ಅದ್ದೂರಿಯ ಹನುಮ ಜಯಂತಿಗೆ ಭರದ ಸಿದ್ಧತೆ

ಕಳೆದ ವರ್ಷ ಉತ್ಸವದ ಪ್ರಮುಖ ಆಕರ್ಷಣೆ ಆಗಿದ್ದ ಕಲಾಕೃತಿ
ಕಳೆದ ವರ್ಷ ಉತ್ಸವದ ಪ್ರಮುಖ ಆಕರ್ಷಣೆ ಆಗಿದ್ದ ಕಲಾಕೃತಿ
Published on

ಪ್ರಮುಖ ಮುಖ್ಯಾಂಶಗಳು

  • ಮಡಿಕೇರಿ ದಸರಾ ಮಾದರಿಯಲ್ಲಿ ಆಚರಣೆ
  • ಡಿ.2ಕ್ಕೆ ಹನುಮ ಜಯಂತಿ ಶೋಭಾಯಾತ್ರೆ
  • ಮೆರವಣಿಗೆಯಲ್ಲಿ 10 ಮಂಟಪಗಳು ಭಾಗಿ
ಮಡಿಕೇರಿ:
ಜಿಲ್ಲೆಯ ವಾಣಿಜ್ಯ ನಗರಿ ಹೆಗ್ಗಳಿಕೆಯ ಕುಶಾಲನಗರದಲ್ಲಿ ಈ ವರ್ಷದ ಹನುಮ ಜಯಂತಿಗೆ ಭರದ ಸಿದ್ಧತೆ ನಡೆದಿದೆ. ಮಡಿಕೇರಿ ದಸರಾ ಮಾದರಿಯಲ್ಲಿ ಅಷ್ಟೇ ಅದ್ದೂರಿಯ ಆಚರಣೆಯಾಗಿ ಬದಲಾಗಿರುವ ಈ ಕಾರ್ಯಕ್ರಮ ಪ್ರಸಕ್ತ ವರ್ಷ ಮಂಗಳವಾರ (ಡಿ.2) ನಡೆಯಲಿದ್ದು ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ. ಅತ್ಯುತ್ತಮ ಮಂಟಪಗಳಿಗೆ ಬಹುಮಾನವೂ ಇರುವುದರಿಂದ ಒಂದಕ್ಕಿAದ ಒಂದು ಆಕರ್ಷಕವಾಗಿ ರೂಪಿಸಲು ಎಲ್ಲಾ 10 ಮಂಟಪ ಸಮಿತಿಗಳು ಪೈಪೋಟಿ ಮೇಲೆ ಕಾರ್ಯೋನ್ಮುಖವಾಗಿವೆ.
2020ರಿಂದ ಈಚೆಗೆ ಕುಶಾಲನಗರದಲ್ಲಿ ಹನುಮ ಜಯಂತಿ ಆಚರಣೆ ಬೇರೆಯದ್ದೇ ಆದ ಆಯಾಮ ಪಡೆದುಕೊಳ್ಳುತ್ತಾ ಬಂದಿದೆ. ಆರಂಭದ ವರ್ಷಗಳಲ್ಲಿ ಇಲ್ಲಿನ ರಥಬೀದಿಯಲ್ಲಿ ಇರುವ ಶ್ರೀ ಆಂಜನೇಯ ದೇವಾಲಯದಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿAದ ಆಚರಿಸಿ ಶ್ರೀ ಅಂಜನೇಯ ಸೇವಾ ಸಮಿತಿ ಮತ್ತು ಶ್ರೀ ರಾಮಂಜನೇಯ ಯುವಕ ಸಂಘದ ವತಿಯಿಂದ ಅಂದೇ ಸಂಜೆ ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಗುತ್ತಿತ್ತು. ನಾದಸ್ವರ ಸೇರಿದಂತೆ ಮಂಗಳವಾದ್ಯಗಳೊAದಿಗೆ ನಡೆಸಲಾಗುತ್ತಿದ್ದ ಈ ಮೆರವಣಿಗೆ ವೇಳೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಂಜನೇಯನ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದರು.
