡಿದರು.
ಆಧುನಿಕ ಮಾರುಕಟ್ಟೆ ಮತ್ತು ಬಸ್ ನಿಲ್ದಾಣ ನಿರ್ಮಿಸುವ ನಿಟ್ಟಿನಲ್ಲಿ ಪಕ್ಷಾತೀತ ಮತ್ತು ಜಾತ್ಯತೀತ ನಿಲುವಿನಲ್ಲಿ ಎಲ್ಲರೂ ಕೈ ಜೋಡಿಸಬೇಕು. ಈ ಹಿನ್ನೆಲೆಯಲ್ಲಿ ಆಧುನಿಕ ಮಾರುಕಟ್ಟೆ ನಿರ್ಮಿಸಲು ಲೋಟಸ್ ಬಡಾವಣೆಯ ಮಾರುಕಟ್ಟೆ ಜಾಗವನ್ನು ಸರ್ವೇ ನಡೆಸಬೇಕು. ಜತೆಗೆ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಹಳೆಯ ಮಾರುಕಟ್ಟೆ ಪ್ರದೇಶವನ್ನು ಸರ್ವೇ ಮಾಡಬೇಕು ಎಂದು ಸೂಚನೆ ನೀಡಿದರು. ಪ್ರಸ್ತುತ ಹೆದ್ದಾರಿ ಬದಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೋಳಿ, ಕುರಿ ಮಾಂಸ ಮತ್ತು ಮೀನು ಮಾರುಕಟ್ಟೆಗಳನ್ನು ನೂತನ ಮಾರುಕಟ್ಟೆಗೆ ಸ್ಥಳಾಂತರಿಸುವ ಬಗ್ಗೆ ಚಿಂತಿಸಬೇಕು ಎಂದರು.
ನೂತನ ಮಾರುಕಟ್ಟೆಗೆ ಸ್ಥಳಾಂತರಗೊಂಡ ನಂತರವೇ ಹಳೆಯ ಮಾರುಕಟ್ಟೆಯನ್ನು ಬಸ್ ನಿಲ್ದಾಣವಾಗಿ ಪರಿವರ್ತಿಸಬಹುದು. ರಾಜ್ಯ ಸಾರಿಗೆ ಸಂಸ್ಥೆಯಗೆ ಜಾಗ ಬಿಟ್ಟು ಕೊಟ್ಟಲ್ಲಿ ಪಂಚಾಯಿತಿ ಆದಾಯಕ್ಕೆ ಕೊಕ್ಕೆ ಬೀಳಿಲಿದೆ ಹಾಗೂ ಖಾಸಗಿ ಬಸ್ ಮತ್ತು ಪ್ರವೇಶ ನಿಷೇಧಗೊಳ್ಳಲಿದೆ. ಈ ಬಗ್ಗೆ ಮುಂದಿನ ವಿಶೇಷ ಸಭೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ತಮ್ಮ ಅಭಿಪ್ರಾಯ ತಿಳಿಸುವ ಮೂಲಕ ಸುಂಟಿಕೊಪ್ಪ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಶಾಸಕರು ಮನವಿ ಮಾಡಿದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಮಾತನಾಡಿ, ಲೋಟಸ್ ಬಡಾವಣೆಯಲ್ಲಿರುವ ನೂತನ ಮಾರುಕಟ್ಟೆ ನಿರ್ಮಾಣಕ್ಕೆ ಈಗಾಗಲೇ 60 ಲಕ್ಷ ರೂ. ಅನುದಾನ ವ್ಯಯಿಸಲಾಗಿದೆ. ಅದನ್ನು ವ್ಯರ್ಥಗೊಳಿಸಲು ಬಿಡಬಾರದು. ಪಂಚಾಯಿತಿಗೆ ಆದಾಯ ಬರುವ ನಿಟ್ಟಿನಲ್ಲಿ ಕೋಳಿ, ಕುರಿ ಮತ್ತು ಮೀನು ಮಾರುಕಟ್ಟೆಗಳನ್ನು ಹರಾಜು ಹಾಕಿ ಗ್ರಾಮ ಪಂಚಾಯಿತಿಯಿಂದ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಆಧುನಿಕ ವಾಣಿಜ್ಯ ಸಂರ್ಕಿಣಗಳನ್ನು ನಿರ್ಮಿಸಿ ಪಂಚಾಯಿತಿಗೆ ಆದಾಯ ಬರುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಪಿ.ಎಫ್.ಸಬಾಸ್ಟೀನ್ ಮಾತನಾಡಿ, ಕಳೆದ 10 ವರ್ಷಗಳಿಂದ ನೂತನ ಮಾರುಕಟ್ಟೆ ಮತ್ತು ಬಸ್ ನಿಲ್ದಾಣ ಸ್ಥಳಾಂತರ ಕಾರ್ಯರೂಪಕ್ಕೆ ಬಂದಿಲ್ಲ. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪದವಿ ವ್ಯಾಸಂಗಕ್ಕೆ ಕುಶಾಲನಗರ ಮಡಿಕೇರಿ ಮತ್ತು ಹೊರ ಜಿಲ್ಲೆಗಳನ್ನು ಅವಲಂಬಿಸಿದ್ದು, ಸುಂಟಿಕೊಪ್ಪಕ್ಕೆ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಲು ಒತ್ತಾಯಿಸಿದರು.
ಗ್ರಾ.ಪಂ.ಆಡಳಿತಾಧಿಕಾರಿ ರಾಕೇಶ್, ಕಂದಾಯ ಪರೀವಿಕ್ಷಕ ಪ್ರಶಾಂತ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಜರ್ಮಿ ಡಿಸೋಜಾ, ತಾ.ಪಂ. ಮಾಜಿ ಸದಸ್ಯ ಕೆ.ಎಸ್.ಮಂಜುನಾಥ್, ಮಾಜಿ ಅಧ್ಯಕ್ಷರಾದ ಪಿ.ಆರ್.ಸುನಿಲ್ ಕುಮಾರ್, ಶಿವಮ್ಮ ಮಹೇಶ್, ಎಂ.ಎ.ಉಸ್ಮಾನ್, ಜಿನಾಸುದ್ದೀನ್, ಶಬ್ಬೀರ್, ಆಲಿಕುಟ್ಟಿ, ಜಿ.ಪಂ.ಮಾಜಿ ಸದಸ್ಯೆ ಭಾನುಮತಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫೆಲ್ಸಿ ಡೆನ್ನಿಸ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ರಜಾಕ್, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಹಕೀಂ, ಶ್ರೀರಾಮ್, ಗ್ರಾಮಸ್ಥರಾದ ಫೈರೋಜ್, ಸೂಪಿ, ಪ್ರಶಾಂತ್, ಕೆ.ಡಿ.ರಾಮಯ್ಯ, ಬಿ.ಕೆ.ಮೋಹನ್, ಶಬ್ಬೀರ್, ಎಚ್.ಎಸ್.ಮುತ್ತಪ್ಪ, ಇಬ್ರಾಹಿಂ, ಡೇವಿಡ್ , ರಜಾಕ್, ಸಂತೆ ವ್ಯಾಪಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net