ಸಾಂಸ್ಕೃತಿಕ ಸ್ಪರ್ಧೆಗಳಿಗೆ ಪಾಲಕರ ಪ್ರೋತ್ಸಾಹ ಅಗತ್ಯ

ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ  ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಗಮನ ಸೆಳೆಯಿತು.
ಮಾದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಗಮನ ಸೆಳೆಯಿತು.
Published on
ಸುಂಟಿಕೊಪ್ಪ: ಶಾಲಾ ಶಿಕ್ಷಣ ಇಲಾಖೆ, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಮಾದಾಪುರ ಕ್ಲಸ್ಟರ್ ಕೇಂದ್ರದ ವತಿಯಿಂದ ಮಾದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸಾಂಸ್ಕೃತಿಕ ಹಾಗೂ ಕಲೋತ್ಸವ ಸ್ಪರ್ಧೆ ಆಯೋಜಿಸಲಾಗಿತ್ತು.
ವಿವಿಧ ವೇಷಭೂಷಣ ತೊಟ್ಟು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರತಿಭೆ ಅನಾವರಣಗೊಳಿಸುವ ಮೂಲಕ ವಿದ್ಯಾರ್ಥಿಗಳು ಪ್ರೇಕ್ಷಕರ ಗಮನ ಸೆಳೆದರು.
ಪ್ರತಿಭಾ ಕಾರಂಜಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೊನ್ನಣ್ಣ, ಮಕ್ಕಳ ಇಂತಹ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶಿಕ್ಷಕರ ಜತೆ ಪಾಲಕರೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಲಸ್ಟರ್ ಸಿಆರ್‌ಪಿ ಟಿ.ಈ. ಮಂಜುನಾಥ್, ಮಕ್ಕಳ ಕಲಾ ಪ್ರತಿಭೆ ಅನಾವರಣಗೊಳ್ಳಲು ಇಂತಹ ಸ್ಪರ್ಧೆಗಳು ಉತ್ತಮ ವೇದಿಕೆ ಒದಗಿಸುತ್ತವೆ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಎ.ಉಷಾ ಮತ್ತು ಪಿಡಿಒ ರವಿ ಮಾತನಾಡಿದರು. ಶಿಕ್ಷಕಿ ಜ್ಞಾನೇಶ್ವರಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಎಚ್.ಎಸ್.ಉಮಾದೇವಿ, ಸಿಆರ್‌ಪಿಗಳಾದ ಟಿ.ಈ.ವಿಶ್ವನಾಥ್, ಶಿಕ್ಷಕರಾದ ಎ.ಎಂ.ಭರತ್, ಬಿಪಿನ್, ಎಸ್.ಆರ್.ಶಿವಲಿಂಗ ಇತರರು ಇದ್ದರು.
ಛದ್ಮವೇಷ ಸ್ಪರ್ಧೆ, ರಂಗೋಲಿ, ಚಿತ್ರಕಲೆ, ಅಭಿನಯ, ಕವನ ವಾಚನ, ಕವ್ವಾಲಿ, ಗಝಲ್, ಧಾರ್ಮಿಕ ಪಠಣ, ಜಾನಪದ ಗೀತೆ, ಆಶುಭಾಷಣ, ಪ್ರಬಂಧ, ಭಾಷಣ, ಚರ್ಚಾಸ್ಪರ್ಧೆ ಮತ್ತು ರಸಪ್ರಶ್ನೆ, ಜಾನಪದ ನೃತ್ಯ ಹಾಗೂ ಭರತ ನಾಟ್ಯ ಸ್ಪರ್ಧೆಗಳಲ್ಲಿ ಮಕ್ಕಳು ಉತ್ತಮ ಪ್ರದರ್ಶನ ನೀಡಿದರು. ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ಮಕ್ಕಳು ಮಣ್ಣಿನಿಂದ ವಿವಿಧ ಕಲಾಕೃತಿಗಳನ್ನು ರಚಿಸಿ ಗಮನ ಸೆಳೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net