ಬದಲಾದ ಹನುಮ ಜಯಂತಿ ಆಚರಣೆಯಲ್ಲಿ ಈಗ ಉತ್ಸವ ಮೂರ್ತಿಯ ಮೆರವಣಿಗೆ ಜತೆಯಲ್ಲಿ ಪಟ್ಟಣ ವ್ಯಾಪ್ತಿಯ ಇತರ ದೇವಾಲಯಗಳಿಂದಲೂ ಮಂಟಪಗಳು ಹೊರಟು ಪಟ್ಟಣದ ಮುಖ್ಯ ಬೀದಿಗೆ ಆಗಮಿಸಿ ಎಲ್ಲಾ ಮಂಟಪಗಳು ಒಟ್ಟಿಗೆ ಮೆರವಣಿಗೆ ನಡೆಸುವ ಸಂಪ್ರದಾಯ ಶುರುವಾಗಿದೆ. ಮಡಿಕೇರಿ ದಸರಾ ಮಾದರಿಯ ಆಚರಣೆ ಇಲ್ಲಿಯೂ ನಡೆಯುತ್ತಿದ್ದು, ಝಗಮಗಿಸುವ ವಿದ್ಯುತ್ ದೀಪಗಳು, ಅಬ್ಬರದ ಡಿಜೆ ಸಂಗೀತ, ಧ್ವನಿ ಮತ್ತು ಚಲನೆಗಳ ಬೃಹತ್ ಕಲಾಕೃತಿಗಳು ಕುಶಾಲನಗರದಲ್ಲೂ ಆಕರ್ಷಣೆ ಪಡೆದುಕೊಂಡಿವೆ.
ಕುಶಾಲನಗರ ಹನುಮ ಜಯಂತಿಯಲ್ಲಿ ಭಾಗವಹಿಸುವ ಮಂಟಪಗಳ ಸಂಖ್ಯೆ ಈಗ 10ಕ್ಕೆ ತಲುಪಿದೆ. ಶ್ರೀ ಆಂಜನೇಯ ದೇವಾಲಯ ಸಮಿತಿಯ ಮಂಟಪದ ಜತೆಗೆ ಹೆಚ್‌ಆರ್‌ಪಿ ಕಾಲೋನಿಯ ರಾಮ ಮಂದಿರ, ಗುಡ್ಡೆಹೊಸೂರು, ಮಾದಾಪಟ್ಟಣ, ಬೈಚನಹಳ್ಳಿ, ಗೋಪಾಲ ಸರ್ಕಲ್, ಕೂಡಿಗೆ, ಮುಳ್ಳುಸೋಗೆ, ಚಿಕ್ಕತ್ತೂರು ಮತ್ತು ಹಾರಂಗಿಯಿAದ ಮಂಟಪಗಳು ಕುಶಾಲನಗರ ಪಟ್ಟಣಕ್ಕೆ ಆಗಮಿಸಲಿವೆ. ಕೊಡಗು-ಮೈಸೂರು ಗಡಿಯಲ್ಲಿರುವ ಕೊಪ್ಪದಿಂದಲೂ ಆಗಮಿಸುವ ಮಂಟಪ ಮೆರವಣಿಗೆಗೆ ಸೇರಿಕೊಳ್ಳಲಿದೆ.
