ಶ್ರೀ ದೊಡ್ಡಮ್ಮ ಮತ್ತು ಚಿಕ್ಕಮ್ಮ ದೇವಿಯ ವಾರ್ಷಿಕ ಹಬ್ಬಕ್ಕೆ ಸಿದ್ಧತೆ

ವಾರ್ಷಿಕ ಹಬ್ಬ ಮತ್ತು ಜಾತ್ರೆ ಹಿನ್ನೆಲೆಯಲ್ಲಿ ತೊರೆನೂರು ವಿರಕ್ತ ಮಠದಲ್ಲಿರುವ ಗ್ರಾಮದೇವತೆ ದೊಡ್ಡಮ್ಮ ದೇವಿಯ ದೇವಸ್ಥಾನದಲ್ಲಿ ಸಿದ್ಧತಾ ಕಾರ್ಯ ನಡೆಯುತ್ತಿದೆ.
ವಾರ್ಷಿಕ ಹಬ್ಬ ಮತ್ತು ಜಾತ್ರೆ ಹಿನ್ನೆಲೆಯಲ್ಲಿ ತೊರೆನೂರು ವಿರಕ್ತ ಮಠದಲ್ಲಿರುವ ಗ್ರಾಮದೇವತೆ ದೊಡ್ಡಮ್ಮ ದೇವಿಯ ದೇವಸ್ಥಾನದಲ್ಲಿ ಸಿದ್ಧತಾ ಕಾರ್ಯ ನಡೆಯುತ್ತಿದೆ.
Published on
ಕುಶಾಲನಗರ:
ಕುಶಾಲನಗರ ತಾಲೂಕು ತೊರೆನೂರು ಗ್ರಾಮದಲ್ಲಿ ಶುಕ್ರವಾರ (ಮೇ 22) ಗ್ರಾಮ ದೇವತೆ ಶ್ರೀ ದೊಡ್ಡಮ್ಮ ಮತ್ತು ಚಿಕ್ಕಮ್ಮ ದೇವಿಯ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವಕ್ಕೆ ಶ್ರೀ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಹಾಗೂ ಗ್ರಾಮ ದೇವತಾ ಸಮಿತಿ ವತಿಯಿಂದ ಸಿದ್ಧತಾ ಕಾರ್ಯ ಕೈಗೊಳ್ಳಲಾಗಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಬಸವೇಶ್ವರ ದೇವಸ್ಥಾನ, ಮಠದ ಆವರಣದಲ್ಲಿನ ದೇವಿನ ಬನ ಸೇರಿದಂತೆ ಗ್ರಾಮವನ್ನು ಹಸಿರು ತಳಿರು- ತೋರಣ ಹಾಗೂ ವಿದ್ಯುದ್ದೀಪಗಳಿಂದ ಅಲಂಕರಿಸಲಾಗುತ್ತಿದೆ. ಗ್ರಾಮದಲ್ಲಿ ಗ್ರಾಮಸ್ಥರು, ಹೊರಗಿನಿಂದ ಬರುವ ನೆಂಟರಿಷ್ಟರು ಹಾಗೂ ಸ್ನೇಹಿತರಿಗೆ ವಿವಿಧ ಭಕ್ಷ್ಯ ಭೋಜನಗಳನ್ನು ನೀಡಿ ಆತಿಥ್ಯ ನೀಡುವುದು ಗ್ರಾಮೀಣ ಸೊಗಡಿನ ಪ್ರತೀಕವಾಗಿದೆ. ಕೊಡಗು ಹಾಗೂ ಹಾಸನ ಜಿಲ್ಲೆಯ ಗಡಿ ಗ್ರಾಮದ ತೊರೆನೂರು ಗ್ರಾಮದಲ್ಲಿ ನಡೆಯುವ ಗ್ರಾಮೀಣ ಭಾಗದ ದೇವಿಯ ಉತ್ಸವ ಹಾಗೂ ಜಾತ್ರೆಯಲ್ಲಿ ಮೈಸೂರು, ಹಾಸನ ಹಾಗೂ ಕೊಡಗು ಜಿಲ್ಲೆಯ ಗಡಿ ಗ್ರಾಮಗಳ ಜನರು ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಕ್ತಾರು ಪಾಲ್ಗೊಳ್ಳುವರು. ಅಂದು ರಾತ್ರಿ 10 ಗಂಟೆಗೆ ಗ್ರಾಮದ ಬಸವೇಶ್ವರ ದೇವಸ್ಥಾನ ಬಳಿಯಿಂದ ದೇವಿಯ ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದ ನಂತರ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ದೇವರ
ಉತ್ಸವದೊಂದಿಗೆ ಹರಕೆ ಹೊತ್ತ ಭಕ್ತಾದಿಗಳು ತಮಟೆ ಮತ್ತು ಮಂಗಳವಾದ್ಯದೊAದಿಗೆ ತೊರೆನೂರು ವಿರಕ್ತ ಮಠದ ಆವರಣದಲ್ಲಿರುವ ಪವಿತ್ರ ಬನದಲ್ಲಿನ ದೇವಸ್ಥಾನದ ಅಂಗಳಕ್ಕೆ ತೆರಳುವರು. ವಿರಕ್ತ ಮಠದ ಪವಿತ್ರ ಬನಕ್ಕೆ ತೆರಳುವ ಭಕ್ತಾದಿಗಳು ಬೆಂಕಿ ಕೊಂಡ ಹಾಯ್ದು ದೇವಿಯ ದರ್ಶನ ಪಡೆಯಲಿದ್ದಾರೆ.
ಪೂಜಾ ವಿಧಿ ವಿಧಾನದ ನಂತರ ಪವಿತ್ರ ಬನದಲ್ಲಿ ಉಯ್ಯಾಲೆ ಉತ್ಸವ ನಡೆಯಲಿದೆ. ಮಾರನೆಯ ದಿನವಾದ ಶನಿವಾರ (ಮೇ23) ತೊರೆನೂರು ಗ್ರಾಮದ ಶಾಲಾ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಸಂಜೆ 7.30 ಕ್ಕೆ ಸಂಗೀತ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಟಿ.ಬಿ. ಜಗದೀಶ್ ಮತ್ತು ಕಾರ್ಯದರ್ಶಿ ಟಿ.ಎಲ್.ಮಹೇಶ್ ಕುಮಾರ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net