ಕಳೆದ ವರ್ಷ ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ನಡೆದ್ದ ಉತ್ಸವಕ್ಕೆ ಈ ಬಾರಿ ಮತ್ತಷ್ಟು ಹೆಚ್ಚಿನ ಮೊತ್ತದ ಬಜೆಟ್ ಅನ್ನು ಆಯೋಜಕರು ಅಂದಾಜು ಮಾಡಿದ್ದಾರೆ. ಅದ್ದೂರಿತನ ಹೆಚ್ಚಿಸುವುದಕ್ಕೂ ಯೋಜನೆ ರೂಪಿಸಲಾಗಿದೆ. ಹಿಂದಿನ ವರ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆಯನ್ನೂ ಇಟ್ಟುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ದಶಮಂಟಪ ಸಮಿತಿ ನೇತೃತ್ವದಲ್ಲಿ ಹಲವು ಸುತ್ತಿನ ಪೂರ್ವಭಾವಿ ಸಿದ್ಧತಾ ಸಭೆಗಳನ್ನು ನಡೆಸಲಾಗಿದೆ. ಮೆರವಣಿಗೆಯಲ್ಲಿ ಭಾಗವಹಿಸುವ ಮಂಟಪಗಳ ಸಮಿತಿಗಳ ಜತೆಗೂ ಹನುಮ ಜಯಂತಿ ದಶಮಂಟಪ ಸಮಿತಿ ಪದಾಧಿಕಾರಿಗಳು ಸಭೆಗಳನ್ನು ಮಾಡಿದ್ದಾರೆ. ಮಂಟಪ ಮತ್ತು ಮೆರವಣಿಗೆ ರೂಪುರೇಷೆಯ ಬಗ್ಗೆ ಚರ್ಚೆಗಳನ್ನೂ ನಡೆಸಲಾಗಿದೆ.
ಮಡಿಕೇರಿ ದಸರಾ ಎಂದ ಕೂಡಲೇ ಝಗಮಗಿಸುವ ವಿದ್ಯುತ್ ದೀಪಗಳು, ಅಬ್ಬರದ ಡಿಜೆ ಸಂಗೀತ, ಧ್ವನಿ ಮತ್ತು ಚಲನೆಗಳ ಮೂಲಕ ಜೀವ ಪಡೆದುಕೊಳ್ಳುವ ದೇವ-ದಾನವರ ಬೃಹತ್ ಕಲಾಕೃತಿಗಳು, ಕಿಕ್ಕಿರಿದು ಸೇರುವ ಜನಸಂದಣಿ ಕಣ್ಣು ಮುಂದೆ ಬರುತ್ತದೆ. ಇಂಥದ್ದೇ ವಾತಾವರಣ ಕಳೆದ ಕೆಲವು ವರ್ಷಗಳಿಂದ ಕುಶಾಲನಗರದಲ್ಲೂ ಹನುಮ ಜಯಂತಿಯ ದಿನ ಕಂಡು ಬರುತ್ತಿದೆ. ಇಲ್ಲಿಯ ಹನುಮ ಜಯಂತಿ ಆಚರಣೆ ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಿದ್ದು, ಹೆಚ್ಚು ಹೆಚ್ಚು ಜನರನ್ನು ಸೆಳೆಯುತ್ತಿದೆ. ಅದರಲ್ಲೂ ಯುವ ಜನರ ಪ್ರಮುಖ ಆಕರ್ಷಣೀಯ ಉತ್ಸವವಾಗಿ ಬೆಳೆದು ಬರುತ್ತಿದೆ. ಶಿಸ್ತುಬದ್ಧ ಕಾರ್ಯಕ್ರಮ ಎನ್ನುವ ಹೆಗ್ಗಳಿಕೆಯೂ ಕುಶಾಲನಗರ ಹನುಮ ಜಯಂತಿ ಕಾರ್ಯಕ್ರಮಕ್ಕಿದೆ. ಮೆರವಣಿಗೆ ವೇಳೆ ಮಹಿಳೆಯರು ಮತ್ತು ಯುವತಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಈ ಹೆಸರನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹನುಮ ಜಯಂತಿ ದಶಮಂಟಪ ಸಮಿತಿ ವಿಶೇಷ ಮುತುವರ್ಜಿ ವಹಿಸಿದೆ.
ಮಂಟಪಗಳ ಪ್ರದರ್ಶನವನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಶ್ರೀ ಗಣಪತಿ ದೇವಾಲಯದ ಎದುರು ಏರ್ಪಡಿಸಲಾಗುತ್ತದೆ. ಆದರೆ ಎಲ್ಲರಿಗೂ ಇಲ್ಲಿ ಪ್ರದರ್ಶನ ವೀಕ್ಷಣೆ ಸಾಧ್ಯವಾಗುವುದಿಲ್ಲ ಎನ್ನುವ ಕೊರಗು ಇದ್ದು, ಜಾತ್ರೆ ಮೈದಾನದಲ್ಲಿ ಪ್ರದರ್ಶನ ಏರ್ಪಡಿಸುವಂತೆ ಸಲಹೆಗಳು ಕೇಳಿ ಬಂದಿದ್ದವು. ಈ ವರ್ಷ ಅಲ್ಲಿ ಜಾತ್ರೆ ನಡೆಯುತ್ತಿರುವುದರಿಂದ ಮುಂದಿನ ಬಾರಿ ಈ ಬಗ್ಗೆ ಚಿಂತನೆ ಹರಿಸುವುದಾಗಿ ದಶಮಂಟಪ ಸಮಿತಿ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ತಿಳಿಸಿದ್ದಾರೆ.
ಈ ವರ್ಷ ಗಣೇಶೋತ್ಸವ ಮತ್ತು ಮಡಿಕೇರಿ ದಸರಾ ಸಂದರ್ಭದಲ್ಲಿ ಡಿಜೆ ಬಳಕೆ ನಿರ್ಬಂಧ ಜಿಲ್ಲೆಯಲ್ಲಿ ದೊಡ್ಡ ಸದ್ದು ಮಾಡಿತ್ತು. ಕುಶಾಲನಗರ ಹನುಮ ಜಯಂತಿಯಲ್ಲೂ ಡಿಜೆ ಪ್ರಮುಖ ಆಕರ್ಷಣೆಯಾಗಿದೆ. ಕಲಾಕೃತಿಗಳ ಮೂಲಕ ಪೌರಾಣಿಕ ಕಥೆಗಳನ್ನು ಪ್ರಸ್ತುತಪಡಿಸುವ ವೇಳೆ ದೇವ-ದಾನವರ ಪ್ರತಿಕೃತಿಗಳಿಗೆ ಜೀವ ತುಂಬುವುದು ಇದೇ ಡಿಜೆ ಶಬ್ದ. ಹಾಗಾಗಿ ಡಿಜೆ ಬಳಕೆ ಮೇಲೆ ನಿರ್ಬಂಧ ವಿಧಿಸಿದರೆ ಹನುಮ ಜಯಂತಿ ಆಕರ್ಷಣೆ ಕಳೆದುಕೊಳ್ಳಬಹುದು ಎನ್ನುವುದು ಉತ್ಸವದಲ್ಲಿ ಪಾಲ್ಗೊಳ್ಳುವ ಮಂಟಪ ಸಮಿತಿಗಳ ಪ್ರಮುಖರ ಅಭಿಪ್ರಾಯ. ಆದರೆ ಕಾನೂನು ಗೌರವಿಸಲೇ ಬೇಕಿರುವುದರಿಂದ ಪೊಲೀಸ್ ಇಲಾಖೆ ಸೂಚನೆಗಳ ಪ್ರಕಾರ ನಡೆದುಕೊಳ್ಳಲಾಗುವುದು. ಯಾರಿಗೂ ಸಮಸ್ಯೆ ಆಗದ ರೀತಿಯಲ್ಲಿ ಉತ್ಸವದ ಮೆರವಣಿಗೆ ಆಯೋಜಿಸಲಾಗುವುದು ಎಂದು ದಶಮಂಟಪ ಸಮಿತಿ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹನುಮ ಜಯಂತಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮಂಟಪಗಳ ಮಧ್ಯೆ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರಥಮ ಸ್ಥಾನ ಪಡೆಯುವ ಮಂಟಪಕ್ಕೆ 50 ಸಾವಿರ ರೂ. ನಗದು ಬಹುಮಾನ ಸಿಗಲಿದೆ. ದ್ವಿತೀಯ ಬಹುಮಾನವಾಗಿ 40 ಸಾವಿರ, ತೃತೀಯ ಬಹುಮಾನ 30 ಸಾವಿರ ನಿಗದಿಪಡಿಸಲಾಗಿದೆ. ಉಳಿದಂತೆ ಪಾಲ್ಗೊಳ್ಳುವ ಇತರ ಮಂಟಪಗಳಿಗೆ ತಲಾ 10 ಸಾವಿರ ರೂ. ನಗದನ್ನು ಪ್ರೋತ್ಸಾಹ ಬಹುಮಾನವಾಗಿ ಕೊಡಲಾಗುತ್ತದೆ. ಬಹುಮಾನಗಳ ಜತೆಗೆ ಸ್ಮರಣಿಕೆಗಳಲ್ಲೂ ನೀಡಲಾಗುತ್ತದೆ. ಹಾಗಾಗಿ ಒಂದಕ್ಕಿAತ ಒಂದು ವಿಭಿನ್ನ ಮಂಟಪಗಳು ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಮಂಟಪಗಳಿಗೆ ಸಂಬAಧಿಸಿದ ದೇವಾಲಯ ಸಮಿತಿಗಳೂ ತಮ್ಮ ಮಂಟಪಗಳಲ್ಲಿ ವಿಭಿನ್ನತೆ ತೋರಿಸಲು ಪ್ರಯತ್ನ ನಡೆಸಿದ್ದಾರೆ.
"

ಕುಶಾಲನಗರ ಹನುಮ ಜಯಂತಿ ಆಚರಣೆ ವರ್ಷದಿಂದ ವರ್ಷಕ್ಕೆ ಆಕರ್ಷಣೆ ಪಡೆದುಕೊಳ್ಳುತ್ತಿದೆ. ಈ ಉತ್ಸವ ನೋಡಲು ಆಗಮಿಸುವವರ ಸಂಖ್ಯೆಯಲ್ಲೂ ಏರಿಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಶಾಂತಿಯುತವಾಗಿ ಮತ್ತು ಯಾವುದೇ ಗೊಂದಲಗಳು ಇಲ್ಲದೇ ಕಾರ್ಯಕ್ರಮ ನಡೆಸುವ ಸಲುವಾಗಿ ಅನೇಕ ಸಭೆಗಳನ್ನು ನಡೆಸಿ ಚರ್ಚಿಸಲಾಗಿದೆ. ಡಿಜೆ ಬಳಕೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಮಂಟಪಗಳು ಸಾಗುವ ಮಾರ್ಗದ ದುರಸ್ತಿ, ಮರಗಳ ರಂಬೆ ತೆರವು ಮತ್ತಿತರ ಕೆಲಸಗಳನ್ನು ಈಗಾಗಲೇ ಮಾಡಲಾಗಿದೆ.

"

ಕುಶಾಲನಗರದಲ್ಲಿ ಹನುಮ ಜಯಂತಿ ವಿಜೃಂಭಣೆಯಿAದ ಆಗಬೇಕು ಎನ್ನುವ ನಿಟ್ಟಿನಲ್ಲಿ ಎಲ್ಲಾ ಸಹಕಾರ ಕೊಡಲಾಗುತ್ತಿದೆ. ಕಾರ್ಯಕ್ರಮಕ್ಕೆ ಹೆಚ್ಚು ಹೆಚ್ಚು ಜನ ಸೇರುತ್ತಿದ್ದು ಶಾಂತಿಯುತವಾಗಿಯೂ ನಡೆಯಬೇಕಿದೆ. ಈ ನಿಟ್ಟಿನಲ್ಲಿ ಹನುಮ ಜಯಂತಿ ದಶಮಂಟಪ ಸಮಿತಿ ವತಿಯಿಂದ ಆಯೋಜಿಸಿದ್ದ ಪೂರ್ವಸಿದ್ಧತಾ ಸಭೆಗಳಲ್ಲಿ ಪಾಲ್ಗೊಂಡು ಅಗತ್ಯ ಸಲಹೆಗಳನ್ನೂ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net